Sunday, 22nd December 2024

IND vs AUS: ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೇಗಿದೆ? ಇಲ್ಲಿದೆ ಮಾಹಿತಿ!

IND vs AUS: What is Team India's record in the coveted Boxing Day Test?

ಮೆಲ್ಬರ್ನ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ (IND vs AUS) ಡಿಸೆಂಬರ್‌ 26 ರಂದು ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆರಂಭವಾಗಲಿದೆ. ಆರಂಭಿಕ ಮೂರು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ.
ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳಿಂದ ಗೆಲುವು ಪಡೆದಿದ್ದರೆ, ಎರಡನೇ ಟೆಸ್ಟ್‌ನಲ್ಲಿ 10 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ನಂತರ ಮೂರನೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು.

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ನಿಮಿತ್ತ ಇನ್ನುಳಿದ ಎರಡೂ ಟೆಸ್ಟ್‌ ಪಂದ್ಯಗಳು ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳಿಗೆ ಅತ್ಯಂತ ನಿರ್ಣಾಯಕವಾಗಿವೆ. ಟೀಮ್‌ ಇಂಡಿಯಾ ಫೈನಲ್‌ಗೆ ಅರ್ಹತೆ ಪಡೆಯಬೇಕೆಂದರೆ, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಿದೆ. ಒಂದು ವೇಳೆ ಇದರಲ್ಲಿ ಒಂದು ಪಂದ್ಯದಲ್ಲಿ ಭಾರತ ಸೋತರೂ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಾದಿ ಕಠಿಣವಾಗಲಿದೆ. ಆಸ್ಟ್ರೇಲಿಯಾದ ಲೆಕ್ಕಾಚಾರ ಕೂಡ ಇದೇ ರೀತಿ ಇದೆ.

ಈ ಹಿನ್ನೆಲೆಯಲ್ಲಿ ಮೂರನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ನಿರ್ಣಾಯಕವಾಗಿದೆ. ಡಿಸೆಂಬರ್‌ 26ರಂದು ಆರಂಭವಾಗಲಿರುವ ಪಂದ್ಯಕ್ಕೆ ದಾಖಲೆಯ ಸಂಖ್ಯೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಎಂಸಿಜಿಗೆ ಬರುವ ಸಾಧ್ಯತೆ ಇದೆ.

ಎಂಸಿಜಿಯಲ್ಲಿ ಒಟ್ಟಾರೆ ಆಡಿದ 14 ಟೆಸ್ಟ್‌ ಪಂದ್ಯಗಳಿಂದ ಭಾರತ ತಂಡ ಎಂಟು ಪಂದ್ಯಗಳಲ್ಲಿ ಸೋತಿದ್ದು, ನಾಲ್ಕರಲ್ಲಿ ಗೆಲುವು ಪಡೆದಿದೆ. ಇನ್ನುಳಿದ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ.ಆದರೆ, 2014ರ ಬಳಿಕ ಈ ಅಂಗಣದಲ್ಲಿ ಭಾರತ ಒಂದೇ ಒಂದು ಪಂದ್ಯದಲ್ಲಿಯೂ ಸೋತಿಲ್ಲ.

ಎಂಸಿಜೆಯಲ್ಲಿ ಭಾರತದ ಇತ್ತೀಚಿನ ಪ್ರದರ್ಶನ

2014-15ರ ಬಾರ್ಡರ್‌-ಗವಾಸ್ಕರ್‌ ಟ್ರೋಫಿ

2014-15ರ ಸಾಲಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೆಲ್ಬರ್ನ್‌ ಟೆಸ್ಟ್‌ನಲ್ಲಿ ಸ್ಟೀವನ್‌ ಸ್ಮಿತ್‌ (192 ರನ್‌) ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 530 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ್ದ ಭಾರತ ತಂಡ, ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಅವರ ಶತಕಗಳ ಬಲದಿಂದ 465 ರನ್‌ಗಳನ್ನು ಕಲೆ ಹಾಕಿತ್ತು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 318 ರನ್‌ಗಳಿಗೆ ಡಿಕ್ಲೆರ್‌ ಘೋಷಿಸಿತ್ತು. ನಂತರ ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ತೋರಿದ್ದರು. ಅಂತಿಮವಾಗಿ ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.

2018-19ರ ಬಾರ್ಡರ್‌-ಗವಾಸ್ಕರ್‌ ಟ್ರೋಫಿ

2018-19ರ ಸಾಲಿನ ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಬಾಕ್ಸಿಂಗ್‌ ಡೇ ಟಸ್ಟ್‌ ಪಂದ್ಯದಲ್ಲಿ ಭಾರತ ತಂಡ ಪ್ರಾಬಲ್ಯ ಮೆರೆಯುವ ಜೊತೆಗೆ ಭರ್ಜರಿ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ, ಚೇತೇಶ್ವರ್‌ ಪೂಜಾರ (106) ಶತಕ ಹಾಗೂ ವಿರಾಟ್‌ ಕೊಹ್ಲಿ (82) ಅರ್ಧಶತಕದ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 443 ರನ್‌ಗಳನ್ನು ಕಲೆ ಹಾಕಿ ಡಿಕ್ಲೆರ್‌ ಮಾಡಿಕೊಂಡಿತ್ತು. ಬಳಿಕ ಜಸ್‌ಪ್ರೀತ್‌ ಬುಮ್ರಾ ಮಾರಕ ಬೌಲಿಂಗ್‌ ದಾಳಿಯಿಂದ ಆಸ್ಟ್ರೇಲಿಯಾ ಎರಡೂ ಇನಿಂಗ್ಸ್‌ಗಳಲ್ಲಿ ಬಹುಬೇಗ ಆಲ್‌ಔಟ್‌ ಆಗಿತ್ತು. ಅಂತಿಮವಾಗಿ ಭಾರತ 137 ರನ್‌ಗಳಿಂದ ಗೆಲುವು ಪಡೆದಿತ್ತು.

2020-21ರ ಬಾರ್ಡರ್‌-ಗವಾಸ್ಕರ್‌ ಟ್ರೋಫಿ

2020-21ರ ಸಾಲಿನ ಮೆಲ್ಬರ್ನ್‌ ಟೆಸ್ಟ್‌ ಪಂದ್ಯದಲ್ಲಿಯೂ ಭಾರತ ತಂಡ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 195 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ್ದ ಭಾರತ ತಂಡ, ಅಜಿಂಕ್ಯ ರಹಾನೆ ಶತಕದ ಬಲದಿಂದ 100ಕ್ಕೂ ಅಧಿಕ ರನ್‌ ಮುನ್ನಡೆಯನ್ನು ಪಡೆದಿತ್ತು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಆಸ್ಟ್ರೇಲಿಯಾ ತಂಡ ಬಹುಬೇಗ ಆಲ್‌ಔಟ್‌ ಆಗಿತ್ತು. ಮೊಹಮ್ಮದ್‌ ಸಿರಾಜ್‌, ಜಸ್‌ಪ್ರೀತ್‌ ಬುಮ್ರಾ ಹಾಗೂ ಉಮೇಶ್‌ ಯಾದವ್‌ ಮಿಂಚಿನ ದಾಳಿ ನಡೆಸಿದ್ದರು. ಅಂತಿಮವಾಗಿ ಭಾರತ 8 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು.

ಈ ಸುದ್ದಿಯನ್ನು ಓದಿ: IND vs AUS: ರೋಹಿತ್‌ ಶರ್ಮಾ ವೈಫಲ್ಯಕ್ಕೆ ಕಾರಣ ತಿಳಿಸಿದ ಸುನೀಲ್‌ ಗವಾಸ್ಕರ್‌!