ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AU) ಸರಣಿಯ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಇದರ ನಡುವೆ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಇನ್ನೂ 3 ರಿಂದ 4 ವರ್ಷಗಳ ಕಾಲ ಕ್ರಿಕೆಟ್ ಆಡಬಹುದು, ಆದರೆ, ರೋಹಿತ್ ಶರ್ಮಾ ಅವರು ವಿದಾಯ ಹೇಳಲು ಇದು ಸಕಾಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐದನೇ ದಿನವಾದ ಸೋಮವಾರ ಆಸ್ಟ್ರೇಲಿಯಾ ನೀಡಿದ 240 ರನ್‌ಗಳ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ 17ನೇ ಓವರ್‌ಗಳ ವರೆಗೂ ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದರು. ಆದರೆ, 17ನೇ ಓವರ್‌ನಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ ಬಳಿಕ ಕೆಎಲ್ ರಾಹುಲ್ ಕೂಡ ಔಟ್ ಆದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಫ್ ಸ್ಟಂಪ್ ಹೊರಗಡೆ ಎಸೆತವನ್ನು ಕೆಣಕಲು ಹೋಗಿ ಕೈ ಸುಟ್ಟುಕೊಂಡರು.
ವಿರಾಟ್ ಕೊಹ್ಲಿ 3-4 ವರ್ಷ ಆಡಬಹುದು
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರವಿ ಶಾಸ್ತ್ರಿ,”ವಿರಾಟ್ ಕೊಹ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಇಂದು (ಸೋಮವಾರ) ಅವರು ಔಟ್ ಆದ ಹಾದಿಯನ್ನು ಮರೆತು ಬಿಡಿ, ಅವರು ಇನ್ನೂ ಸ್ವಲ್ಪ ಅವಧಿ ಆಡಬಹುದು. ಅಂದರೆ 3 ರಿಂದ 4 ವರ್ಷಗಳ ಕಾಲ ಅವರು ಆಡಬಹುದು,” ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ ವಿದಾಯ ಹೇಳಲು ಸೂಕ್ತ ಸಮಯ
“ರೋಹಿತ್ ಶರ್ಮಾ ಬಗ್ಗೆ ಹೇಳುವುದಾದರೆ, ನಿವೃತ್ತಿ ಬಗ್ಗೆ ಅವರೇ ಅಂತಿಮ ಕರೆಯನ್ನು ತೆಗೆದುಕೊಳ್ಳಬೇಕಾಗಿದೆ. ಅಗ್ರ ಕ್ರಮಾಂಕದಲ್ಲಿ ಅವರ ಫುಟ್‌ವರ್ಕ್ ಸರಿಯಾಗಿಲ್ಲ. ಅವರ ಪಾದ ಚೆಂಡನ ಸನಿಹಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದಾಯ ಹೇಳುವ ಬಗ್ಗೆ ಅವರೇ ಅಂತಿಮ ಕರೆಯನ್ನು ಪಡೆಯಬೇಕಾಗಿದೆ,” ಎಂದು ಮಾಜಿ ಆಲ್‌ರೌಂಡರ್ ತಿಳಿಸಿದ್ದಾರೆ.
ರೋಹಿತ್ ಶರ್ಮಾಗೆ ಫುಟ್‌ವರ್ಕ್ ಸಮಸ್ಯೆ
“ಆದರೆ, ರೋಹಿತ್ ಶರ್ಮಾರ ಫುಟ್‌ವರ್ಕ್ ಅನ್ನು ಆಸ್ಟ್ರೇಲಿಯಾ ಬೌಲರ್‌ಗಳು ಸದುಪಯೋಗಪಡಿಸಿಕೊಂಡಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್‌ಗೂ ಕೂಡ ಇದೇ ಬೇಕಾಗಿತ್ತು. ಅಂದ ಹಾಗೆ ಬ್ಯಾಟಿಂಗ್ ನಡೆಸುವಾಗಲೂ ಅವರ (ಪ್ಯಾಟ್ ಕಮಿನ್ಸ್) ಕಣ್ಣುಗಳಲ್ಲಿ ದೃಢತೆ ಎದ್ದು ಕಾಣುತ್ತಿತ್ತು,” ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
“ರೋಹಿತ್ ಶರ್ಮಾ ಫುಟ್‌ವರ್ಕ್ ಸಮಸ್ಯೆಯಿಂದ ವಿಕೆಟ್ ಒಪ್ಪಿಸುತ್ತಿದ್ದಾರೆ. ಅವರು ತಮ್ಮ ವೃತ್ತಿ ಜೀವನದ ಉತ್ತಮ ಹಂತದಲ್ಲಿದ್ದಾಗ ಅವರ ಫ್ರಂಟ್ ಫುಟ್ ಚೆಂಡಿನ ಪಿಚ್‌ಗೆ ಕ್ಲೋಸ್ ಆಗಿ ಇರುತ್ತಿತ್ತು. ಆದರೆ, ಈಗ ಅವರು ಫ್ರಂಟ್ ಫುಟ್ ಚಲನೆ ಇಲ್ಲದೆ, ಒಂದೇ ಕಡೆ ಅಂಟಿಕೊಂಡಿದೆ. ಕೇವಲ ಬ್ಯಾಟ್ ಮಾತ್ರ ಚೆಂಡಿನ ಬಳಿ ಹೋಗುತ್ತಿದೆ. ಅಲ್ಲದೆ ಅವರ ದೇಹ ಕೂಡ ಚೆಂಡಿನಿಂದ ದೂರವಿದೆ,” ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.
“ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾ ಬೌಲರ್‌ಗಳು ಉತ್ತಮವಾಗಿ ಬೌಲ್ ಮಾಡಿದ್ದಾರೆ. ಆಸೀಸ್ ಬೌಲರ್‌ಗಳು ಹೆಚ್ಚಿನ ನಿಯಂತ್ರಣವನ್ನು ಹೊಂದಿದ್ದರು. ಆಸ್ಟ್ರೇಲಿಯಾ ಒಂದು ವಿಭಾಗವಾಗಿ ಬೌಲ್ ಮಾಡಿದೆ,” ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಪರ್ತ್ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಬಳಿಕ ಇನ್ನುಳಿದ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 7, 11, 3, 36 ಮತ್ತು 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಮತ್ತೊಂದೆಡೆ ರೋಹಿತ್ ಶರ್ಮಾ 3, 6, 10, 3 ಮತ್ತು 9 ರನ್‌ಗಳಿಗೆ ಸೀಮಿತರಾಗಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ಒಂದೇ ಓವರ್‌ನಲ್ಲಿ ರೋಹಿತ್ ಶರ್ಮಾ, ರಾಹುಲ್ ವಿಕೆಟ್ ಕಿತ್ತ ಪ್ಯಾಟ್ ಕಮಿನ್ಸ್!