Sunday, 5th January 2025

IND vs AUS: ʻಅಪ್ಪನ ಕಣ್ಣೀರು ನೋಡಿದ್ದೇನೆʼ- ತಂದೆಯ ತ್ಯಾಗವನ್ನು ನೆನೆದ ನಿತೀಶ್‌ ರೆಡ್ಡಿ!

IND vs AUS: 'Saw him crying'-Nitish Kumar Reddy recalls father's sacrifices for his career

ಅಡಿಲೇಡ್‌: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ 2024-25ರ ಸಾಲಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ (IND vs AUS) ಸರಣಿಯಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಿತೀಶ್‌ ರೆಡ್ಡಿ ಅವರು ತಮ್ಮ ತಂದೆ ತನಗಾಗಿ ಮಾಡಿದ ತ್ಯಾಗವನ್ನು ನೆನೆದು ಭಾವುಕರಾಗಿದ್ದಾರೆ. ಬಿಸಿಸಿಐ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಹಲವು ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2024) ಟೂರ್ನಿಯಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಗಮನ ಸೆಳೆದಿದ್ದರು. ಅವರು 142ರ ಸ್ಟ್ರೈಕ್‌ ರೇಟ್‌ನಲ್ಲಿ 303 ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಇದರ ಫಲವಾಗಿ ಅವರು ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ನಿತೀಶ್‌ ರೆಡ್ಡಿ ತಮ್ಮ ಆಲ್‌ರೌಂಡ್‌ ಪ್ರದರ್ಶನ ತೋರುವ ಮೂಲಕ ಅವರು ಎಲ್ಲರ ಗಮನವನ್ನು ಸೆಳೆದಿದ್ದರು. ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೂ ಕೂಡ ಅವರು ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಅವರು ಬ್ಯಾಟಿಂಗ್‌ನಲ್ಲಿ ಗಮನಾರ್ಹವಾಗಿ ಕಂಡಿದ್ದರು.

ಬಿಸಿಸಿಐ ಶೇರ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಅವರು, “ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಚಿಕ್ಕ ಹುಡುಗನಿದ್ದಾಗ ಅಷ್ಟೊಂದು ಆಸಕ್ತಿಯನ್ನು ಹೊಂದಿರಲಿಲ್ಲ. ನನಗಾಗಿ ನನ್ನ ತಂದೆ ಕೆಲಸವನ್ನು ಬಿಟ್ಟಿದ್ದರು ಹಾಗೂ ನನ್ನ ಕಥೆಯ ಹಿಂದೆ ಅವರ ಸಾಕಷ್ಟು ತ್ಯಾಗವಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾಗ ನನ್ನ ತಂದೆ ಅಳುತ್ತಿದ್ದ ಸಂದರ್ಭವನ್ನು ನಾನು ನೋಡಿದ್ದೇನೆ. ಮೋಜಿಗಾಗಿ ಕ್ರಿಕೆಟ್‌ ಆಡುತ್ತಿರುವ ನನಗೆ ನಮ್ಮ ತಂದೆ ಯಾಕಿಷ್ಟು ತ್ಯಾಗವನ್ನು ಮಾಡುತ್ತಿದ್ದಾರೆಂಬ ಭಾವನೆ ನನಗೆ ಉಂಟಾಗಿತ್ತು. ಆ ಸಂದರ್ಭದಲ್ಲಿ ನಾನು ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡೆ ಹಾಗೂ ಕಠಿಣ ಪರಿಶ್ರಮದತ್ತ ಗಮನ ಹರಿಸಿದೆ. ಇದು ಈಗ ಫಲ ನೀಡಿದೆ,” ಎಂದು ಹೇಳಿಕೊಂಡಿದ್ದಾರೆ.

“ಮಧ್ಯಮ ಕುಟುಂಬದ ಒಬ್ಬ ಮಗನಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ಹಾಗೂ ನನ್ನ ತಂದೆ ಈಗ ಖುಷಿಯಾಗಿದ್ದಾರೆ. ನಾನು ನನ್ನ ಮೊದಲ ಜೆರ್ಸಿಯನ್ನು ನನ್ನ ತಂದೆಗೆ ನೀಡಿದ್ದೇನೆ ಹಾಗೂ ಅವರ ಮುಖದಲ್ಲಿ ಸಂತೋಷವನ್ನು ನೋಡಿದ್ದೇನೆ ಹಾಗೂ ಇದೀಗ ನಾನು ಬಹಳ ಹೆಮ್ಮೆ ಪಡುವಂತಾಗಿದೆ,” ಎಂದು ಯುವ ಆಲ್‌ರೌಂಡರ್‌ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿಯಿಂದ ಟೆಸ್ಟ್‌ ಕ್ಯಾಪ್‌ ಪಡೆದಿದ್ದ ನಿತೀಶ್‌ ರೆಡ್ಡಿ

ನವೆಂಬರ್‌ 22 ರಂದು ನಿತೀಶ್‌ ಕುಮಾರ್‌ ರೆಡ್ಡಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಬಾಲ್ಯದ ಹೀರೋ ವಿರಾಟ್‌ ಕೊಹ್ಲಿ ಅವರಿಂದ ಕ್ಯಾಪ್‌ ಅನ್ನು ನಿತೀಶ್‌ ರೆಡ್ಡಿ ಸ್ವೀಕರಿಸಿದ್ದರು. ಅದರಂತೆ ಪ್ರಥಮ ಇನಿಂಗ್ಸ್‌ನಲ್ಲಿ ಅವರು 41 ರನ್‌ಗಳ ನಿರ್ಣಾಯಕ ಪ್ರದರ್ಶನ ತೋರಿದ್ದರು. ಅವರ ಭಯ ಮುಕ್ತ ಬ್ಯಾಟಿಂಗ್‌ ಎಲ್ಲರ ಗಮನ ಸೆಳೆದಿತ್ತು. ಮೊದಲನೇ ದಿನ ಎಲ್ಲಾ ಆಟಗಾರರು ಬ್ಯಾಟಿಂಗ್‌ಗೆ ತಿಣುಕಾಡುತ್ತಿದ್ದರೆ, ನಿತೀಶ್‌ ಕುಮಾರ್‌ ಆರಾಮದಾಯಕವಾಗಿ ಬ್ಯಾಟ್‌ ಬೀಸಿದ್ದರು.

ಈ ಸುದ್ದಿಯನ್ನು ಓದಿ: IND vs AUS: ʻಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ‌ ಆರ್‌ ಅಶ್ವಿನ್ ಆಡಬೇಕುʼ-ವಾಸೀಮ್‌ ಜಾಫರ್‌ ಮನವಿ!