Wednesday, 25th December 2024

IND vs AUS-ʻಮೊದಲ ಅರ್ಧಗಂಟೆಗೆ ಗೌರವ ಕೊಡಿʼ-ಔಟ್‌ ಆಫ್‌ ಫಾರ್ಮ್‌ ರಿಷಭ್‌ ಪಂತ್‌ಗೆ ಸುನೀಲ್‌ ಗವಾಸ್ಕರ್‌ ಸಲಹೆ!

IND vs AUS: "Respect the first half an hour"-Sunil Gavaskar's advice for Rishabh Pant ahead of BGT 2024-25 4th Test

ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ (IND vs AUS) ಸರಣಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಮಹತ್ವದ ಸಲಹೆ ನೀಡಿದ್ದಾರೆ. ರಿಷಭ್‌ ಪಂತ್‌ ಪ್ರಸಕ್ತ ಸರಣಿಯಲ್ಲಿ ಆಡಿದ ಮೂರು ಟೆಸ್ಟ್‌ ಪಂದ್ಯಗಳ ಐದು ಇನಿಂಗ್ಸ್‌ಗಳಿಂದ ಗಳಿಸಿರುವುದು ಕೇವಲ 96 ರನ್‌ಗಳು ಮಾತ್ರ. ಆ ಮೂಲಕ ಟೆಸ್ಟ್‌ ಸರಣಿಯಲ್ಲಿ ತೋರಿದ್ದ ಬ್ಯಾಟಿಂಗ್‌ ಪ್ರದರ್ಶನವನ್ನು ಮುಂದುವರಿಸುವಲ್ಲಿ ಎಡಗೈ ಬ್ಯಾಟ್ಸ್‌ಮನ್‌ ವಿಫಲರಾಗಿದ್ದಾರೆ.

ಡಿಸೆಂಬರ್‌ 26 ರಂದು ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ ನಿಮಿತ್ತ ಈ ಪಂದ್ಯ ಭಾರತ ತಂಡದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಆದರೆ, ಭಾರತ ತಂಡದಲ್ಲಿ ಹಿರಿಯ ಆಟಗಾರರು ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದಾರೆ. ಅದರಂತೆ ರಿಷಭ್‌ ಪಂತ್‌ ಕೂಡ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ಗೆ ಫಾರ್ಮ್‌ ಕಂಡುಕೊಳ್ಳಲು ಸುನೀಲ್‌ ಗವಾಸ್ಕರ್‌ ಮಹತ್ವದ ಸಲಹೆಯನ್ನು ನೀಡಿದ್ದಾರೆ.

ರಿಷಭ್‌ ಪಂತ್‌ಗೆ ಗವಾಸ್ಕರ್‌ ಸಲಹೆ

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, “ಎಲ್ಲರೂ ಮಾಡುತ್ತಿರುವ ತಪ್ಪನ್ನು ರಿಷಭ್‌ ಪಂತ್‌ ಮಾಡುತ್ತಿದ್ದಾರೆ. ಕ್ರೀಸ್‌ಗೆ ಹೋದ ಬಳಿಕ ಮೊದಲ ಅರ್ಧಗಂಟೆಯ ಸಮಯವನ್ನು ಅವರು ಗೌರವ ಕೊಡಬೇಕು. ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ತೆರಳಿದರೂ ಅವರು ಆರಂಭದಲ್ಲಿ ಎಲ್ಲಾ ಎಸೆತಗಳನ್ನು ಗೌರವಿಸಬೇಕು. ಅಂದ ಹಾಗೆ ಭಾರತ ತಂಡ 525 ರನ್‌ಗಳನ್ನು ಗಳಿಸಿದರೂ ಕೂಡ ಪಂತ್‌ ಇದೇ ಮನಸ್ಥಿತಿಯನ್ನು ಅನುಸರಿಸಬೇಕು,” ಎಂದು ತಿಳಿಸಿದ್ದಾರೆ.

“ರಿಷಭ್‌ ಪಂತ್‌ ಅವರಿಗೆ ಆಸೀಸ್‌ ಬೌಲರ್‌ಗಳು ಆಂಗಲ್‌ನಲ್ಲಿ ಎಸೆಯುತ್ತಿದ್ದಾರೆ. ಪ್ಯಾಟ್‌ ಕಮಿನ್ಸ್‌ ಹಾಗೂ ಜಾಶ್‌ ಹೇಝಲ್‌ವುಡ್‌ ಅವರು ಪಂತ್‌ಗೆ ಸ್ವಲ್ಪ ಸಮಸ್ಯೆಯನ್ನು ನೀಡುತ್ತಿದ್ದಾರೆ. ಸ್ಕಾಟ್‌ ಬೋಲೆಂಡ್‌ ಕೂಡ ಎಡಗೈ ಬ್ಯಾಟ್ಸ್‌ಮನ್‌ಗೆ ತೊಂದರೆಗೆ ಸಿಲುಕಿಸಿದ್ದಾರೆ. ಅವರು ಅರೌಂಡ್‌ ದಿ ವಿಕೆಟ್‌ ಬೌಲ್‌ ಮಾಡಿ ಪಂತ್‌ಗೆ ಕಾಟ ನೀಡಿದ್ದಾರೆ,” ಎಂದು ಬ್ಯಾಟಿಂಗ್‌ ದಿಗ್ಗಜ ಹೇಳಿದ್ದಾರೆ.

ಪ್ರಸಕ್ತ ಸರಣಿಯಲ್ಲಿನ ಪಂತ್‌ರ ಪ್ರದರ್ಶನ

2020-21ರ ಸಾಲಿನ ಬ್ರಿಸ್ಬೇನ್‌ ದಿ ಗಬ್ಬಾದಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು ಹಾಗೂ ಭಾರತ ತಂಡದ ಐತಿಹಾಸಿಕ ಗೆಲುವಿಗೆ ನೆರವು ನೀಡಿದ್ದರು. ಆದರೆ, ಪ್ರಸ್ತುತ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅದೇ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದಾರೆ.

ಈ ಸರಣಿಯಲ್ಲಿ ಆಡಿ ಮೂರು ಪಂದ್ಯಗಳಿಂದ ರಿಷಭ್‌ ಪಂತ್‌ ಅವರು 19. 20ರ ಸರಾಸರಿಯಲ್ಲಿ ಕೇವಲ96 ರನ್‌ಗಳನ್ನು ಕಲೆ ಹಾಕಿದ್ದಾರೆ. 37 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಇನ್ನು ಪ್ರಸಕ್ತ ಸರಣಿಯಲ್ಲಿ ರಿಷಭ್‌ ಪಂತ್‌ ಅರ್ಧಶತಕ ಸಿಡಿಸಿಲ್ಲ. ಭಾರತ ತಂಡಕ್ಕೆ ಇನ್ನು ಈ ಸರಣಿಯಲ್ಲಿ ಆಡುವುದು ಕೇವಲ ಎರಡು ಪಂದ್ಯಗಳು ಮಾತ್ರ ಉಳಿದಿವೆ. ಮೆಲ್ಬರ್ನ್‌ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿವೆ. ಕನಿಷ್ಠ ಈ ಪಂದ್ಯಗಳಲ್ಲಿ ಕಮ್‌ಬ್ಯಾಕ್‌ ಮಾಡಲು ರಿಷಭ್‌ ಪಂತ್‌ ಎದುರು ನೋಡುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: 37 ರನ್‌ಗೆ ಔಟಾದರೂ ನೂತನ ಮೈಲುಗಲ್ಲು ಸ್ಥಾಪಿಸಿದ ರಿಷಭ್‌ ಪಂತ್‌!