Thursday, 26th December 2024

IND vs AUS: ಪದಾರ್ಪಣೆ ಟೆಸ್ಟ್‌ನಲ್ಲಿ ಅರ್ಧಶತಕ ಸಿಡಿಸಿ ಇತಿಹಾಸ ಬರೆದ ಸ್ಯಾಮ್‌ ಕೋನ್‌ಸ್ಟಸ್‌!

IND vs AUS: Sam Konstas Created History, Becomes Youngest Player To Score 50 Vs India Test Debut

ಮೆಲ್ಬರ್ನ್‌: ಭಾರತ ವಿರುದ್ದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ (IND vs AUS) ಆಸ್ಟ್ರೇಲಿಯಾ ತಂಡದ ಪರ ಸ್ಯಾಮ್‌ ಕೋನ್‌ಸ್ಟಸ್‌ (Sam Konstas) ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ 19ರ ವಯಸ್ಸಿನ ಯುವ ಬ್ಯಾಟ್ಸ್‌ಮನ್‌ ಚೊಚ್ಚಲ ಅರ್ಧಶತಕವನ್ನು ಪೂರ್ಣಗೊಳಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ಅರ್ಧಶತಕದೊಂದಿಗೆ ಸ್ಯಾಮ್‌ ಕೋನ್‌ಸ್ಟಸ್‌ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಗುರುವಾರ ಆರಂಭವಾದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ಪರ ಇನಿಂಗ್ಸ್‌ ಆರಂಭಿಸಿದ ಸ್ಯಾಮ್‌ ಕೋನ್‌ಸ್ಟಸ್‌ ಅವರು ತಮ್ಮ ಅಮೋಘ ಬ್ಯಾಟಿಂಗ್‌ನಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ. ತಾವು ಎದರಿಸಿದ 52 ಎಸೆತಗಳಲ್ಲಿ ಅವರು ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿಯೇ 19ರ ವಯಸ್ಸಿನ ಬ್ಯಾಟ್ಸ್‌ಮನ್‌ ಸ್ಯಾಮ್‌ ಕೋನ್‌ಸ್ಟಸ್‌ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಪದಾರ್ಪಣೆ ಟೆಸ್ಟ್‌ನಲ್ಲಿಯೇ ಇತಿಹಾಸ ಬರೆದ ಕೋನ್‌ಸ್ಟಸ್‌

ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ದಾಖಲೆಯನ್ನು ಸ್ಯಾಮ್‌ ಕೋನ್‌ಸ್ಟಸ್‌ ಬರದಿದ್ದಾರೆ. ಮಾಜಿ ಆಟಗಾರ ಇಯಾನ್ ಕ್ರೇಗ್ ಅವರು 17 ವರ್ಷ ಮತ್ತು 240 ದಿನಗಳ ವಯಸ್ಸಿನಲ್ಲಿ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿದ ಆಸ್ಟ್ರೇಲಿಯಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ಇದೀಗ ಸ್ಯಾಮ್‌ ಕೋನ್‌ಸ್ಟಸ್‌ ಅವರು ತಮ್ಮ 19 ವರ್ಷ 85 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ತಮ್ಮ ಚೊಚ್ಚಲ ಇನಿಂಗ್ಸ್‌ನಲ್ಲಿ ಯುವ ಬ್ಯಾಟ್ಸ್‌ಮನ್‌ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 60 ರನ್ ಗಳಿಸಿ ಅಂತಿಮವಾಗಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು.

ಭಾರತದ ಎದುರು ದಾಖಲೆ ಬರೆದ ಯುವ ಬ್ಯಾಟ್ಸ್‌ಮನ್‌

ಭಾರತದ ವಿರುದ್ಧ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಮತ್ತೊಂದು ದಾಖಲೆಯನ್ನು ಸ್ಯಾಮ್‌ ಕೋನ್‌ಸ್ಟಸ್‌ ಬರೆದಿದ್ದಾರೆ. ಪಾಕಿಸ್ತಾನದ ಮುಷ್ತಾಕ್ ಮೊಹಮ್ಮದ್ ಮತ್ತು ಶಾಹಿದ್ ಅಫ್ರಿದಿ ಮಾತ್ರ ಭಾರತದ ವಿರುದ್ಧದ ಟೆಸ್ಟ್‌ಗಳಲ್ಲಿ ಕೋನ್‌ಸ್ಟಸ್‌ಗಿಂತ ಕಿರಿಯ ವಯಸ್ಸಿನಲ್ಲಿ ಅರ್ಧಶತಕಗಳನ್ನು ಗಳಿಸಿದ್ದರು. ಆದರೆ, ಇವರು ತಮ್ಮ ಪದಾರ್ಪಣೆ ಟೆಸ್ಟ್‌ ಪಂದ್ಯಗಳಲ್ಲಿ ಈ ಎರಡೂ ಅರ್ಧಶತಕಗಳನ್ನು ಗಳಿಸಿರಲಿಲ್ಲ. ಆದರೆ, ಆಸೀಸ್‌ ಯುವ ಬ್ಯಾಟ್ಸ್‌ಮನ್‌ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯದಲ್ಲೇ ಭಾರತದ ವಿರುದ್ಧ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇದಲ್ಲದೆ, 20ನೇ ವಯಸ್ಸಿಗೂ ಮುನ್ನ ಸ್ಯಾಮ್‌ ಕೋನ್‌ಸ್ಟಸ್‌ ಭಾರತದ ವಿರುದ್ಧ ಪದಾರ್ಪಣೆ ಟೆಸ್ಟ್‌ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.

ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ

ಇನ್ನು ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭವನ್ನು ಪಡೆದಿದೆ. ಸ್ಯಾಮ್‌ ಕೋನ್‌ಸ್ಟಸ್‌ (60 ರನ್‌) ಹಾಗೂ ಉಸ್ಮಾನ್‌ ಖವಾಜ (50) ಅವರ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ 35 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 134 ರನ್‌ಗಳನ್ನು ಗಳಿಸಿದೆ. ಕ್ರೀಸ್‌ನಲ್ಲಿ ಉಸ್ಮಾನ್‌ ಖವಾಜ (50) ಹಾಗೂ ಮಾರ್ನಸ್‌ ಲಾಬುಶೇನ್‌ (21*) ಇದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ವಿರಾಟ್‌ ಕೊಹ್ಲಿ-ಸ್ಯಾಮ್‌ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್‌