Thursday, 26th December 2024

IND vs AUS: ʻಸ್ಯಾಮ್‌ ಕೋನ್‌ಸ್ಟಸ್‌ ಭುಜಕ್ಕೆ ಗುದ್ದಿದ ವಿರಾಟ್‌ʼ-ಅಮಾನತು ಭೀತಿಯಲ್ಲಿ ಕಿಂಗ್‌ ಕೊಹ್ಲಿ!

IND vs AUS: Virat Kohli At Risk Of Facing ICC Ban After Shoulder Tackle With Sam Konstas During Boxing day Test At MCG

ಮೆಲ್ಬರ್ನ್‌: ಆಸ್ಟ್ರೇಲಿಯಾ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಸ್ಯಾಮ್‌ ಕೋನ್‌ಸ್ಟಸ್‌ ಅವರ ಎದುರು ಅನುಚಿತ ವರ್ತನೆ ತೋರಿದ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಮಾನತು ಭೀತಿಗೆ ಒಳಗಾಗಿದ್ದಾರೆ. ಗುರುವಾರ ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆರಂಭವಾದ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ (IND vs AUS) ಆರಂಭಿಕ ದಿನ ಡೆಬ್ಯೂಟಂಟ್‌ ಸ್ಯಾಮ್‌ ಕೋನ್‌ಸ್ಟಸ್‌ ಅವರನ್ನು ವಿರಾಟ್‌ ಕೊಹ್ಲಿ ತಮ್ಮ ಭುಜದ ಮೂಲಕ ಗುದ್ದಿದ್ದರು. ತದ ನಂತರ ಈ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಉಸ್ಮಾನ್‌ ಖವಾಜ ಮಧ್ಯ ಪ್ರವೇಶಿ ಇಬ್ಬರನ್ನೂ ಶಾಂತಗೊಳಿಸಿದ್ದರು.

ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಇದರ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳು ಕಾಮೆಂಟ್‌ ಹಾಕುತ್ತಿದ್ದಾರೆ. ಈ ವಿಡಿಯೊವನ್ನು ಗಮನಿಸಿದರೆ, ವಿರಾಟ್‌ ಕೊಹ್ಲಿಯ ಅನುಚಿತ ವರ್ತನೆ ಮೇಲ್ನೋಟಕ್ಕೆ ಕಾಣುತ್ತದೆ. ರಿಕಿ ಪಾಟಿಂಗ್‌ ಸೇರಿದಂತೆ ಕೆಲ ಮಾಜಿ ಕ್ರಿಕೆಟಿಗರು ಟೀಮ್‌ ಇಂಡಿಯಾ ಮಾಜಿ ನಾಯಕನ ನಡೆಯನ್ನು ಟೀಕಿಸಿದ್ದಾರೆ. ಸ್ಯಾಮ್‌ ಕೋನ್‌ಸ್ಟಸ್‌ ಅವರನ್ನು ಭುಜದ ಮೂಲಕ ಗುದ್ದಿದ್ದ ವಿರಾಟ್‌ ಕೊಹ್ಲಿ ಐಸಿಸಿ ನಿಯಮವನ್ನು ಉಲ್ಲಂಘಿಸಿದ್ದಾರೆಯೇ? ಐಸಿಸಿ ನಿಯಮ ಏನು ಹೇಳುತ್ತದೆ? ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

IND vs AUS: ವಿರಾಟ್‌ ಕೊಹ್ಲಿ-ಸ್ಯಾಮ್‌ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್‌

ಅಮಾನತು ಶಿಕ್ಷೆಗೆ ಗುರಿಯಾಗ್ತಾರಾ ವಿರಾಟ್‌ ಕೊಹ್ಲಿ?

ವಿರಾಟ್‌ ಕೊಹ್ಲಿ ಎದುರಾಳಿ ಆಟಗಾರ ಸ್ಯಾಮ್‌ ಕೋನ್‌ಸ್ಟಸ್‌ ಅವರ ಭುಜವನ್ನು ಗುದ್ದುವ ಮೂಲಕ ಐಸಿಸಿ ನಿಯಮ ಉಲ್ಲಂಘಿಸಿದ್ದಾರೆಂದು ಕಂಡುಬಂದರೆ ಭಾರತದ ಮಾಜಿ ನಾಯಕ ಅಮಾನತು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಐಸಿಸಿಯ 2.12 ನಿಯಮದ ಪ್ರಕಾರ ಯಾವುದೇ ಆಟಗಾರ ಪಂದ್ಯದ ವೇಳೆ ಅನುಚಿತ ದೈಹಿಕ ಸಂಪರ್ಕವನ್ನು ಮಾಡುವಂತಿಲ್ಲ. ಒಂದು ಇದು ನಡೆದರೆ ಐಸಿಸಿ ನಿಯಮ ಉಲ್ಲಂಘಿಸಿದಂತಾಗುತ್ತದೆ. ಆಟಗಾರರು ಉದ್ದೇಶಪೂರ್ವಕವಾಗಿ ಇನ್ನೊಬ್ಬ ಆಟಗಾರ ಅಥವಾ ಅಂಪೈರ್‌ನೊಂದಿಗೆ ದೈಹಿಕವಾಗಿ ಅನುಚಿತ ವರ್ತನೆ ತೋರುವುದನ್ನು ತಡೆಯುವ ಸಲುವಾಗಿ ಐಸಿಸಿ ಈ ನಿಯಮವನ್ನು ಜಾರಿಗೆ ತಂದಿದೆ.

ಅಂದಹಾಗೆ ವಿಡಿಯೊದಲ್ಲಿ ವಿರಾಟ್‌ ಕೊಹ್ಲಿಯೇ ಉದ್ದೇಶ ಪೂರ್ವಕವಾಗಿ ಎದುರಾಳಿ ಬ್ಯಾಟ್ಸ್‌ಮನ್‌ ಸ್ಯಾಮ್‌ ಕೋನ್‌ಸ್ಟಸ್‌ ಅವರ ಭುಜಕ್ಕೆ ಗುದ್ದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಈ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಿ ಪರಿಶೀಲನೆ ನಡೆಸಬಹುದು. ಒಂದು ವೇಳೆ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದಿದ್ದರೆ ವಿರಾಟ್‌ ಕೊಹ್ಲಿಗೆ ಐಸಿಸಿ ಸೂಕ್ತ ಶಿಕ್ಷೆಯನ್ನು ನೀಡಬಹುದು.

ಚೊಚ್ಚಲ ಅರ್ಧಶತಕ ಸಿಡಿಸಿದ ಸ್ಯಾಮ್‌ ಕೋನ್‌ಸ್ಟಸ್‌

ತಮ್ಮ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿಯೇ ಸ್ಯಾಮ್‌ ಕೋನ್‌ಸ್ಟಸ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಗಮನ ಸೆಳೆದರು. ಕೇವಲ 52 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದ ಅವರು, ಟೆಸ್ಟ್‌ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಆಸ್ಟ್ರೇಲಿಯಾದ ಎರಡನೇ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇವರು ರವೀಂದ್ರ ಜಡೇಜಾಗೆ ವಿಕೆಟ್‌ ಒಪ್ಪಿಸುವುದಕ್ಕೂ ಮುನ್ನ 62 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಆಡು ಬೌಂಡರಿಗಳೊಂದಿಗೆ 60 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಆಸ್ಟ್ರೇಲಿಯಾ ತಂಡ ಭರ್ಜರಿ ಆರಂಭಕ್ಕೆ ಕಾರಣರಾಗಿದ್ದರು.

ಈ ಸುದ್ದಿಯನ್ನು ಓದಿ: Sam Konstas: ರಿವರ್ಸ್‌ ಸ್ಕೂಪ್‌ ಮೂಲಕ ಸಿಕ್ಸರ್‌, 3 ವರ್ಷಗಳ ಬಳಿಕ ಸಿಕ್ಸ್‌ ಹೊಡೆಸಿಕೊಂಡ ಬುಮ್ರಾ! ವಿಡಿಯೊ