Friday, 27th December 2024

IND vs AUS: ಸ್ಯಾಮ್‌ ಕೋನ್‌ಸ್ಟಸ್‌ರನ್ನು ಗುದ್ದಿದ ವಿರಾಟ್‌ ಕೊಹ್ಲಿಯನ್ನು ಟೀಕಿಸಿದ ರಿಕಿ ಪಾಂಟಿಂಗ್‌!

ಮೆಲ್ಬರ್ನ್‌: ಆಸ್ಟ್ರೇಲಿಯಾ ತಂಡದ ಯುವ ಬ್ಯಾಟ್ಸ್‌ಮನ್‌ ಸ್ಯಾಮ್‌ ಕೋನ್‌ಸ್ಟಸ್‌ ಅವರನ್ನು ತಮ್ಮ ಭುಜದಿಂದ ಗುದ್ದಿ, ಮಾತಿನ ಚಕಮಕಿ ನಡೆಸಿದ್ದ ಭಾರತ ತಂಡದ (IND vs AUS) ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನು ಆಸೀಸ್‌ ಮಾಜಿ ನಾಯಕ ಹಾಗೂ ದಿಗ್ಗಜ ರಿಕಿ ಪಾಂಟಿಂಗ್‌ ಟೀಕಿಸಿದ್ದಾರೆ.

ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಗುರುವಾರ ಆರಂಭವಾಗಿದ್ದ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ಆರಂಭಿಕ ಸೆಷನ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಮೆಲ್ಬರ್ನ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ ಪದಾರ್ಪಣೆ ಮಾಡಿದ್ದ ಕೋನ್‌ಸ್ಟಸ್‌, ಓಪನರ್‌ ಆಗಿ ಕ್ರೀಸ್‌ಗೆ ಬಂದು ಉತ್ತಮ ಆರಂಭವನ್ನು ಪಡೆದಿದ್ದರು. ಈ ವೇಳೆ ಪಿಚ್‌ ಬದಿ ನಡೆದುಕೊಂಡು ತಮ್ಮ ಗ್ಲೌಸ್‌ ಅನ್ನು ಸರಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ ವಿರಾಟ್‌ ಕೊಹ್ಲಿ ಆಸೀಸ್‌ ಬ್ಯಾಟ್ಸ್‌ಮನ್‌ ಭುಜಕ್ಕೆ ಗುದ್ದಿದರು. ಇದಾದ ಬಳಿಕ ವಿರಾಟ್‌ ಕೊಹ್ಲಿ ಹಾಗೂ ಸ್ಯಾಮ್‌ ಕೋನ್‌ಸ್ಟಸ್‌ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು.

IND vs AUS: ವಿರಾಟ್‌ ಕೊಹ್ಲಿ-ಸ್ಯಾಮ್‌ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್‌

ಈ ವೇಳೆ ಉಸ್ಮಾನ್‌ ಖವಾಜ ಹಾಗೂ ಫೀಲ್ಡ್‌ ಅಂಪೈರ್‌ಗಳು ಮಧ್ಯ ಪ್ರವೇಶಿದ ಈ ಇಬ್ಬರನ್ನು ಶಾಂತಗೊಳಿಸಿದ್ದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್‌ ಆಗಿತ್ತು. ಈ ವಿಡಿಯೊದಲ್ಲಿ ವಿರಾಟ್‌ ಕೊಹ್ಲಿಯೇ ಬೇಕೆಂದು ಯುವ ಬ್ಯಾಟ್ಸ್‌ಮನ್‌ಗೆ ಡಿಕ್ಕಿ ಹೊಡೆದಿರುವ ಹಾಗೆ ಕಾಣುತ್ತಿದೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ಬಗ್ಗೆ ಕೆಲ ಮಾಜಿ ಕ್ರಿಕೆಟಿಗರು ವಿರಾಟ್‌ ಕೊಹ್ಲಿಯ ನಡೆಯನ್ನು ಟೀಕಿಸಿದ್ದಾರೆ. ಅದರಂತೆ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್‌ ಭಾರತದ ಮಾಜಿ ನಾಯಕನ ನಡೆಯನ್ನು ಖಂಡಿಸಿದ್ದಾರೆ.

ವಿರಾಟ್‌ ಕೊಹ್ಲಿಯನ್ನು ಟೀಕಿಸಿದ ಪಾಂಟಿಂಗ್‌

ಚಾಲೆನ್‌ 7 ಜೊತೆ ಮಾತನಾಡಿದ ರಿಕಿ ಪಾಂಟಿಂಗ್‌, “ವಿರಾಟ್‌ ಕೊಹ್ಲಿ ನಡೆದುಕೊಂಡು ಬರುತ್ತಿದ್ದ ಹಾದಿಯನ್ನು ನೀವು ಒಮ್ಮೆ ಗಮನಿಸಬಹುದು. ವಿರಾಟ್ ಕೊಹ್ಲಿ ಪಿಚ್‌ನ ತಮ್ಮ ಬಲ ಭಾಗದತ್ತ ನಡೆದುಕೊಂಡು ಬಂದರು ಮತ್ತು ಪರಸ್ಪರ ಡಿಕ್ಕಿ ಹೊಡೆಯುವುದನ್ನು ಪ್ರಚೋದಿಸಿದರು. ಈ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲ,” ಎಂದು ದೂರಿದ್ದಾರೆ.

“ಈ ಘಟನೆಯು ಅಂಪೈರ್‌ಗಳು ಹಾಗೂ ಮ್ಯಾಚ್‌ ರೆಫರಿಗಳಿಗೆ ಚೆನ್ನಾಗಿ ಕಂಡಿದೆ ಎಂದು ನಾನು ಭಾವಿಸುತ್ತೇನೆ. ಈ ವೇಳೆ ಫೀಲ್ಡರ್‌ಗಳು ಕೂಡ ಬಹುತೇಕ ಬ್ಯಾಟ್ಸ್‌ಮನ್‌ಗಳ ಸನಿಹವಿದ್ದರು. ಬ್ಯಾಟ್ಸ್‌ಮನ್‌ಗಳು ಎಲ್ಲಿ ಒಟ್ಟುಗೂಡುತ್ತಾರೆ ಮತ್ತು ಒಟ್ಟಿಗೆ ಸೇರುತ್ತಾರೆ ಎಂದು ಮೈದಾನದಲ್ಲಿರುವ ಪ್ರತಿಯೊಬ್ಬ ಫೀಲ್ಡರ್‌ಗೂ ತಿಳಿದಿದೆ,” ಎಂದು ಆಸೀಸ್‌ ಮಾಜಿ ನಾಯಕ ಹೇಳಿದ್ದಾರೆ.

“ಸ್ಯಾಮ್‌ ಕೋನ್‌ಸ್ಟಾಸ್‌ ಅವರು ನಿಜವಾಗಿಯೂ ತಡವಾಗಿ ನೋಡುತ್ತಿರುವುದು ನನಗೆ ಕಾಣುತ್ತದೆ; ಅವರ ಮುಂದೆ ಯಾತು ಇದ್ದಾರೆಂದು ಅವರಿಗೆ ತಿಳಿದಿರಲಿಲ್ಲ. ಆ ವ್ಯಕ್ತಿ (ಕೊಹ್ಲಿ) ಆನ್‌ಸ್ಕ್ರೀನ್‌ಗೆ ಉತ್ತರಿಸಲು ಕೆಲವು ಪ್ರಶ್ನೆಗಳನ್ನು ಹೊಂದಿರಬಹುದು, ” ಎಂದು ಅವರು ತಿಳಿಸಿದ್ದಾರೆ.

IND vs AUS: ʻಆಕಸ್ಮಿಕವಾಗಿ ಗುದ್ದಿದ್ದಾರೆʼ-ವಿರಾಟ್‌ ಕೊಹ್ಲಿಯ ವರ್ತನೆ ಬಗ್ಗೆ ಸ್ಯಾಮ್‌ ಕೋನ್‌ಸ್ಟಸ್‌ ಹೇಳಿಕೆ!

ಮೊದಲನೇ ದಿನ ಆಸ್ಟ್ರೇಲಿಯಾ ಪ್ರಾಬಲ್ಯ

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ ಮೊದಲನೇ ದಿನ ಪ್ರಾಬಲ್ಯ ಸಾಧಿಸಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 86 ಓವರ್‌ಗಳಿಗೆ ಆರು ವಿಕೆಟ್‌ಗಳ ನಷ್ಟಕ್ಕೆ 311 ರನ್‌ಗಳನ್ನು ಕಲೆ ಹಾಕಿದೆ. ಕ್ರೀಸ್‌ನಲ್ಲಿ ಸ್ಟೀವನ್‌ ಸ್ಮಿತ್‌ (68) ಹಾಗೂ ಪ್ಯಾಟ್‌ ಕಮಿನ್ಸ್‌ (8) ಅವರು ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.