Friday, 27th December 2024

IND vs AUS: ʻಆಕಸ್ಮಿಕವಾಗಿ ಗುದ್ದಿದ್ದಾರೆʼ-ವಿರಾಟ್‌ ಕೊಹ್ಲಿಯ ವರ್ತನೆ ಬಗ್ಗೆ ಸ್ಯಾಮ್‌ ಕೋನ್‌ಸ್ಟಸ್‌ ಹೇಳಿಕೆ!

IND vs AUS-Think Virat Kohli accidentally bumped into me, altercations fire me up: Sam Konstas

ಮೆಲ್ಬರ್ನ್‌: ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (IND vs AUS) ತಮ್ಮ ಭುಜಕ್ಕೆ ಗುದ್ದಿದ್ದ ಘಟನೆ ಹಾಗೂ ಅವರ ಜೊತೆ ನಡೆದಿದ್ದ ಮಾತಿನ ಚಕಮಕಿ ಬಗ್ಗೆ ಆಸ್ಟ್ರೇಲಿಯಾ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಸ್ಯಾಮ್‌ ಕೋನ್‌ಸ್ಟಸ್‌ ಪ್ರತಿಕ್ರಿಯಿಸಿದ್ದಾರೆ. ವಿರಾಟ್‌ ಕೊಹ್ಲಿ ಆಕಸ್ಮಿಕವಾಗಿ ತನಗೆ ಡಿಕ್ಕಿ ಹೊಡೆದಿದ್ದಾರೆ ಹಾಗೂ ಇದು ಕ್ರಿಕೆಟ್‌ನಲ್ಲಿ ಮಾಮುಲಿ ಎಂದು ಹೇಳಿಕೊಂಡಿದ್ದಾರೆ.

ಗುರುವಾರ ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆರಂಭವಾದ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡ, ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ ಮೊದಲನೇ ದಿನದಾಟದ ಅಂತ್ಯಕ್ಕೆ 86 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 311 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಮೊದಲನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸಿದೆ.

Sam Konstas: ರಿವರ್ಸ್‌ ಸ್ಕೂಪ್‌ ಮೂಲಕ ಸಿಕ್ಸರ್‌, 3 ವರ್ಷಗಳ ಬಳಿಕ ಸಿಕ್ಸ್‌ ಹೊಡೆಸಿಕೊಂಡ ಬುಮ್ರಾ! ವಿಡಿಯೊ

ವಿರಾಟ್‌ ಕೊಹ್ಲಿ-ಸ್ಯಾಮ್‌ ಕೋನ್‌ಸ್ಟಸ್‌ ಜತೆ ಕಿರಿಕ್‌ ಏನು?

ಆಸ್ಟ್ರೇಲಿಯಾ ಇನಿಂಗ್ಸ್‌ನ 10ನೇ ಓವರ್‌ನ ಬಳಿಕ ಎಂಸಿಜಿಯಲ್ಲಿನ ಪರಿಸ್ಥಿತಿ ಸ್ವಲ್ಪ ಬಿಸಿಯಾಯಿತು. ಸ್ಯಾಮ್ ಕೋನ್‌ಸ್ಟಸ್‌ ಮತ್ತು ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಿಚ್‌ನ ಮಧ್ಯದಲ್ಲಿ ನಡೆದುಕೊಂಡು ಬರುತ್ತಿದ್ದ ಸ್ಯಾಮ್‌ ಕೋನ್‌ಸ್ಟಸ್‌ ಭುಜಕ್ಕೆ ವಿರಾಟ್‌ ಕೊಹ್ಲಿ ಗುದ್ದಿದರು. ಈ ವಿಡಿಯೊದಲ್ಲಿ ಗಮನಿಸಿದರೆ ವಿರಾಟ್‌ ಕೊಹ್ಲಿಯೇ ಉದ್ದೇಶ ಪೂರ್ವಕವಾಗಿ ಡಿಕ್ಕಿ ಹೊಡೆದ ರೀತಿ ಕಾಣುವಂತಿತ್ತು. ಈ ವೇಳೆ ವಿರಾಟ್‌ ಕೊಹ್ಲಿ ಹಾಗೂ ಸ್ಯಾಮ್‌ಕೋಸ್ಟಸ್‌ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು. ಈ ವೇಳೆ ಇದರ ನಡುವೆ ಮಧ್ಯ ಪ್ರವೇಶಿಸಿದ ಉಸ್ಮಾನ್‌ ಖವಾಜ ಪರಿಸ್ಥಿತಿಯನ್ನು ಸರಿದೂಗಿಸಿದರು ಹಾಗೂ ಅಂಪೈರ್‌ ಕೂಡ ಇಬ್ಬರೂ ಆಟಗಾರರನ್ನು ಶಾಂತಗೊಳಿಸಿದರು.

ಕೋನ್‌ಸ್ಟಸ್‌ ಅವರು ತಮ್ಮ ಪದಾರ್ಪಣೆ ಇನಿಂಗ್ಸ್‌ನಲ್ಲಿ 65 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 6 ಮನ ಮೋಹಕ ಬೌಂಡರಿಗಳೊಂದಿಗೆ 60 ರನ್‌ ಗಳಿಸಿ ರವೀಂದ್ರ ಜಡೇಜಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸ್ಯಾಮ್‌ ಕೋನ್‌ಸ್ಟಸ್‌ ಅವರಿಗೆ ವಿರಾಟ್‌ ಕೊಹ್ಲಿ ಜತೆಗಿನ ಜಗಳದ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು.

ಇದು ಆಕಸ್ಮಿಕವಾಗಿ ನಡೆದ ಘಟನೆ

“ನಾನು ನನ್ನ ಗ್ಲೌಸ್‌ಗಳನ್ನು ಸರಿ ಮಾಡಿಕೊಳ್ಳುತ್ತಿದ್ದೆ. ಈ ವೇಳೆ ಈ ಘಟನೆ ಆಕಸ್ಮಿತವಾಗಿ ನಡೆದಿತ್ತು. ಇದು ಕ್ರಿಕೆಟ್‌ ಆಗಿರುವ ಕಾರಣ ಇದು ನಡೆದಿರಬಹುದು. ಏಕೆಂದರೆ ಪಂದ್ಯದ ಒತ್ತಡವಿತ್ತು,” ಎಂದು ಸ್ಯಾಮ್‌ ಕೋಸ್ಟಸ್‌ ತಿಳಿಸಿದ್ದಾರೆ.

“ನಾನು ಸ್ಪರ್ಧೆಯಲ್ಲಿ ಉಳಿಯಲು ಪ್ರಯತ್ನ ನಡೆಸುತ್ತಿದ್ದೆ. ಯಾವುದೇ ಬೌಲರ್‌ ಎದುರು ನನ್ನಿಂದ ಉತ್ತಮ ಪ್ರದರ್ಶನ ತೋರಬೇಕೆಂಬುದು ಮಾತ್ರ ನನ್ನ ತಲೆಯಲ್ಲಿ ಓಡುತ್ತಿತ್ತು ಹಾಗೂ ಪ್ರಯತ್ನಿಸುತ್ತಿದ್ದೆ. ಒಂದು ಹಂತದಲ್ಲಿ ನನಗೆ ಬಿಸಿಯಾಯಿತು. ಇದು ನನ್ನ ಪಾಲಿಗೆ ಒಳ್ಳೆಯದು. ಇದು ನನ್ನಿಂದ ಉತ್ತಮ ಪ್ರದರ್ಶನವನ್ನು ಹೊರ ತಂದಿದೆ. ಮುಂದಿನ ಇನಿಂಗ್ಸ್‌ನಲ್ಲಿಯೂ ಇದೇ ಆಟವನ್ನು ಮುಂದುವರಿಸುತ್ತೇನೆಂಬ ಬಗ್ಗೆ ನನಗೆ ವಿಶ್ವಾಸವಿದೆ,” ಎಂದು ಸ್ಯಾಮ್‌ ಕೋಸ್ಟಸ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ವಿರಾಟ್‌ ಕೊಹ್ಲಿ-ಸ್ಯಾಮ್‌ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್‌