ನವದೆಹಲಿ: ಮುಂದಿನ ವರ್ಷ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಆಡಬೇಕೆಂದು ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ ಸಲಹೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AUS) ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಕಳೆದ ಮೂರು ಪಂದ್ಯಗಳಿಂದ ರೋಹಿತ್ ಶರ್ಮಾ ಅವರ ವೈಯಕ್ತಿಕ ಗರಿಷ್ಠ ಮೊತ್ತ ಕೇವಲ 10 ರನ್‌ಗಳು ಮಾತ್ರ. ಈ ಹಿನ್ನೆಲೆಯಲ್ಲಿ ಸಿಡ್ನಿ ಟೆಸ್ಟ್‌ನಿಂದ ರೋಹಿತ್ ಶರ್ಮಾಗೆ ವಿರಾಮ ನೀಡಲಾಗಿದೆ.
ಮತ್ತೊಂದು ಕಡೆ ವಿರಾಟ್ ಕೊಹ್ಲಿ ಪರ್ತ್ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದಬಳಿಕ ಇನ್ನುಳಿದ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ವಿರಾಟ್ ಈ ಟೆಸ್ಟ್ ಸರಣಿಯಲ್ಲಿ ಕ್ರಮವಾಗಿ 5, 100*, 7, 11, 3, 36, 5, 17 ಹಾಗೂ 6 ರನ್‌ಗಳಿಗೆ ಸೀಮಿತರಾಗಿದ್ದಾರೆ. ಆ ಮೂಲಕ ಅವರು 295 ರನ್‌ಗಳನ್ನು ಗಳಿಸಿದ್ದಾರೆ, ಆದರೂ, ಆಫ್ ಸ್ಟಂಪ್ ಹೊರಗಡೆಯ ಎಸೆತಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ.
ಕೊಹ್ಲಿ-ರೋಹಿತ್ ಕೌಂಟಿ ಕ್ರಿಕೆಟ್ ಆಡಬೇಕೆಂದ ಮಾಂಜ್ರೇಕರ್
ವಿರಾಟ್ ಕೊಹ್ಲಿ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಆತ್ಮ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಹಾಗೂ ರೋಹಿತ್ ಶರ್ಮಾ ಕೂಡ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಕೌಂಟಿ ಕ್ರಿಕೆಟ್‌ನಲ್ಲಿ ಹೆಚ್ಚಿನ ರನ್ ಗಳಿಸಿ ಆಯ್ಕೆದಾರರ ಗಮನ ಸೆಳೆಯಬೇಕೆಂದು ಸಲಹೆ ನೀಡಿದ್ದಾರೆ.
“ವಿರಾಟ್ ಕೊಹ್ಲಿ ತಮ್ಮ ದೇಹದ ಮೇಲೆ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ. ತಮ್ಮ ಕಾರ್ಯಕ್ಷಮತೆ ಮತ್ತು ದೃಡತೆಯೊಂದಿಗೆ ತಮ್ಮ ಕಡೆಯಿಂದ ಅತ್ಯುತ್ತಮವಾದುದನ್ನು ಅವರು ತಂಡಕ್ಕೆ ನೀಡುತ್ತಿದ್ದಾರೆ. ಆದರೂ ಅವರಲ್ಲಿ ಆತ್ಮ ವಿಶ್ವಾಸದ ಕೊರತೆ ಕಾಡುತ್ತಿದೆ. ಅವರು ತನ್ನನ್ನು ತಾವು ಬೆಂಬಲಿಸುತ್ತಿದ್ದಾರೆ ಹಾಗೂ ತಮ್ಮ ಫಿಟ್ನೆಸ್ ಹಾಗೂ ಆಟದ ಮೂಲಕ ತಂಡಕ್ಕೆ ಅತ್ಯುತ್ತಮ ಅವಕಾಶವನ್ನು ನೀಡುತ್ತಿದ್ದಾರೆ. ಆದರೆ, ಅವರು ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿರುವುದು ಕಾಣುತ್ತಿದೆ. ಇದರ ಜೊತೆಗೆ ಅವರಲ್ಲಿ ವಿಶ್ವಾಸದ ಕೊರತೆ ಕೂಡ ಎದ್ದು ಕಾಣುತ್ತಿದೆ,” ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಸಂಜಯ್ ಮಾಂಜ್ರೇಕರ್ ತಿಳಿಸಿದ್ದಾರೆ.
“ಭಾರತ ತಂಡದ ಮುಂದಿನ ಟೆಸ್ಟ್ ಸರಣಿ ಇಂಗ್ಲೆಂಡ್‌ನಲ್ಲಿ ನಡೆಯಲಿದೆ, ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಕಠಿಣ ಸವಾಲು ಎದುರಾಗಲಿದೆ. ಆಂಗ್ಲರ ನಾಡಿನಲ್ಲಿಯೂ ಚೆಂಡು ಆಫ್ ಸ್ಟಂಪ್ ಹೊರಗಡೆ ಸ್ವಿಂಗ್ ಆಗಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಇದೇ ರೀತಿ ಆಡಿದರೆ ಅವರನ್ನು ಆಯ್ಕೆದಾರರು ಬೆಂಬಲಿಸುವುದಿಲ್ಲ. ಹಾಗಾಗಿ ಅವರು ಕೌಂಟಿ ಚಶಂಪಿಯನ್‌ಷಿಪ್‌ನಲ್ಲಿ ಆಡಿ ನಾವು ಆಡಲು ಸಮರ್ಥರಿದ್ದೇವೆಂಬುದನ್ನು ಆಯ್ಕೆದಾರರ ಎದುರು ಸಾಬೀತುಪಡಿಸಬೇಕಾದ ಅಗತ್ಯವಿದೆ,” ಎಂದು ಮಾಜಿ ಕ್ರಿಕೆಟಿಗ ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ಭಾರತಕ್ಕೆ 145 ರನ್ ಮುನ್ನಡೆ, ಸಿಡ್ನಿ ಟೆಸ್ಟ್‌ನಲ್ಲಿ ಅತ್ಯಂತ ಯಶಸ್ವಿ ರನ್ ಚೇಸ್ ಎಷ್ಟು?