ನವದೆಹಲಿ: ಇಂಗ್ಲೆಂಡ್ ವಿರುದ್ದ ಮುಂಬರುವ ಏಕದಿನ ಸರಣಿಯಲ್ಲಿ(IND vs ENG) ಆಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡದ ಬ್ಯಾಟ್ಸ್ಮನ್ ಕೆಎಲ್ ರಾಹುಲ್ಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ಪ್ರವಾಸದಿಂದ ಭಾರತಕ್ಕೆ ಮರಳಿದ ಬಳಿಕ ಕೆಎಲ್ ರಾಹುಲ್ ಅವರು, ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ವಿಶ್ರಾಂತಿ ನೀಡಬೇಕೆಂದು ಬಿಸಿಸಿಐಗೆ ಮನವಿ ಮಾಡಿದ್ದರು. ಅದರಂತೆ ಬಿಸಿಸಿಐಗೆ ಇದಕ್ಕೆ ಒಪ್ಪಿಗೆ ನೀಡಿತ್ತು. ಆದರೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಆಯ್ಕೆಗೆ ಲಭ್ಯರಾಗುವಂತೆ ಕನ್ನಡಿಗನಿಗೆ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಸೂಚನೆ ನೀಡಿದೆ ಎಂದು ಇತ್ತೀಚಿನ ವರದಿಗಳಿಂದ ತಿಳಿದುಬಂದಿದೆ.
“ಭಾರತ ಏಕದಿನ ತಂಡದಲ್ಲಿ ವಿಕೆಟ್ ಕೀಪರ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಕೆಎಲ್ ರಾಹುಲ್ಗೆ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ವೈಟ್ ಬಾಲ್ ಸರಣಿಗೆಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ, ಬಿಸಿಸಿಐ ಈ ವಿಷಯಕ್ಕೆ ಸಂಬಂಧಿಸಿದಂತೆ ಮರು ಯೋಚನೆ ಮಾಡಿದ್ದು, ಫೆಬ್ರವರಿಯಲ್ಲಿ ಆರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅಭ್ಯಾಸವಾಗಲಿ ಎಂಬ ಕಾರಣಕ್ಕೆ ಕೆಎಲ್ ರಾಹುಲ್ ಅವರನ್ನು ಆಡಬೇಕೆಂದು ಸೂಚನೆ ನೀಡಿದೆ,” ಎಂದು ಮೂಲಗಳು ತಿಳಿಸಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಆಡಿದ್ದರು. ಈ ಸರಣಿಯಲ್ಲಿ ರನ್ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ ಕೂಡ ಇದ್ದಾರೆ. ಅವರು ಆಡಿದ್ದ 10 ಇನಿಂಗ್ಸ್ಗಳಿಂದ 30.66ರ ಸರಾಸರಿಯಲ್ಲಿ 276 ರನ್ಗಳನ್ನು ಗಳಿಸಿದ್ದಾರೆ.
ವಿಕೆಟ್ ಕೀಪರ್ ಸ್ಥಾನಕ್ಕೆ ಭಾರಿ ಪೈಪೋಟಿ
ಕೆಎಲ್ ರಾಹುಲ್ಗೆ ಭಾರತ ಏಕದಿನ ತಂಡದಲ್ಲಿ ಇನ್ನೂ ಸ್ಥಾನ ಖಚಿತವಿಲ್ಲ. ಏಕೆಂದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡದ ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಇದ್ದಾರೆ. ಈ ಇಬ್ಬರ ಜೊತೆಗೆ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಇಶಾನ್ ಕಿಶನ್ ಕೂಡ ಕಾಯುತ್ತಿದ್ದಾರೆ. ಈ ಮೂವರು ಪೂರ್ಣ ಪ್ರಮಾಣದ ವಿಕೆಟ್ ಕೀಪರ್ಗಳಾಗಿದ್ದಾರೆ. ಆದರೆ, ರಾಹುಲ್ ಪಾರ್ಟ್ ಟೈಮ್ ವಿಕೆಟ್ ಕೀಪರ್ ಆಗಿರುವ ಕಾರಣ ಅವರು, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಬೇಕಾದ ಅಗತ್ಯವಿದೆ.
ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಲು ಜ 12 ಕೊನೆಯ ದಿನಾಂಕ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಸಂಭಾವ್ಯ ಆಟಗಾರರನ್ನೊಳಗೊಂಡ ತಂಡಗಳನ್ನು ಪ್ರಕಟಿಸಲು ಜನವರಿ 12 ಕೊನೆಯ ದಿನಾಂಕವಾಗಿದೆ. ಆದರೆ, ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಲು ಬಿಸಿಸಿಐ ಇನ್ನಷ್ಟು ದಿನಗಳ ಅವಕಾಶವನ್ನು ಕೇಳಬಹುದೆಂದು ಕ್ರಿಕ್ಬಝ್ ವರದಿ ಮಾಡಿದೆ.
ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಅವರು ಕೂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದ ರೇಸ್ನಲ್ಲಿದ್ದಾರೆ. ಆದರೆ, ವಿಜಯ್ ಹಝಾರೆ ಟ್ರೋಫಿ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಬಳಿಕ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಲು ಬಿಸಿಸಿಐ ಎದುರು ನೋಡುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನು ಓದಿ: Devdutt Padikkal: ಶತಕದ ಮೂಲಕ ಬಲವಾಗಿ ಕಮ್ಬ್ಯಾಕ್ ಮಾಡಿದ ಕನ್ನಡಿಗ!