Tuesday, 7th January 2025

Yashasvi Jaiswal: ʻಆಸ್ಟ್ರೇಲಿಯಾದಲ್ಲಿ ಸಾಕಷ್ಟು ಕಲಿತಿದ್ದೇನೆʼ-ಯಶಸ್ವಿ ಜೈಸ್ವಾಲ್‌ ಪೋಸ್ಟ್‌ಗೆ ಮೆಚ್ಚುಗೆ!

IND vs AUS:'Learnt a lot in Australia'-Yashasvi Jaiswal Vows India Will Bounce Back

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಾಕಷ್ಟು ಕಲಿತಿದ್ದೇನೆಂದು ಹೇಳಿದ ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ (Yashasvi Jaiswal), ನಾವು ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡುತ್ತೇವೆಂದು ಭರವಸೆಯನ್ನು ನೀಡಿದ್ದಾರೆ. ಜೈಸ್ವಾಲ್‌ ಅವರ ಉತ್ತಮ ಬ್ಯಾಟಿಂಗ್‌ ಪ್ರದರ್ಶನದ ಹೊರತಾಗಿಯೂ ಭಾರತ ತಂಡ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯನ್ನು 1-3 ಅಂತರದಲ್ಲಿ ಸೋತಿತ್ತು. ಈ ಸರಣಿಯಲ್ಲಿ ಎಡಗೈ ಬ್ಯಾಟ್ಸ್‌ಮನ್‌43.44ರ ಸರಾಸರಿಯಲ್ಲಿ 391 ರನ್ ಗಳಿಸಿ ಎರಡನೇ ವೈಯಕ್ತಿಕ ಸ್ಕೋರರ್‌ ಎನಿಸಿಕೊಂಡಿದ್ದರು. ಪರ್ತ್‌ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಗಳಿಸಿದ್ದ 161 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ 295 ರನ್‌ಗಳಿಂದ ಗೆಲುವು ಪಡೆದಿತ್ತು.

ಆಸ್ಟ್ರೇಲಿಯಾ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ಮರಳಿದ ಯಶಸ್ವಿ ಜೈಸ್ವಾಲ್‌, ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಸೋಲು ಅನುಭವಿಸಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಕಲಿತಿದ್ದೇನೆ. ಆದರೆ, ನಾವು ಶಕ್ತಿಯುತವಾಗಿ ಕಮ್‌ಬ್ಯಾಕ್‌ ಮಾಡುತ್ತೇವೆಂಬ ಭರವಸೆಯನ್ನು ಅವರು ನೀಡಿದ್ದಾರೆ.

ಯಶಸ್ವಿ ಜೈಸ್ವಾಲ್‌ಗೆ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಇಂತಿದೆ

“ನಾನು ಆಸ್ಟ್ರೇಲಿಯಾದಲ್ಲಿ ಬಹಳಷ್ಟು ಕಲಿತಿದ್ದೇನೆ….ದುರದೃಷ್ಟವಶಾತ್, ಫಲಿತಾಂಶವು ನಾವು ನಿರೀಕ್ಷಿಸಿದಂತೆ ಇರಲಿಲ್ಲ ಆದರೆ, ನಾವು ಬಲವಾಗಿ ಕಮ್‌ಬ್ಯಾಕ್‌ ಮಾಡುತ್ತೇವೆ. ನಿಮ್ಮ ಬೆಂಬಲವೇ ನಮಗೆ ಎಲ್ಲಾ,” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಈ ರೀತಿಯ ಶೀರ್ಷಿಕೆಯನ್ನು ನೀಡಿದ್ದಾರೆ.

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದಿದ್ದ ಐದನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಟೀಮ್‌ ಇಂಡಿಯಾ ವಿಫಲವಾಯಿತು. ಅಂದ ಹಾಗೆ ಈ ಸರಣಿಯುಲ್ಲಿ ಯಶಸ್ವಿ ಜೈಸ್ವಾಲ್ ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಭಾರತ ತಂಡ, 2015ರ ಬಳಿಕ ಇದೇ ಮೊದಲ ಬಾರಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

Jasprit Bumrah: ಇಂಗ್ಲೆಂಡ್‌ ವಿರುದ್ಧದ ಸರಣಿ; ಬುಮ್ರಾಗೆ ವಿಶ್ರಾಂತಿ?

ಯಶಸ್ವಿ ಜೈಸ್ವಾಲ್‌ಗೆ ಉಸ್ಮಾನ್‌ ಖವಾಜ, ಮೈಕಲ್‌ ವಾನ್‌ ಮೆಚ್ಚುಗೆ

ಯಶಸ್ವಿ ಜೈಸ್ವಾಲ್‌ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ಮತ್ತು ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ನಿಮ್ಮ ಕಾರ್ಯವನ್ನು ಇಷ್ಟಪಟ್ಟಿದ್ದೇನೆ ಸಹೋದರ,” ಎಂದು ಯಶಸ್ವಿ ಜೈಸ್ವಾಲ್‌ ಪೋಸ್ಟ್‌ಗೆ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಉಸ್ಮಾನ್‌ ಖವಾಜ ಕಾಮೆಂಟ್‌ ಹಾಕಿ ಹೊಗಳಿದಿದ್ದಾರೆ.

ಇನ್ನು ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌, “ನೀವು ಸೂಪರ್‌….ನಿಮ್ಮ ಆಟ ನೋಡುವುದನ್ನು ಇಷ್ಟಪಟ್ಟಿದ್ದೇನೆ,” ಎಂದು ಕಾಮೆಂಟ್‌ ಹಾಕಿದ್ದಾರೆ.

ಈ ಸುದ್ದಿಯನ್ನು ಓದಿ: IND vs ENG: ʻವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ದೊಡ್ಡವರಲ್ಲʼ-ಹರ್ಭಜನ್‌ ಸಿಂಗ್‌ ಹೀಗೆನ್ನಲು ಕಾರಣವೇನು?

Leave a Reply

Your email address will not be published. Required fields are marked *