ನವದೆಹಲಿ: ಮುಂದಿನ ವರ್ಷ ಇಂಗ್ಲೆಂಡ್ ಪ್ರವಾಸದ (IND vs ENG) ಟೆಸ್ಟ್ ಸರಣಿಯ ಭಾರತ ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರ ಜೊತೆಗೆ ಮತ್ತೊರ್ವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಕೂಡ ಆಡಬೇಕೆಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. ಇದೀಗ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯುತ್ತಿದೆ. ನಾಲ್ಕು ಪಂದ್ಯಗಳ ಅಂತ್ಯಕ್ಕೆ ಟೀಮ್ ಇಂಡಿಯಾ ಸರಣಿಯಲ್ಲಿ 1-2 ಹಿನ್ನಡೆಯನ್ನು ಅನುಭವಿಸಿದೆ. ಇದರ ನಡುವೆ ಭಾರತ ತಂಡದ ಪರ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಿತೀಶ್ ರೆಡ್ಡಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಇತ್ತೀಚೆಗೆ ಮುಗಿದಿದ್ದ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಿತೀಶ್ ರೆಡ್ಡಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿದ್ದರು. ಆ ಮೂಲಕ ಭಾರತ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಆದರೆ, ಸ್ಪೋರ್ಟ್ಸ್ ಸ್ಟಾರ್‌ನಲ್ಲಿ ಬರೆದಿರುವ ತಮ್ಮ ಅಂಕಣದಲ್ಲಿ ಸುನೀಲ್ ಗವಾಸ್ಕರ್, ಭಾರತ ಟೆಸ್ಟ್ ತಂಡಕ್ಕೆ ಮತ್ತೊರ್ವ ಗುಣಮಟ್ಟದ ಆಲ್‌ರೌಂಡರ್ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಕೂಡ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಆಡಬೇಕೆಂದು ಸನ್ನಿ ತಿಳಿಸಿದ್ದಾರೆ.
“ವೆಂಕಟೇಶ್ ಅಯ್ಯರ್ ಅವರ ಮೇಲೆಯೂ ಭಾರತ ತಂಡ ಕಣ್ಣಿಡಬೇಕಾಗಿದೆ ಏಕೆಂದರೆ ಅವರು ಕೂಡ ಎಡಗೈ ಬ್ಯಾಟ್ಸ್‌ಮನ್ ಜೊತೆಗೆ ಅದ್ಭುತ ಆಲ್‌ರೌಂಡರ್. ಅವರು ಬೌಲಿಂಗ್ ಕೂಡ ಕೆಲವೊಮ್ಮೆ ಕೆಲಸ ಮಾಡಲಿದೆ. ಇಂಗ್ಲೆಂಡ್‌ನಲ್ಲಿ ಅವರು ಈಗಾಗಲೇ ಆಡಿದ್ದಾರೆ ಹಾಗಾಗಿ ಮುಂದಿನ ಇಂಗ್ಲೆಂಡ್ ಪ್ರವಾಸಕ್ಕೆ ಅವರು ಅತ್ಯುತ್ತಮ ಆಯ್ಕೆಯಾಗಲಿದೆ,” ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
2024ರಲ್ಲಿ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ವೆಂಕಟೇಶ್ ಅಯ್ಯರ್ ಅವರು ಆಡಿದ್ದರು. ಇಲ್ಲಿ ಆಡಿದ್ದ ಮೂರು ಪಂದ್ಯಗಳಿಂದ 116 ರನ್‌ಗಳನ್ನು ಕಲೆ ಹಾಕಿದ್ದರು.
ನಿತೀಶ್ ರೆಡ್ಡಿಗೆ ಸುನೀಲ್ ಗವಾಸ್ಕರ್ ಮೆಚ್ಚುಗೆ
ಸ್ಪೋರ್ಟ್ಸ್ ಅಂಕಣದಲ್ಲಿ ಸುನೀಲ್ ಗವಾಸ್ಕರ್, “ಮೆಲ್ಬೋರ್ನ್ ಟೆಸ್ಟ್ ಭಾರತೀಯ ಕ್ರಿಕೆಟ್‌ನ ಪ್ರಕಾಶಮಾನವಾದ ಯುವ ತಾರೆಗಳಲ್ಲಿ ಒಬ್ಬರಾದ ನಿತೀಶ್ ಕುಮಾರ್ ರೆಡ್ಡಿಯನ್ನು ಮುನ್ನೆಲೆಗೆ ತಂದಿತು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಹೈದರಾಬಾದ್ ಫ್ರಾಂಚೈಸಿ ಪರ ಆಡುವಾಗ ಅವರು ಎಲ್ಲರ ಗಮನವನ್ನು ಸೆಳೆದಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿಯೂ ಅವರಿಗೆ ಹೆಚ್ಚಿನ ಅನುಭವ ಇಲ್ಲ, ಆದರೂ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ತಂದ ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿಗೆ ಇದರ ಶ್ರೇಯ ಸಲ್ಲಬೇಕು,” ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯಗಿಂತ ನಿತೀಶ್ ರೆಡ್ಡಿ ಬೆಸ್ಟ್ ಎಂದ ಗವಾಸ್ಕರ್
“ಮೆಲ್ಬರ್ನ್‌ನಲ್ಲಿ ಭಾರತ ತಂಡ ಬಹುತೇಕ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದ ನಿತೀಶ್ ಕುಮಾರ್ ರೆಡ್ಡಿ ತಮ್ಮ ಮನಮೋಹಕ ಬ್ಯಾಟಿಂಗ್‌ನಿಂದ ಚೊಚ್ಚಲ ಶತಕವನ್ನು ಸಿಡಿಸಿದ್ದರು. ಆ ಮೂಲಕ ದೀರ್ಘಾವಧಿಗೆ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಟೆಸ್ಟ್‌ಗೆ ಅಲಭ್ಯರಾದ ಬಳಿಕ ಭಾರತ ತಂಡದಲ್ಲಿ ಮಧ್ಯಮ ವೇಗಿ ಹಾಗೂ ಬ್ಯಾಟ್ಸ್‌ಮನ್‌ಗಾಗಿ ಟೀಮ್ ಮ್ಯಾನೇಜ್‌ಮೆಂಟ್ ಹುಡುಕುತ್ತಿದೆ. ಬೌಲಿಂಗ್ ಪ್ರಕ್ರಿಯೆಯಲ್ಲಿ ರೆಡ್ಡಿ ಇನ್ನೂ ಸಾಗುತ್ತಿದ್ದಾರೆ ಆದರೆ, ಬ್ಯಾಟಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯಗಿಂತ ಉತ್ತಮವಾಗಿದ್ದಾರೆ,” ಎಂದು ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.
ಈ ಸುದ್ದಿಯನ್ನು ಓದಿ:AUS vs IND: ‘ನೀನೊಬ್ಬ ಮೂರ್ಖ’; ನೇರ ಪ್ರಸಾರದಲ್ಲೇ ಪಂತ್‌ಗೆ ಚಳಿ ಬಿಡಿಸಿದ ಗವಾಸ್ಕರ್