ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AUS) ಸರಣಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಐದನೇ ಹಾಗೂ ಸರಣಿಯ ನಿರ್ಣಾಯಕ ಪಂದ್ಯದಿಂದ ಕೈ ಬಿಡಲಾಗುತ್ತದೆ ಎಂದು ವರದಿಯಾಗಿದೆ. ಆ ಮೂಲಕ ಗಾಯದಿಂದ ಚೇತರಿಸಿಕೊಂಡಿರುವ ಶುಭಮನ್ ಗಿಲ್ ಮೂರನೇ ಕ್ರಮಾಂಕಕ್ಕೆ ಮರಳಲಿದ್ದು, ಕೆಎಲ್ ರಾಹುಲ್ ಎಂದಿನಂತೆ ಯಶಸ್ವಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ರೋಹಿತ್ ಶರ್ಮಾ ಅವರು ಪರ್ತ್ ಟೆಸ್ಟ್‌ಗೆ ಅಲಭ್ಯರಾಗಿದ್ದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಜಸ್‌ಪ್ರೀತ್ ಬುಮ್ರಾ ನಾಯಕನಾಗಿ ಯಶಸ್ವಿಯಾಗಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ನಂತರ ಭಾರತ ತಂಡಕ್ಕೆ ಮರಳಿದ್ದ ರೋಹಿತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯದಿಂದ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ, ಇವರು ನಾಯಕನಾಗಿ ಹಾಗೂ ಬ್ಯಾಟ್ಸ್‌ಮನ್ ಆಗಿ ವೈಫಲ್ಯವನ್ನು ಅನುಭವಿಸಿದ್ದರು.
AUS vs IND: ʻಸಿಡ್ನಿ ಟೆಸ್ಟ್‌ಗೆ ಆಕಾಶ ದೀಪ್ ಇಲ್ಲʼ-ಖಚಿತಪಡಿಸಿದ ಗೌತಮ್ ಗಂಭೀರ್!
ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಹಿಟ್‌ಮ್ಯಾನ್
ಕೆಎಲ್ ರಾಹುಲ್‌ಗೆ ಇನಿಂಗ್ಸ್ ಆರಂಭಿಸಲು ಅವಕಾಶ ಮಾಡಿಕೊಟ್ಟಿದ್ದ ಅವರು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಆದರೆ ಅವರಿಂದ ಹೇಳಿಕೊಳ್ಳುವಂಥ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಮೂರನೇ ಟೆಸ್ಟ್ ಬಳಿಕ ಶುಭಮನ್ ಗಿಲ್ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಕೆಎಲ್ ರಾಹುಲ್ ಆಡಿದ್ದರು ಹಾಗೂ ನಾಯಕ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಿದ್ದರು. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ಆಗಿಯೂ ರೋಹಿತ್ ಶರ್ಮಾ ವೈಫಲ್ಯ ಅನುಭವಿಸಿದ್ದರು.
ರೋಹಿತ್ ಶರ್ಮಾ ಜತೆ ಟೀಮ್ ಮ್ಯಾನೇಜ್‌ಮೆಂಟ್ ಮಾತು
ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡದ ಟೀಮ್ ಮ್ಯಾನೇಜ್‌ಮೆಂಟ್ ರೋಹಿತ್ ಶರ್ಮಾ ಜೊತೆ ಮಾತನಾಡಿರಬಹುದು. ಈ ಹಿನ್ನೆಲೆಯಲ್ಲಿ 37ರ ಪ್ರಾಯದ ಬ್ಯಾಟ್ಸ್‌ಮನ್ ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದರೂ ಅಚ್ಚರಿ ಇಲ್ಲ. ಏಕೆಂದರೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ ಹಾಗೂ ಅವರ ಫುಟ್‌ವರ್ಕ್ ಕೂಡ ಆಶಾದಾಯಕವಾಗಿಲ್ಲ.
ಟೈಮ್ ಆಫ್ ಇಂಡಿಯಾ ವರದಿ
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ರೋಹಿತ್ ಶರ್ಮಾ ಅವರ ಫಾರ್ಮ್ ಅತ್ಯಂತ ಕಳಪೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಹೊಸ ವರ್ಷದ ಟೆಸ್ಟ್ ಪಂದ್ಯದಿಂದ ಕೈ ಬಿಡಬಹುದೆಂದು ವರದಿ ಮಾಡಿದೆ. ಒಂದು ವೇಳೆ ರೋಹಿತ್ ಶರ್ಮಾ ಅವರನ್ನು ಉಳಿಸಿಕೊಂಡರೆ, ಶುಭಮನ್ ಗಿಲ್ ಬೆಂಚ್ ಕಾಯಬೇಕಾಗುತ್ತದೆ. ಇಲ್ಲವಾದಲ್ಲಿ ಇನ್‌ಫಾರ್ಮ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಕೈ ಬಿಡಬೇಕಾಗಬಹುದು.
ಈ ಸುದ್ದಿಯನ್ನು ಓದಿ: AUS vs IND: ಬುಮ್ರಾ ವಿರುದ್ಧ ವಿಶೇಷ ಕಾನೂನು ಜಾರಿಗೆ ಮುಂದಾದ ಆಸೀಸ್ ಪ್ರಧಾನಿ