Saturday, 11th January 2025

IND vs ENG: ಮೊಹಮ್ಮದ್‌ ಶಮಿ ಕಮ್‌ಬ್ಯಾಕ್‌, ಇಂಗ್ಲೆಂಡ್‌ ಟಿ20ಐ ಸರಣಿಗೆ ಭಾರತ ತಂಡ ಪ್ರಕಟ!

IND vs ENG: Mohammad Shami returns as India’s squad for T20I series against England announced

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ (IND vs ENG) 15 ಸದಸ್ಯರ ಭಾರತ ತಂಡವನ್ನು (India’s squad for T20I series) ಬಿಸಿಸಿಐ ಪ್ರಕಟಿಸಿದ್ದು, ದೀರ್ಘಾವಧಿ ಬಳಿಕ ಹಿರಿಯ ವೇಗಿ ಮೊಹಮ್ಮದ್‌ ಶಮಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೆ ಉಪ ನಾಯಕತ್ವವನ್ನು ನೀಡಲಾಗಿದೆ. ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರನ್ನು ಕೈ ಬಿಡಲಾಗಿದ್ದು, ಕಳೆದ ಸರಣಿಯಂತೆ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಸಂಜು ಸ್ಯಾಮ್ಸನ್‌ ಅವರನ್ನು ಉಳಿಸಿಕೊಂಡರೆ, ಎರಡನೇ ಆಯ್ಕೆಯಾಗಿ ಧ್ರುವ್‌ ಜುರೆಲ್‌ಗೆ ಸ್ಥಾನವನ್ನು ಕಲ್ಪಿಸಲಾಗಿದೆ.

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಬಳಿಕ ಮೊಹಮ್ಮದ್‌ ಶಮಿ ಅವರು ಪಾದದ ಗಾಯದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಆದರೆ, ಅವರು ಕಳೆದ ವರ್ಷಾಂತ್ಯದಲ್ಲಿ ಬಂಗಾಳ ಪರ ದೇಶಿ ಕ್ರಿಕೆಟ್‌ಗೆ ಮರಳಿದ್ದರು. ಆದರೆ, ಅವರ ಕಾಲಿನಲ್ಲಿ ಊತ ಕಾಣಿಸಿಕೊಂಡಿದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಅಲಭ್ಯರಾಗಿದ್ದರು. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದು, ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ.

ರಿಷಭ್‌ ಪಂತ್‌ ಔಟ್‌

ಶ್ರೀಲಂಕಾ ಪ್ರವಾಸದಲ್ಲಿ ಕೊನೆಯ ಬಾರಿ ಟಿ20ಐ ಸರಣಿಯಲ್ಲಿ ಕಾಣಿಸಿಕೊಂಡಿದ್ದ ರಿಷಭ್‌ ಪಂತ್‌ ಅವರನ್ನು ಇಂಗ್ಲೆಂಡ್‌ ವಿರುದ್ದದ ಟಿ20ಐ ಸರಣಿಯಿಂದ ಕೈ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಧ್ರುವ್‌ ಜುರೆಲ್‌ ಅವರನ್ನು ಎರಡನೇ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಆರಿಸಲಾಗಿದೆ. ಇನ್ನು ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಸಂಜು ಸ್ಯಾಮ್ಸನ್‌, ಇಂಗ್ಲೆಂಡ್‌ ವಿರುದ್ಧ ಕಣಕ್ಕೆ ಇಳಿಯುವುದು ಬಹುತೇಕ ಖಚಿತ. ಇವರು ಕಳೆದ ಐದು ಟಿ20ಐ ಪಂದ್ಯಗಳಲ್ಲಿ 3 ಶತಕಗಳನ್ನು ಬಾರಿಸಿದ್ದರು.

ಜನವರಿ 22 ರಂದು ಟಿ20ಐ ಸರಣಿ ಆರಂಭ

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಟಿ20ಐ ಸರಣಿಯು ಜನವರಿ 22 ರಂದು ಕೋಲ್ಕತಾದಲ್ಲಿ ನಡೆಯುವ ಮೊದಲನೇ ಪಂದ್ಯದ ಮೂಲಕ ಆರಂಭವಾಗಿ ಫೆಬ್ರವರಿ 2 ರಂದು ಕೊನೆಯ ಪಂದ್ಯದ ಮೂಲಕ ಅಂತ್ಯವಾಗಲಿದೆ. ತದನಂತರ ಮೂರು ಪಂದ್ಯಗಳ ಏಕದಿನ ಸರಣಿಯು ಫೆಬ್ರವರಿ 6 ರಿಂದ ಆರಂಭವಾಗಿ ಫೆಬ್ರವರಿ 12 ರಂದು ಅಂತ್ಯವಾಗಲಿದೆ. ಬಳಿಕ ಪಾಕಿಸ್ತಾನದ ಆತಿಥ್ಯದಲ್ಲಿ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆರಂಭವಾಗಲಿದೆ.

ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿ.ಕೀ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪ ನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿ.ಕೀ)

ಈ ಸುದ್ದಿಯನ್ನೂ ಓದಿ: IND vs ENG: ʻವಿರಾಮ ಬೇಡ, ಇಂಗ್ಲೆಂಡ್‌ ಎದುರು ಒಡಿಐ ಸರಣಿ ಆಡಿʼ-ಕೆಎಲ್‌ ರಾಹುಲ್‌ಗೆ ಬಿಸಿಸಿಐ ಸೂಚನೆ!

Leave a Reply

Your email address will not be published. Required fields are marked *