Saturday, 16th November 2024

IND vs BAN : ಬಾಂಗ್ಲಾ ವಿರುದ್ಧ ಟಿ20 ಸರಣಿಯಲ್ಲಿ ಭಾರತದ 3-0 ಕ್ಲೀನ್‌ ಸ್ವೀಪ್‌ ಸಾಧನೆ

IND vs BAN:

ಹೈದರಾಬಾದ್‌: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ (IND vs BAN) ಭಾರತ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಅದರಲ್ಲೂ ಹೈದರಾಬಾದ್‌ನಲ್ಲಿ ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ದಾಖಲೆಯ 133 ರನ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಪ್ರವಾಸಿ ಬಾಂಗ್ಲಾ ಬಳಗ ಟೆಸ್ಟ್‌ ಹಾಗೂ ಟಿ20 ಎರಡರಲ್ಲೂ ಹೀನಾಯ ಸೋಲು ಕಂಡು ತವರಿಗೆ ಮರಳುವಂತಾಯಿತು. ಪಾಕಿಸ್ತಾನವನ್ನು ಅವರ ದೇಶದಲ್ಲಿ ಸೋಲಿಸಿ ಹುಮ್ಮಸ್ಸಿನಿಂದ ಭಾರತಕ್ಕೆ ಬಂದಿದ್ದ ನಜ್ಮುಲ್ ಹೊಸೈನ್ ಶಾಂತೋ ನೇತೃತ್ವದ ಬಾಂಗ್ಲಾ ಬಳಗ ಭಾರತದಲ್ಲಿ ಸಂಪೂರ್ಣವಾಗಿ ನಿರಾಸೆಗೆ ಒಳಗಾಯಿತು.

ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ ವಿಶ್ವ ದಾಖಲೆಯ 297 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಹೀನಾಯವಾಗಿ ಸೋಲೊಪ್ಪಿಕೊಂಡಿತು. ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ಗ್ವಾಲಿಯರ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 7 ವಿಕೆಟ್ ಹಾಗೂ ಡೆಲ್ಲಿಯಲ್ಲಿ ನಡೆದ ಪಂದ್ಯದಲ್ಲಿ 86 ರನ್ ಗೆಲುವು ದಾಖಲಿಸಿತ್ತು.

ಭಾರತದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಆಡಿದ ಬಾಂಗ್ಲಾದೇಶ ತಂಡ ಆರಂಭದಲ್ಲಿಯೇ ವಿಕೆಟ್ ನಷ್ಟಮಾಡಿಕೊಂಡಿತು. ಆ ತಂಡದ ಬ್ಯಾಟರ್‌ಗಳಿಂದ ಹೆಚ್ಚಿನ ಪ್ರತಿರೋಧ ಬರಲಿಲ್ಲ. ಆಟಗಾರರು ಸ್ವಲ್ಪ ಮಟ್ಟಿನ ಸ್ಕೋರ್‌ಗಳನ್ನು ಬಾರಿಸಿ ಹಿಂದಿರುಗಿದರು. ಏತನ್ಮಧ್ಯೆ ತೌಹಿದ್ ಹೃದೋಯ್‌ 42 ಎಸೆತಕ್ಕೆ 63 ರನ್ ಬಾರಿಸಿ ಸ್ವಲ್ಪ ಆಧಾರವಾದರು. ಉಳಿದಂತೆ ತಂಜಿದ್ ಹಸನ್ 15 ರನ್‌, ಶಾಂತೊ 14 ರನ್‌, ಲಿಟನ್‌ ದಾಸ್ 42 ರನ್‌ ಬಾರಿಸಿದರು.

ಭಾರತದ ಭರ್ಜರಿ ಬ್ಯಾಟಿಂಗ್‌

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಪರ ಅಭಿಷೇಕ್ ಶರ್ಮಾ ಕೇವಲ 4 ರನ್‌ಗಳಿಗೆ ಔಟಾದರು. ಆದರೆ , ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಬಾಂಗ್ಲಾದ ಬೌಲರ್‌ಗಳನ್ನು ನಾಶ ಮಾಡಿದ್ದರು. ಬ್ಯಾಟ್‌ನಲ್ಲಿ ಅಸ್ಥಿರತೆ ಮತ್ತು ಸರಣಿಯಲ್ಲಿ ಇಲ್ಲಿಯವರೆಗೆ ಕಳಪೆ ಇನಿಂಗ್ಸ್‌ ಕಾರಣಕ್ಕೆ ಟೀಕೆಗೆ ಒಳಗಾಗಿದ್ದ ಸಂಜು ಸ್ಯಾಮ್ಸನ್‌ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಇದನ್ನೂ ಓದಿ: IND vs BAN: ಮೈದಾನದಲ್ಲೇ ಸಿರಾಜ್‌ಗೆ ಕ್ಷಮೆ ಕೇಳಿದ ಪಂತ್‌; ಕಾರಣವೇನು?

ಸ್ಯಾಮ್ಸನ್ ಮತ್ತು ಸೂರ್ಯ ಜೋಡಿ ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ಮನಬಂದಂತೆ ದಾಳಿ ನಡೆಸಿ, ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಸೂರ್ಯ ಕೇವಲ 23 ಎಸೆತಗಳಲ್ಲಿ ಅದ್ಭುತ ಅರ್ಧಶತಕ ದಾಖಲಿಸಿದರೆ, ಸ್ಯಾಮ್ಸನ್ ಕೇವಲ 22 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು. ಇದು ಟಿ20 ಪಂದ್ಯಗಳಲ್ಲಿ ಭಾರತೀಯರ ಅತಿ ವೇಗದ ಅರ್ಧಶತಕ. ಬಳಿಕ ಸಂಜು ಕೇವಲ 40 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಟಿ 20 ಪಂದ್ಯಗಳಲ್ಲಿ ಭಾರತೀಯ ವೇಗದ ಶತಕ ಮತ್ತು ಟೆಸ್ಟ್ ಆಡುವ ರಾಷ್ಟ್ರದ ಬ್ಯಾಟರ್‌ಗಳಿಸಿದ ನಾಲ್ಕನೇ ವೇಗದ ಶತಕ.

ಕಳೆದ ವರ್ಷ ಸೆಂಚೂರಿಯನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 13.5 ರನ್‌ಗಳಲ್ಲಿ 200 ರನ್‌ ಗಳಿಸಿದ ದಕ್ಷಿಣ ಆಫ್ರಿಕಾದ ಬಳಿಕ ಮೆನ್ ಇನ್ ಬ್ಲೂ ಕೇವಲ 14 ಓವರ್‌ಗಳಲ್ಲಿ 200 ರನ್ ಬಾರಿಸಿದ ತಂಡ ಎನಿಸಿಕೊಂಡಿತು. ಸ್ಯಾಮ್ಸನ್ ಅಂತಿಮವಾಗಿ 111 ರನ್‌ಗಳಿಗೆ ಮುಸ್ತಾಫಿಜುರ್ ಎಸೆತಕ್ಕೆ ಔಟ್ ಆದರು. ಸೂರ್ಯ ಅವರು ಮಹಮದುಲ್ಲಾ ಎಸೆತಕ್ಕೆ ಔಟಾಗುವ ಮೂದಲು 75 ರನ್ ಬಾರಿಸಿದ್ದರು. ಬಳಿಕ ರಿಯಾನ್ ಪರಾಗ್ (13 ಎಸೆತಕ್ಕೆ 34 ರನ್) ಮತ್ತು ಹಾರ್ದಿಕ್ ಪಾಂಡ್ಯ (18 ಎಸೆತ 47 ರನ್‌) ಅವರ ಹೊಡೆತಗಳನ್ನು ಸಹಿಸಿಕೊಳ್ಳಬೇಕಾಯಿತು.