Wednesday, 8th January 2025

IND vs AUS: ಭಾರತಕ್ಕೆ 145 ರನ್‌ ಮುನ್ನಡೆ, ಸಿಡ್ನಿ ಟೆಸ್ಟ್‌ನಲ್ಲಿ ಅತ್ಯಂತ ಯಶಸ್ವಿ ರನ್ ಚೇಸ್ ಎಷ್ಟು?

IND vs AUS: Team India lead by 145 runs, What is the highest successful run chase in Sydney?

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್‌ ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಇಲ್ಲಿನ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿದೆ. ಪಂದ್ಯದ ಎರಡು ದಿನಗಳು ಪೂರ್ಣಗೊಂಡಿವೆ. ಪಂದ್ಯದ ಎರಡನೇ ದಿನದಾದಟದ ಅಂತ್ಯಕ್ಕೆ ಭಾರತ ತಂಡ 32 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 141 ರನ್‌ಗಳನ್ನು ಗಳಿಸಿದೆ ಹಾಗೂ 145 ರನ್‌ಗಳ ಮುನ್ನಡೆಯನ್ನು ಪಡೆದಿದೆ.

ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಎಷ್ಟು ರನ್‌ಗಳ ಗುರಿಯನ್ನು ನೀಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡ 185 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ನಂತರ ಆಸ್ಟ್ರೇಲಿಯಾ ತಂಡ 181 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಇದೀಗ ಟೀಮ್‌ ಇಂಡಿಯಾ 145 ರನ್‌ಗಳ ಮುನ್ನಡೆಯನ್ನು ಪಡೆದಿದ್ದು, 200ಕ್ಕೂ ಅಧಿಕ ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾಗೆ ನೀಡಿದರೆ ಒಳ್ಳೆಯದು. ಆದರೆ, ಭಾರತದ ನಾಯಕ ಹಾಗೂ ಕೀ ವೇಗಿ ಜಸ್‌ಪ್ರೀತ್‌ ಬುಮ್ರಾ ಗಾಯಕ್ಕೆ ತುತ್ತಾಗಿರುವುದು ಪ್ರವಾಸಿ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.

ಸಿಡ್ನಿ ಟೆಸ್ಟ್‌ನಲ್ಲಿ ಅತ್ಯಂತ ಯಶಸ್ವಿ ರನ್‌ ಚೇಸ್‌ ಎಷ್ಟು?

ಸಿಡ್ನಿ ಟೆಸ್ಟ್‌ನ ನಾಲ್ಕನೇ ಇನಿಂಗ್ಸ್‌ನಲ್ಲಿ ಅತ್ಯಂತ ಯಶಸ್ವಿ ರನ್‌ ಚೇಸ್ ಎಷ್ಟು ಎಂಬ ಬಗ್ಗೆ ಇದೀಗ ನಾವು ತಿಳಿಯೋಣ. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಗರಿಷ್ಠ ರನ್ ಚೇಸ್ ಮಾಡಿದೆ. 2006ರ ಜನವರಿಯಲ್ಲಿ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 288 ರನ್‌ಗಳ ಗುರಿಯನ್ನು ತಲುಪಿತ್ತು. ಇಲ್ಲಿಯವರೆಗೂ ಸಿಡ್ನಿ ಟೆಸ್ಟ್‌ನ ನಾಲ್ಕನೇ ಇನಿಂಗ್ಸ್‌ನಲ್ಲಿ ಇದುವರೆಗಿನ ಅತಿ ದೊಡ್ಡ ರನ್ ಚೇಸ್ ಇದಾಗಿದೆ. ಈ ಪಟ್ಟಿಯ ಎರಡನೇ ಸ್ಥಾನದಲ್ಲಿಯೂ ಆಸ್ಟ್ರೇಲಿಯಾ ಇದೆ. 1898ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು 276 ರನ್‌ ಗಳಿಸಿ ಗುರಿ ತಲುಪಿತ್ತು.

ಸಿಡ್ನಿ ಟೆಸ್ಟ್‌ ಸಂಕಷ್ಟದಲ್ಲಿ ಟೀಮ್‌ ಇಂಡಿಯಾ

ಪಂದ್ಯದ ಎರಡು ದಿನಗಳ ಅತ್ಯಂತ ಬಳಿಕ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಆರಂಭಿಸಿದ ಭಾರತ, ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 141 ರನ್‌ ಕಲೆ ಹಾಕಿದೆ. ಇನ್ನು ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಕ್ರೀಸ್‌ನಲ್ಲಿದ್ದಾರೆ. ಜಡೇಜಾ 8 ರನ್ ಮತ್ತು ಸುಂದರ್ 6 ರನ್ ಗಳಿಸಿದ್ದಾರೆ. ಇದು ಟೀಮ್‌ ಇಂಡಿಯಾದ ಕೊನೆಯ ಬ್ಯಾಟಿಂಗ್ ಜೋಡಿ. ಇವರ ನಂತರ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಥವಾ ಬೌಲರ್‌ಗಳು ಬ್ಯಾಟಿಂಗ್‌ಗಾಗಿ ಕ್ರೀಸ್‌ಗೆ ಬರಲಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಮಿಚೆಲ್‌ ಸ್ಟಾರ್ಕ್‌ಗೆ 16 ರನ್‌ ಗಳಿಸಿ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌!