Friday, 27th December 2024

Clown kohli: ವಿರಾಟ್‌ ಕೊಹ್ಲಿಯನ್ನು ಅವಮಾನಿಸಿದ ಆಸ್ಟ್ರೇಲಿಯಾ ಪತ್ರಿಕೆ!

IND vs AUS: Virat Kohli Branded "Clown",-Australian Media Insults India Great Over Sam Konstas Incident

ಮೆಲ್ಬರ್ನ್‌: ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಆಸ್ಟ್ರೇಲಿಯಾ ತಂಡದ ಸ್ಯಾಮ್‌ ಕೋನ್‌ಸ್ಟಸ್‌ ಅವರ ಎದುರು ಮಾತಿನ ಚಕಮಕಿ ನಡೆಸಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನು ಆಸ್ಟ್ರೇಲಿಯಾ ಮಾಧ್ಯಮಗಳು (Clown kohli) ಅವಮಾನಿಸಿವೆ. ವಿರಾಟ್‌ ಕೊಹ್ಲಿಯನ್ನು ಗೋಸುಂಬೆ ಎಂದು ಟೀಕಿಸಿವೆ.

ಸ್ಯಾಮ್‌ ಕೋನ್‌ಸ್ಟಸ್‌ ಅವರು ಗುರುವಾರ ಭಾರತ ವಿರುದ್ಧದ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಸ್ಯಾಮ್‌ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಮಾರಕ ವೇಗಿ ಜಸ್‌ಪ್ರೀತ್‌ ಬುಮ್ರಾ ಸೇರಿದಂತೆ ಟೀಮ್‌ ಇಂಡಿಯಾ ಬೌಲರ್‌ಗಳ ಎದುರು ಯುವ ಬ್ಯಾಟ್ಸ್‌ಮನ್‌ ದಿಟ್ಟ ಆಟವನ್ನು ತೋರಿದರು. ಅದರಲ್ಲಿಯೂ ವಿಶೇಷವಾಗಿ ಬುಮ್ರಾಗೆ ರಿವರ್ಸ್‌ ಸ್ಕೂಪ್‌ ಮೂಲಕ ಅವರು ಸಿಕ್ಸರ್‌ ಬಾರಿಸಿ ಅಚ್ಚರಿ ಮೂಡಿಸಿದ್ದರು.

IND vs AUS: ಸ್ಯಾಮ್‌ ಕೋನ್‌ಸ್ಟಸ್‌ರನ್ನು ಗುದ್ದಿದ ವಿರಾಟ್‌ ಕೊಹ್ಲಿಯನ್ನು ಟೀಕಿಸಿದ ರಿಕಿ ಪಾಂಟಿಂಗ್‌!

ವಿರಾಟ್‌ ಕೊಹ್ಲಿ-ಸ್ಯಾಮ್‌ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ

ಅಂದ ಹಾಗೆ ಬ್ಯಾಟಿಂಗ್‌ ವೇಳೆ ವಿರಾಟ್‌ ಕೊಹ್ಲಿ ಹಾಗೂ ಸ್ಯಾಮ್‌ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಂದರೆ, ಪಿಚ್‌ನಲ್ಲಿ ನಡೆದುಕೊಂಡು ಬರುತ್ತಿದ್ದ ಸ್ಯಾಮ್‌ ಕೋನ್‌ಸ್ಟಸ್‌ ಅವರನ್ನು ವಿರಾಟ್‌ ಕೊಹ್ಲಿ ಭುಜದಿಂದ ಗುದ್ದಿದ್ದರು. ಈ ವೇಳೆ ಈ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಸೀಸ್‌ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ಅವರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದರು. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ವಿಡಿಯೊದಲ್ಲಿ ವಿರಾಟ್‌ ಕೊಹ್ಲಿಯೇ ಉದ್ದೇಶ ಪೂರ್ವಕವಾಗಿ ಅನುಚಿತ ವರ್ತನೆ ತೋರಿರುವುದನ್ನು ಕಾಣಬಹುದು. ರಿಕಿ ಪಾಂಟಿಂಗ್‌, ಸುನೀಲ್‌ ಗವಾಸ್ಕರ್‌ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಕೊಹ್ಲಿ ನಡೆಯನ್ನು ಟೀಕಿಸಿದ್ದರು.

ವಿರಾಟ್‌ ಕೊಹ್ಲಿಯನ್ನು ʻಗೋಸುಂಬೆʼ ಎಂದು ಟೀಕಿಸಿದ ಆಸ್ಟ್ರೇಲಿಯಾ ಮಾಧ್ಯಮ

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನಾ ಆಸ್ಟ್ರೇಲಿಯಾ ಮಾಧ್ಯಮಗಳು ಶ್ಲಾಘಿಸಿದ್ದವು. ಆದರೆ, ಆದರೆ, ಸ್ಯಾಮ್‌ ಕೋನ್‌ಸ್ಟಸ್‌ ಅವರಿಗೆ ಸಂಬಂಧಿಸಿದ ಘಟನೆಯ ಬಳಿಕ ಆಸ್ಟ್ರೇಲಿಯಾ ಮಾಧ್ಯಮಗಳು ವಿರಾಟ್‌ ಕೊಹ್ಲಿ ವಿಷಯದಲ್ಲಿ ಯೂಟರ್ನ್‌ ಹೊಡೆದಿವೆ ಹಾಗೂ ಭಾರತದ ಮಾಜಿ ನಾಯಕನನ್ನು ಅವಮಾನಿಸಿವೆ. ಅದರಲ್ಲಿಯೂ ಶುಕ್ರವಾರ ಬೆಳಗಿನ ಪತ್ರಿಕೆಗಳು ವಿರಾಟ್‌ ಕೊಹ್ಲಿಯನ್ನು ʼಗೋಸುಂಬೆʼ ಎಂದು ಅವಮಾನಿಸಿವೆ. ʻದಿ ವೆಸ್ಟ್‌ ಆಸ್ಟ್ರೇಲಿಯನ್‌ʼ ದಿನ ಪತ್ರಿಕೆಯು ʻಕ್ಲೌನ್‌ ಕೊಹ್ಲಿʼ (ಗೋಸುಂಬೆ ಕೊಹ್ಲಿ) ಎಂಬ ಶೀರ್ಷಿಕೆಯನ್ನು ನೀಡಿ ಟೀಕಿಸಿದೆ. ಅಲ್ಲದೆ ಭಾರತೀಯ ದಿಗ್ಗಜನನ್ನು ಅಳುವ ಮಗು ಅಥವಾ ಹೇಡಿ ಎಂತಲೂ ವ್ಯಂಗ್ಯವಾಡಿದೆ.

ಅತಿ ಹೆಚ್ಚು ಪ್ರತಿಗಳ ಮಾರಾಟ

ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಚೊಚ್ಚಲ ಅರ್ಧಶತಕ ಸಿಡಿಸಿದ್ದ ಸ್ಯಾಮ್‌ ಕೋನ್‌ಸ್ಟಸ್‌ ಅವರ ಹೆಸರನ್ನು ತೆಗೆದುಕೊಳ್ಳುವ ಬದಲು ಆಸ್ಟ್ರೇಲಿಯನ್‌ ಪತ್ರಿಕೆ, “ಕ್ಲೌನ್‌ ಕೊಹ್ಲಿ” ಹೆಸರನ್ನು ತೆಗೆದುಕೊಂಡಿತು. ಇದರಿಂದಾಗಿ ಈ ಪತ್ರಿಕೆಯ ಹೆಚ್ಚಿನ ಪ್ರತಿಗಳು ಮಾರಾಟವಾಗಿವೆ. ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದಲ್ಲಿಯೂ ದೊಡ್ಡ ಬ್ರ್ಯಾಂಡ್‌ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

ವಿರಾಟ್‌ ಕೊಹ್ಲಿಗೆ ದಂಡ ವಿಧಿಸಿದ ಐಸಿಸಿ

ಡೆಬ್ಯೂಟಂಟ್‌ ಸ್ಯಾಮ್‌ ಕೋನ್‌ಸ್ಟಸ್‌ ಅವರ ವಿರುದ್ಧ ಅನುಚಿತ ವರ್ತನೆ ತೋರಿ ಮಾತಿನ ಚಕಮಕಿ ನಡೆಸಿದ್ದ ವಿರಾಟ್‌ ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ದಂಡವನ್ನು ವಿಧಿಸಿದೆ. ಪಂದ್ಯದ ಸಂಭಾವನೆಯಲ್ಲಿ ಶೇ. 20 ರಷ್ಟು ದಂಡ ಹಾಗೂ ಒಂದು ಡೀಮೆರಿಟ್‌ ಅಂಕವನ್ನು ಟೀಮ್‌ ಇಂಡಿಯಾ ಮಾಜಿ ನಾಯಕನಿಗೆ ನೀಡಲಾಗಿದೆ.

ಈ ಸುದ್ದಿಯನ್ನು ಓದಿ: IND vs AUS: ವಿರಾಟ್‌ ಕೊಹ್ಲಿ-ಸ್ಯಾಮ್‌ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್‌