Tuesday, 26th November 2024

IND vs AUS: ʻಅಶ್ವಿನ್‌, ಜಡೇಜಾ ಎಲ್ಲಿ?ʼ-ನಿತೇಶ್‌ ರೆಡ್ಡಿ ಆಯ್ಕೆಯನ್ನು ಪ್ರಶ್ನಿಸಿದ ಸುನೀಲ್‌ ಗವಾಸ್ಕರ್‌!

Sunil Gavaskar QUESTIONS Gautam Gambhir, Jasprit Bumrah For Playing Nitish Kumar Reddy Instead Of Ashwin, Jadeja

ಪರ್ತ್‌: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯಕ್ಕೆ (IND vs AUS) ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಪ್ರಶ್ನೆ ಮಾಡಿದ್ದಾರೆ. ಹಿರಿಯ ಸ್ಪಿನ್‌ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ಆರ್‌ ಅಶ್ವಿನ್‌ ಅವರನ್ನು ಕೈ ಬಿಟ್ಟು ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ನೀಡಿರುವ ಬಗ್ಗೆ ನಾಯಕ ಜಸ್‌ಪ್ರೀತ್‌ ಬುಮ್ರಾ ಹಾಗೂ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ಗವಾಸ್ಕರ್‌ ಪ್ರಶ್ನೆ ಮಾಡಿದ್ದಾರೆ.

ಶುಕ್ರವಾರ ಆಪ್ಟಸ್‌ ಸ್ಟೇಡಿಯಂನಲ್ಲಿ ಆರಂಭವಾದ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಗಾಯಾಳು ಶುಭಮನ್‌ ಗಿಲ್‌ ಸ್ಥಾನಕ್ಕೆ ದೇವದತ್‌ ಪಡಿಕ್ಕಲ್‌, ಅಲಭ್ಯರಾಗಿರುವ ರೋಹಿತ್‌ ಶರ್ಮಾ ಸ್ಥಾನದಲ್ಲಿ ಕೆಎಲ್‌ ರಾಹುಲ್‌, ರವೀಂದ್ರ ಜಡೇಜಾ ಸ್ಥಾನದಲ್ಲಿ ನಿತೀಶ್‌ ರೆಡ್ಡಿಗೆ ಸ್ಥಾನ ನೀಡಲಾಗಿದ್ದರೆ, ಆಕಾಶ ದೀಪ್‌ ಅವರ ಬದಲು ಯುವ ವೇಗಿ ಹರ್ಷಿತ್‌ ರಾಣಾಗೆ ಚಾನ್ಸ್‌ ನೀಡಲಾಗಿದೆ. ಆದರೆ, ಇಬ್ಬರು ಹಿರಿಯ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಆರ್‌ ಅಶ್ವಿನ್‌ ಅವರ ಬದಲು ನಿತೀಶ್‌ ರೆಡ್ಡಿಗೆ ಸ್ಥಾನ ನೀಡಿದ ಬಗ್ಗೆ ಗವಾಸ್ಕರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹೆಚ್ಚೂ ಕಡಿಮೆ ಕಳೆದ ಒಂದು ದಶಕದಿಂದ ರವೀಂದ್ರ ಜಡೇಜಾ ಹಾಗೂ ಆರ್‌ ಅಶ್ವಿನ್‌ ಅವರು ಭಾರತ ಟೆಸ್ಟ್‌ ತಂಡಕ್ಕೆ ಕೀ ಆಟಗಾರರಾಗಿದ್ದಾರೆ. ಈ ಜೋಡಿ ಭಾರತದ ಪರ ಬರೋಬ್ಬರಿ 855 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಈ ಇಬ್ಬರೂ ಆಟಗಾರರು ಉಪ ಖಂಡದಲ್ಲಿ ಕೇವಲ ಬೌಲರ್‌ಗಳು ಮಾತ್ರವಲ್ಲ, ಅವರು ಅತ್ಯಂತ ಬುದ್ದಿವಂತ ಬೌಲರ್‌ಗಳು ಎಂಬುದು ಸುನೀಲ್‌ ಗವಾಸ್ಕರ್‌ ಅಭಿಪ್ರಾಯ.

IND vs AUS: 150 ರನ್‌ಗೆ ಕುಸಿದ ಟೀಮ್‌ ಇಂಡಿಯಾ

“ಟೆಸ್ಟ್‌ ಪಂದ್ಯಗಳಲ್ಲಿ 900ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿರುವ ರವಿಂದ್ರ ಜಡೇಜಾ ಹಾಗೂ ಆರ್‌ ಅಶ್ವಿನ್‌ ಅವರನ್ನು ಪರ್ತ್‌ ಟೆಸ್ಟ್‌ಗೆ ಕೈ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಇವರು ಕೇವಲ ಭಾರತ ಅಥವಾ ಉಪಖಂಡದಲ್ಲಿ ಆಡುವ ಬೌಲರ್‌ಗಳು ಮಾತ್ರವಲ್ಲ. ಆದರೆ, ಇವರು ಅತ್ಯಂತ ಬುದ್ದಿವಂತ ಹಾಗೂ ಅನುಭವಿ ಬೌಲರ್‌ಗಳಾಗಿದ್ದಾರೆ. ಇವರು ವಿಕೆಟ್‌ಗಳನ್ನು ಪಡೆಯದ ಪಕ್ಷದಲ್ಲಿ, ತಮ್ಮ ಬೌಲಿಂಗ್‌ನಿಂದ ಕನಿಷ್ಠ ಎದುರಾಳಿ ತಂಡದ ರನ್‌ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ,” ಎಂದು ಸುನೀಲ್‌ ಗವಾಸ್ಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿತೀಶ್‌ ಕುಮಾರ್ ರೆಡ್ಡಿ ಸಿದ್ದರಿದ್ದಾರಾ?

‌ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡದ ಹೊರತಾಗಿಯೂ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಮೊದಲನೇ ಟೆಸ್ಟ್‌ಗೆ ಆಯ್ಕೆ ಮಾಡಲಾಗಿದೆ. ಅಂದ ಹಾಗೆ ಟೆಸ್ಟ್‌ ಕ್ರಿಕೆಟ್‌ಗೆ ನಿತೀಶ್‌ ರೆಡ್ಡಿ ಸಿದ್ದರಿದ್ದಾರಾ? ಎಂದು ಬ್ಯಾಟಿಂಗ್‌ ದಿಗ್ಗಜ ಪ್ರಶ್ನೆ ಮಾಡಿದ್ದಾರೆ.

“ಆಸ್ಟ್ರೇಲಿಯಾ ಕಂಡೀಷನ್ಸ್‌ನಲ್ಲಿ ದೊಡ್ಡ ಬೌಂಡರಿಗಳಿವೆ ಹಾಗಾಗಿ, ರವಿಚಂದ್ರನ್‌ ಅಶ್ವಿನ್‌ ಮತ್ತು ರವೀಂದ್ರ ಜಡೇಜಾ ಇಬ್ಬರನ್ನು ಆಡಿಸಬೇಕಾಗಿತ್ತು ಎಂಬುದು ನನ್ನ ಭಾವನೆ. ಆದರೆ, ಹೊಸ ಟೀಮ್‌ ಮ್ಯಾನೇಜ್‌ಮೆಂಟ್‌ ಹೊಸ ಸಂಗತಿಗಳ ಬಗ್ಗೆ ಚಿಂತನೆ ನಡೆಸುತ್ತಿದೆ. ನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ನೀಡಲಾಗಿದೆ ಹಾಗೂ ಅವರು ಉದಯೋನ್ಮುಖ ಆಟಗಾರ ಎಂದು ಒಪ್ಪುತ್ತೇನೆ ಆದರೆ, ಅವರು ಟೆಸ್ಟ್‌ ಕ್ರಿಕೆಟ್‌ಗೆ ಸಿದ್ದರಾಗಿದ್ದಾರಾ? ಎಂಬುದು ನನ್ನ ಪ್ರಶ್ನೆ,” ಎಂದು ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ.

IND vs AUS: ಮೂರನೇ ಕ್ರಮಾಂಕಕ್ಕೆ ಪಡಿಕ್ಕಲ್ ಫಿಕ್ಸ್‌

ನಿರ್ಣಾಯಕ 41 ರನ್‌ ಗಳಿಸಿದ ನಿತೀಶ್‌ ರೆಡ್ಡಿ

ಅಂದ ಹಾಗೆ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ 49.4 ಓವರ್‌ಗಳಿಗೆ 150 ರನ್‌ಗಳಿಗೆ ಆಲ್‌ಔಟ್‌ ಆಯಿತು. ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌ ಸೇರಿದಂತೆ ಬಹುತೇಕ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಆದರೆ, ಡೆಬ್ಯೂಟಂಟ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸಿದರು. ಅವರು ಆಡಿದ 59 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ಆರು ಬೌಂಡರಿಗಳೊಂದಿಗೆ ನಿರ್ಣಾಯಕ 41 ರನ್‌ಗಳನ್ನು ಗಳಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಯಾರೂ ಸಾಥ್‌ ನೀಡದ ಕಾರಣ ಅರ್ಧಶತಕ ವಂಚಿತರಾದರು. ಅಲ್ಲದೆ 37 ರನ್‌ ಗಳಿಸಿದ ರಿಷಭ್‌ ಪಂತ್‌ ಅವರ ಜೊತೆಗೆ ನಿತೀಶ್‌ ಮುರಿಯದ ಏಳನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟವನ್ನು ಆಡಿದ್ದರು.