ನವದೆಹಲಿ: ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ಭಾರತ ತಂಡಕ್ಕೆ (IND vs ENG) ಆಯ್ಕೆ ಮಾಡಬೇಕು. ಅದು ಬಿಟ್ಟು ಸ್ಟಾರ್ ಎಂಬ ಕಾರಣಕ್ಕೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಬಾರದು ಎಂದು ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಹೇಳುವ ಮೂಲಕ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಇತ್ತೀಚೆಗೆ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಆ ಮೂಲಕ 2015ರ ಬಳಿಕ ಇದೇ ಮೊದಲ ಬಾರಿ ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಂತಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಆಯ್ಕೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಆಡಿದ 9 ಇನಿಂಗ್ಸ್‌ಗಳಿಂದ 190 ರನ್‌ಗಳಿಸಿದ್ದರೆ, ಇದರಲ್ಲಿ ಒಂದು ಶತಕವನ್ನು ಬಾರಿಸಿದ್ದಾರೆ. ಇನ್ನು ನಾಯಕ ರೋಹಿತ್ ಶರ್ಮಾ ಆರು ಇನಿಂಗ್ಸ್‌ಗಳಿಂದ ಕೇವಲ 31 ರನ್‌ಗಳನ್ನು ಕಲೆ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್, ಭಾರತ ತಂಡದಲ್ಲಿನ ಸ್ಟಾರ್ ಸಂಸ್ಕೃತಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಇಂಗ್ಲೆಂಡ್‌ನಲ್ಲಿ ಕೌಂಟಿ ಚಾಂಪಿಯನ್‌ಷಿಪ್ ಆಡಬೇಕೆಂದು ಅವರು ಸಲಹೆ ನೀಡಿದ್ದಾರೆ.
AUS vs IND: ಆಟಗಾರರ ನಿವೃತ್ತಿ ಬಗ್ಗೆ ಸಂಬಂಧ ಇಲ್ಲ; ಗಂಭೀರ್ ಗಂಭೀರ ಮಾತು
“ವಿರಾಟ್ ಕೊಹ್ಲಿ ಇರಲಿ ಅಥವಾ ರೋಹಿತ್ ಶರ್ಮಾ ಇರಲಿ, ಭಾರತ ತಂಡದ ಆಯ್ಕೆ ಪ್ರದರ್ಶನದ ಆಧಾರದ ಮೇಲೆ ಇರಬೇಕು. ಅವರು ನಾವು ಸೂಪರ್ ಸ್ಟಾರ್ ಎಂದು ಯೋಚಿಸುತ್ತಿರಬೇಕು, ಆದರೆ ಆಟದ ಮುಂದೆ ಯಾರೂ ದೊಡ್ಡವರಲ್ಲ. ಇಂಗ್ಲೆಂಡ್ ಪ್ರವಾಸಕ್ಕೆ ಹಿರಿಯ ಆಟಗಾರರನ್ನು ಆಯ್ಕೆ ಮಾಡಬೇಕೆಂದು ನೀವು ಬಯಸಿದರೆ, ಅವರನ್ನು ಕೌಂಟಿ ಕ್ರಿಕೆಟ್ ಆಡುವಂತೆ ಹೇಳಿ,” ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.
ರಾಹುಲ್ ದ್ರಾವಿಡ್ ಇರುವವರೆಗೂ ಎಲ್ಲವೂ ಸರಿಯಾಗಿಯೇ ಇತ್ತು: ಭಜ್ಜಿ
ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿ ಭಾರತ ತಂಡದಲ್ಲಿ ಇರುವಾಗ ಎಲ್ಲವೂ ಚೆನ್ನಾಗಿತ್ತು. ಆದರೆ, ತಕ್ಷಣ ತಂಡದಲ್ಲಿ ಏನಾಯಿತು ಎಂದು ಹರ್ಭಜನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
“ಕಳೆದ ಆರು ತಿಂಗಳಲ್ಲಿ ನಾವು ಶ್ರೀಲಂಕಾ ವಿರುದ್ದ ಸೋತಿದ್ದೆವು, ನಂತರ ನ್ಯೂಜಿಲೆಂಡ್ ವಿರುದ್ದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 0-3 ಅಂತರದಲ್ಲಿ ವೈಟ್ ವಾಷ್ ಆಘಾತ ಅನುಭವಿಸಿತ್ತು. ರಾಹುಲ್ ದ್ರಾವಿಡ್ ಇದ್ದಾಗ ಎಲ್ಲವೂ ಸರಿಯಾಗಿಯೇ ಇತ್ತು. ಭಾರತ ತಂಡ ಟಿ20 ವಿಶ್ವಕಪ್ ಗೆದ್ದಾಗ ಎಲ್ಲವೂ ಚೆನ್ನಾಗಿತ್ತು. ಆದರೆ, ತಕ್ಷಣ ತಂಡದಲ್ಲಿ ಏನಾಯಿತು?” ಹರ್ಭಜನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
ಈ ಸುದ್ದಿಯನ್ನು ಓದಿ: AUS vs IND: ಭಾರತೀಯ ಅಭಿಮಾನಿಗಳಿಗೆ ಮಾತ್ರವಲ್ಲದೆ ದಿಗ್ಗಜ ಗಾವಸ್ಕರ್‌ಗೂ ಆಸೀಸ್ ಅವಮಾನ