Sunday, 5th January 2025

IND vs AUS: ಸಿಡ್ನಿ ಟೆಸ್ಟ್‌ನಿಂದ ರೋಹಿತ್‌ ಶರ್ಮಾರನ್ನು ಕೈ ಬಿಡಲು 3 ಪ್ರಮುಖ ಕಾರಣಗಳು!

IND vs AUS: Three Strong Reasons Why Rohit Sharma Would Be Dropped From Sydney Test

ಸಿಡ್ನಿ: ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು (IND vs AUS) ಎದುರಿಸುತ್ತಿದ್ದಾರೆ. ನಾಯಕತ್ವದಲ್ಲಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ರೋಹಿತ್‌ ಶರ್ಮಾ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದಾರೆ. ಶುಕ್ರವಾರ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆರಂಭವಾಗಲಿರುವ ಐದನೇ ಹಾಗೂ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಿಂದ ರೋಹಿತ್‌ ಶರ್ಮಾ ಅವರನ್ನು ಕೈ ಬಿಡಲಾಗುತ್ತದೆ ಎಂದು ವರದಿಯಾಗಿದೆ. ರೋಹಿತ್‌ ಬದಲು ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಿದರೆ, ಮೂರನೇ ಕ್ರಮಾಂಕದಲ್ಲಿ ಶುಭಮನ್‌ ಗಿಲ್‌ ಕಾಣಿಸಿಕೊಳ್ಳಬಹುದೆಂಬ ಚಿತ್ರಣ ಪಂದ್ಯದ ಒಂದು ದಿನಕ್ಕೂ ಮುನ್ನ ಸ್ಪಷ್ಟವಾಗಿ ಕಾಣುತ್ತಿದೆ.

ಪ್ರಶ್ನೆ ಏನೆಂದರೆ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುತ್ತಾರಾ? ರೋಹಿತ್ ಸ್ಥಾನ ಸುರಕ್ಷಿತವೇ ಎಂಬ ಪ್ರಶ್ನೆಗೆ ‘ಹೌದು’ ಎಂಬ ಉತ್ತರ ಬರಬೇಕಿತ್ತು, ಆದರೆ ಪಂದ್ಯದ ಮುನ್ನ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ಉತ್ತರ, ‘ಪಿಚ್ ನೋಡಿದ ಬಳಿಕ ಪ್ಲೇಯಿಂಗ್ ಇಲೆವೆನ್ ಬಗ್ಗೆ ನಿರ್ಧರಿಸುತ್ತೇವೆ,ʼ ಎಂದಿದ್ದಾರೆ. ಗಂಭೀರ್ ಅವರ ಈ ಅಸ್ಪಷ್ಟ ಉತ್ತರವು ಊಹಾಪೋಹಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ.

ರೋಹಿತ್‌ ಶರ್ಮಾ ಸಿಡ್ನಿ ಟೆಸ್ಟ್‌ ಆಡದೆ ಇರಲು ಪ್ರಮುಖ ಮೂರು ಕಾರಣಗಳು

1.ಡ್ರೆಸ್ಸಿಂಗ್ ರೂಮಿನಲ್ಲಿ ರೋಹಿತ್ ಶರ್ಮಾ ಒಬ್ಬರೇ ಕುಳಿತಿದ್ದರು

    ಪಂದ್ಯಕ್ಕೂ ಮುನ್ನ ತಂಡದ ತರಬೇತಿ ಅವಧಿಯಲ್ಲಿ ಭಾರತೀಯ ನಾಯಕ ರೋಹಿತ್‌ ಶರ್ಮಾ ತಂಡದಿಂದ ಪ್ರತ್ಯೇಕವಾಗಿ ಕಾಣುತ್ತಿದ್ದರು. ಡ್ರೆಸ್ಸಿಂಗ್ ರೂಮಿನಲ್ಲಿ ಏಕಾಂಗಿಯಾಗಿ ಏನನ್ನೋ ಯೋಚಿಸುತ್ತಿರುವಂತೆ ಕಂಡುಬಂತು. ಅವರು ಬುಮ್ರಾ ಅವರೊಂದಿಗೆ ಬಹಳ ಹೊತ್ತು ಮಾತನಾಡುತ್ತಿದ್ದರು. ರೋಹಿತ್ ಅಭ್ಯಾಸಕ್ಕೆ ತಡವಾಗಿ ಬಂದರು. ಅಗ್ರ ಕ್ರಮಾಂಕದ ಸೆಷನ್ ಮುಗಿದ ನಂತರ ರೋಹಿತ್ ನೆಟ್‌ಗೆ ಪ್ರವೇಶಿಸಿದರು. ಎಂಸಿಜಿಯಲ್ಲಿ ಅವರು ಇನಿಂಗ್ಸ್‌ ತೆರೆಯಬೇಕಿದ್ದಾಗ ಎಲ್ಲಾ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಭ್ಯಾಸ ಮುಗಿಸಿದ ನಂತರ ಅವರು ಬ್ಯಾಟ್ ಮಾಡಲು ಬಂದಿದ್ದರೆಂದು ಹೇಳಿಕೊಳ್ಳಲಾಗುತ್ತಿದೆ.

    2.ಜಸ್‌ಪ್ರೀತ್‌ ಬುಮ್ರಾ ಅವರೊಂದಿಗೆ ಗಂಭೀರ್-ಅಗರ್ಕರ್ ಮಾತು

      ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ತರಬೇತಿಯ ಸಮಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಅವರೊಂದಿಗೆ ಮಾತನಾಡುತ್ತಿದ್ದರು. ಇದಾದ ನಂತರ ಬುಮ್ರಾ ಅವರು ಶುಭಮನ್ ಗಿಲ್ ಅವರನ್ನು ನೆಟ್ಸ್ ಮಾಡಲು ಕೇಳಿದರು. ಈ ಅವಧಿಯಲ್ಲಿ ರೋಹಿತ್‌ ಶರ್ಮಾ ಕೂಡ ಇದ್ದರು. ರೋಹಿತ್ ಶರ್ಮಾ ಅವರ ತರಬೇತಿ ಮುಗಿದ ನಂತರ, ಅವರು ಬುಮ್ರಾ ಮತ್ತು ಅಗರ್ಕರ್ ಅವರೊಂದಿಗೆ ನೆಟ್ಸ್‌ ತೊರೆದರು, ಆದರೆ ಗಂಭೀರ್ ಅಲ್ಲಿಯೇ ಇದ್ದರು. ಸುಮಾರು 45 ನಿಮಿಷದಿಂದ ಒಂದು ಗಂಟೆಯ ನಂತರ, ಹೆಚ್ಚಿನ ಆಟಗಾರರು ಮುಖ್ಯ ಗೇಟ್‌ನಿಂದ ಹೊರಬಂದರು. ತಂಡದ ಬಸ್‌ನ ಕಡೆಗೆ ಹೊರಟರು. ರೋಹಿತ್ ಶರ್ಮಾ ತಂಡ ಜತೆ ಬರಲಿಲ್ಲ ಹಾಗೂ ಬೇರೆ ಗಟ್‌ನಿಂದ ಹೊರಬಂದು ಬಸ್ ಹತ್ತಿದ್ದರು.

      3.ರೋಹಿತ್ ಬದಲಿಗೆ ಗಿಲ್ ಸ್ಲಿಪ್‌ನಲ್ಲಿ ಫೀಲ್ಡಿಂಗ್

        ಸಿಡ್ನಿ ಟೆಸ್ಟ್‌ಗೂ ಮುನ್ನ ಭಾರತ ತಂಡದ ಆಟಗಾರರು ಸ್ಲಿಪ್‌ ಕ್ಯಾಚ್‌ ಅಭ್ಯಾಸ ನಡೆಸಿದ್ದರು. ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಒಂದೆಡೆ ಇದ್ದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ‘ಸ್ಲಿಪ್ ಕ್ಯಾಚಿಂಗ್’ ಸೆಷನ್‌ಗಾಗಿ ರಿಷಬ್ ಪಂತ್ ಸ್ಟಂಪ್‌ನ ಹಿಂದೆ ಇದ್ದಾಗ, ಮೊದಲ ಸ್ಲಿಪ್‌ನಲ್ಲಿ ವಿರಾಟ್ ಕೊಹ್ಲಿ, ಎರಡನೇ ಸ್ಲಿಪ್‌ನಲ್ಲಿ ಕೆಎಲ್ ರಾಹುಲ್, ಮೂರನೇ ಸ್ಲಿಪ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ಗಲ್ಲಿಯಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ನಿಂತು ಅಭ್ಯಾಸ ನಡೆಸಿದರು. ಮುಖ್ಯ ಕ್ರೀಡಾಂಗಣದ ಹೊರಗಿನ ಅಭ್ಯಾಸ ಮೈದಾನದತ್ತ ಹೊರಟಾಗ ರೋಹಿತ್ ಶರ್ಮಾ ಎಲ್ಲಿಯೂ ಕಾಣಿಸಲಿಲ್ಲ.

        ಈ ಸುದ್ದಿಯನ್ನು ಓದಿ: IND vs AUS: ಸಿಡ್ನಿ ಟೆಸ್ಟ್‌ ಪಂದ್ಯದಿಂದ ನಾಯಕ ರೋಹಿತ್‌ ಶರ್ಮಾ ಔಟ್‌! ವರದಿ