ಸಿಡ್ನಿ: ಆಸ್ಟ್ರೇಲಿಯಾ ವಿರುದ್ದ ಐದನೇ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AUS) ಸರಣಿಯ ಕೊನೆಯ ಪಂದ್ಯದ ಎರಡನೇ ದಿನ ಭಾರತ ತಂಡದ ವೇಗಿ ಪ್ರಸಿಧ್ ಕೃಷ್ಣ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಆಸ್ಟ್ರೇಲಿಯಾ ತಂಡವನ್ನು 181 ರನ್‌ಗಳಿಗೆ ಆಲ್‌ಔಟ್ ಮಾಡುವಲ್ಲಿ ಕನ್ನಡಿಗ ಪ್ರಮುಖ ಪಾತ್ರವಹಿಸಿದ್ದಾರೆ. ಎರಡನೇ ದಿನದಾಟದ ಬಳಿಕ ಮಾತನಾಡಿದ ಪ್ರಸಿಧ್ ಕೃಷ್ಣ, ತಮ್ಮ ಬೌಲಿಂಗ್ ಯಶಸ್ಸಿನ ಶ್ರೇಯವನ್ನು ಬೌಲಿಂಗ್ ಕೋಚ್ ಮೊರ್ನೆ ಮಾರ್ಕೆಲ್‌ಗೆ ಸಮರ್ಪಿಸಿದ್ದಾರೆ.
ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್, ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಮತ್ತು ಡೆಬ್ಯೂಟಂಟ್ ಬೇ ವೆಬ್‌ಸ್ಟರ್ ಅವರನ್ನು ಬಲಗೈ ವೇಗಿ ಔಟ್ ಮಾಡಿದ್ದರು.
Prasidh Krishna pulverises Alex Carey's middle stump! #AUSvIND | #DeliveredWithSpeed | NBN Australia pic.twitter.com/IVwz6wzrsd
— cricket.com.au (@cricketcomau) January 4, 2025
ನನ್ನ ಯಶಸ್ಸಿನ ಶ್ರೇಯ ಮಾರ್ಕೆಲ್‌ಗೆ ಸಲ್ಲಬೇಕು: ಪ್ರಸಿಧ್
ಎರಡನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರಸಿಧ್ ಕೃಷ್ಣ, “ನಾವು ಏನು ಮಾಡಬೇಕೆಂಬುದರ ಬಗ್ಗೆ ನಾನು ಮತ್ತು ಮಾರ್ಕೆಲ್ ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೇವೆ ಮತ್ತು ಸದ್ಯ ವಿಷಯಗಳು ಉತ್ತಮವಾಗಿ ನಡೆಯುತ್ತಿವೆ,” ಎಂದು ತಿಳಿಸಿದ್ದಾರೆ. ಕಳೆದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಪ್ರಸಿಧ್ ಕೃಷ್ಣ ಐದನೇ ಟೆಸ್ಟ್‌ನಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
“ಕೆಲವೊಮ್ಮೆ ಚೆಂಡು ಹೆಚ್ಚು ಪುಟಿದೇಳುತ್ತಿರಲಿಲ್ಲ, ಆದರೆ ಪಂದ್ಯದಲ್ಲಿನ ಬೌನ್ಸ್ ನಮಗೆ ಸಾಕಾಗಿತ್ತು. ಹಲವು ಬಾರಿ ಚೆಂಡು ಬ್ಯಾಟ್‌ನ ಹಂಚಿಗೆ ತಾಗಿರುವುದನ್ನು ನೀವು ನೋಡಿರಬಹುದು. ಹಾಗಾಗಿ ಸಾಧ್ಯವಾದಷ್ಟು ಬ್ಯಾಟ್ಸ್‌ಮನ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದೆ,” ಎಂದು ಕನ್ನಡಿಗ ಪ್ರಸಿಧ್ ಕೃಷ್ಣ ತಿಳಿಸಿದ್ದಾರೆ.
Plan and Prasidh Krishna shall deliver! 🤌pic.twitter.com/ILEDeIzfcB
— Gujarat Titans (@gujarat_titans) January 4, 2025
“ಭೋಜನ ವಿರಾಮ ಮುಗಿಸಿಕೊಂಡ ಬಳಿಕ ಮೈದಾನಕ್ಕೆ ಆಗಮಿಸಿದ ನಾನು, ಈ ಹಿಂದೆ ಎಲ್ಲಿ ಬೌಲ್ ಮಾಡಿದ್ದೇನೆಂದು ಅರ್ಥವಾಯಿತು. ವಿಶ್ಲೇಷಕರ ಜೊತೆ ಕುಳಿತು ಚರ್ಚೆ ನಡೆಸಿದ್ದೇನೆ. ನನ್ನ ಉಲ್ಲೇಖದ ಅಂಶ ಯಾವುದು ಎಂಬುದರ ಕುರಿತು ನಾವು ಉತ್ತಮವಾದ ಕಲ್ಪನೆಯನ್ನು ಹೊಂದಿದ್ದೇವೆ. ಮುಂದೆ ಬೌಲ್ ಮಾಡಲು ಬಂದಾಗ ನಾವು ಚರ್ಚೆ ನಡೆಸಿದ ಅಂಶಗಳು ನೆರವಾದವು,” ಎಂದು ಕನ್ನಡಿಗ ಪ್ರಸಿಧ್ ಕೃಷ್ಣ ಹೇಳಿದ್ದಾರೆ.
ಕರ್ನಾಟಕ ಪರ ರೆಡ್ ಬಾಲ್‌ನಲ್ಲಿ ಆಡಿದ್ದು ನೆರವಾಗಿದೆ ಎಂದ ಕೃಷ್ಣ
“ಕರ್ನಾಟಕ ತಂಡದ ಪರ ಹೊಸ ಚೆಂಡಿನಲ್ಲಿ ಬೌಲ್ ಮಾಡಿರುವುದು ನನಗೆ ತುಂಬಾ ನೆರವಾಗಿದೆ. ಇದರಿಂದ ತುಂಬಾ ಕಲಿತುಕೊಂಡಿದ್ದೇನೆ. ಇದರ ಸಹಾಯದಿಂದ ಭಾರತದ ಪರವೂ ಹೊಸ ಚೆಂಡಿನಲ್ಲಿ ಬೌಲ್ ಮಾಡಲು ಸಾಧ್ಯವಾಯಿತು. ಇಲ್ಲಿಗೆ ಬಂದ ಬಳಿಕ ಚೆಂಡನ್ನು ಬದಲಿಸಲಾಗಿದೆ. ಆದರೂ ತಂಡದ ನಿಯಂತ್ರಣಕ್ಕೆ ನೆರವಾಗುವಂತೆ ಬೌಲ್ ಮಾಡಲು ಪ್ರಯತ್ನಿಸಿದ್ದೇನೆ. ಇದರ ಜೊತೆಗೆ ಲೈನ್ ಅಂಡ್ ಲೆನ್ತ್ ಮೂಲಕ ಸ್ಥಿರವಾಗಿ ಬೌಲ್ ಮಾಡಲು ಪ್ರಯತ್ನಿಸಿದ್ದೇನೆ,” ಎಂದು ಯುವ ವೇಗಿ ತಿಳಿಸಿದ್ದಾರೆ.
“ಆಸ್ಟ್ರೇಲಿಯಾದಲ್ಲಿ ಬೌಲ್ ಮಾಡುವಾಗ ನನ್ನಲ್ಲಿ ಅಷ್ಟೊಂದು ಆತ್ಮ ವಿಶ್ವಾಸ ಇರಲಿಲ್ಲ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ರೆಡ್ ಬಾಲ್‌ನಲ್ಲಿ ಬೌಲ್ ಮಾಡಿದ್ದು ಇಲ್ಲಿ ನೆರವಿಗೆ ಬಂದಿದೆ. ಆರಂಭದಲ್ಲಿ ನನ್ನ ಕೈಯಲ್ಲಿ ಚೆಂಡು ಇದ್ದಾಗ ಸ್ವಲ್ಪ ನರ್ವಸ್ ಇತ್ತು. ಆದರೆ, ಯಾವುದು ಉತ್ತಮ ಎಂಬುದನ್ನು ಚರ್ಚೆ ನಡೆಸಲು ನಮ್ಮ ತಂಡದಲ್ಲಿ ಜನರಿದ್ದಾರೆ,” ಎಂದು ಪ್ರಸಿಧ್ ಕೃಷ್ಣ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ಭಾರತಕ್ಕೆ 145 ರನ್ ಮುನ್ನಡೆ, ಸಿಡ್ನಿ ಟೆಸ್ಟ್‌ನಲ್ಲಿ ಅತ್ಯಂತ ಯಶಸ್ವಿ ರನ್ ಚೇಸ್ ಎಷ್ಟು?