ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಐದನೇ ಟೆಸ್ಟ್ ಪಂದ್ಯದ (IND vs AUS) ದ್ವಿತೀಯ ಇನಿಂಗ್ಸ್‌ನಲ್ಲಿ ವೇಗಿ ಮಿಚೆಲ್ ಸ್ಟಾರ್ಕ್‌ಗೆ 16 ರನ್ ಸಿಡಿಸುವ ಮೂಲಕ ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್ ಇನಿಂಗ್ಸ್‌ನ ಮೊಟ್ಟ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ಯಶಸ್ವಿ ಜೈಸ್ವಾಲ್ ಭಾಜನರಾಗಿದ್ದಾರೆ. ಆ ಮೂಲಕ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಭಾರತ ತಂಡದ ದ್ವಿತೀಯ ಇನಿಂಗ್ಸ್‌ನ ಮೊದಲ ಓವರ್ ಅನ್ನು ಮಿಚೆಲ್ ಸ್ಟಾರ್ಕ್ ಬೌಲ್ ಮಾಡಿದರು. ಮೊದಲನೇ ಎಸೆತವನ್ನು ಡಾಟ್ ಮಾಡಿದ ಯಶಸ್ವಿ ಜೈಸ್ವಾಲ್, ನಂತರ 2, 3 ಮತ್ತು 4ನೇ ಎಸೆತಗಳಲ್ಲಿ ಹ್ಯಾಟ್ರಿಕ್ ಬೌಂಡರಿ ಸಿಡಿಸಿದರು. ನಂತರ ಐದನೇ ಎಸೆತವನ್ನು ಟಾಟ್ ಮಾಡಿದ ಅವರು, ಕೊನೆಯ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಿದರು. ಆ ಮೂಲಕ ಮೊದಲ ಓವರ್‌ನಲ್ಲಿಯೇ ಅವರು 16 ರನ್‌ಗಳನ್ನು ಸಿಡಿಸಿದರು.
Rishabh Pant: 50 ವರ್ಷದ ದಾಖಲೆ ಮುರಿದ ಪಂತ್
ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್‌ವೊಂದರ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವ ಮೂಲಕ ಯಶಸ್ವಿ ಜೈಸ್ವಾಲ್, ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ವೀರೇಂದ್ರ ಸೆಹ್ವಾಗ್ ಟೆಸ್ಟ್ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ 13 ರನ್‌ಗಳನ್ನು ಕಲೆ ಹಾಕಿದ್ದರು. 2005ರಲ್ಲಿ ಕೋಲ್ಕತಾ ಟೆಸ್ಟ್ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಸೆಹ್ವಾಗ್ ಈ ಸಾಧನೆ ಮಾಡಿದ್ದರು. 2023ರಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌ಗೆ ರೋಹಿತ್ ಶರ್ಮಾ ಕೂಡ 13 ರನ್‌ಗಳನ್ನು ಕಲೆ ಹಾಕಿದ್ದರು.
ಇದೀಗ 16 ರನ್‌ಗಳನ್ನು ಕಲೆ ಹಾಕುವ ಮೂಲಕ ಯಶಸ್ವಿ ಜೈಸ್ವಾಲ್ ಅವರು, ವೀರೇಂದ್ರ ಸೆಹ್ವಾಗ್ ಹಾಗೂ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನದಲ್ಲಿದ್ದಾರೆ. ಅಂದಹಾಗೆ ಸಿಡ್ನಿ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್ 35 ಎಸೆತಗಳಲ್ಲಿ 22 ರನ್‌ಗಳನ್ನು ಬಾರಿಸಿದ್ದರು. ಅಂತಿಮವಾಗಿ 10ನೇ ಓವರ್‌ನಲ್ಲಿ ಸ್ಕಾಟ್ ಬೋಲೆಂಡ್‌ಗೆ ಕ್ಲೀನ್ ಬೌಲ್ಡ್ ಆಗಿದ್ದರು. ಇದಕ್ಕೂ ಮುನ್ನ 8ನೇ ಓವರ್‌ನಲ್ಲಿ ಸ್ಕಾಟ್ ಬೋಲೆಂಡ್, ಕೆಎಲ್ ರಾಹುಲ್ (13) ಅವರನ್ನು ಔಟ್ ಮಾಡಿದ್ದರು. ನಂತರ ವಿರಾಟ್ ಕೊಹ್ಲಿಯನ್ನು ಕೂಡ ಬೋಲೆಂಡ್ ಪೆವಿಲಿಯನ್‌ಗೆ ಕಳುಹಿಸಿದ್ದರು.
ಭಾರತ: 141-6
ಇನ್ನು ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 32 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 141 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಟೀಮ್ ಇಂಡಿಯಾ ಸದ್ಯ 146 ರನ್‌ಗಳ ಮುನ್ನಡೆಯನ್ನು ಪಡೆದಿದೆ. ರವೀಂದ್ರ ಜಡಜಾ ಹಾಗೂ ವಾಷಿಂಗ್ಟನ್ ಸುಂದರ್ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ʻಅಷ್ಟೆ, ನಿಮ್ಮ ಕಥೆ ಮುಗಿಯಿತುʼ-ವಿರಾಟ್ ಕೊಹ್ಲಿ ವಿರುದ್ಧ ಫ್ಯಾನ್ಸ್ ಆಕ್ರೋಶ!