ರಾಜ್ಕೋಟ್: ಪ್ರತೀಕಾ ರಾವಲ್ (89 ರನ್) ಹಾಗೂ ತೇಜಲ್ ಹಸನ್ಬಿಸ್ (53* ರನ್) ಅವರ ಅರ್ಧಶತಕಗಳ ಬಲದಿಂದ ಭಾರತ ಮಹಿಳಾ ತಂಡ, ಐರ್ಲೆಂಡ್ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ (IND vs IRE) 6 ವಿಕೆಟ್ಗಳಿಂದ ಗೆಲುವು ಪಡೆದಿದೆ. ಆ ಮೂಲಕ ಮೂರು ಪಂದ್ಯಗಳ ಮಹಿಳಾ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಐರ್ಲೆಂಡ್ ತಂಡ, ತನ್ನ ಪಾಲಿನ 50 ಓವರ್ಗಳಿಗೆ 7 ವಿಕೆಟ್ಗಳ ನಷ್ಟಕ್ಕೆ 238 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ಭಾರತ ತಂಡಕ್ಕೆ 239 ರನ್ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡ, 34.3 ಓವರ್ಗಳಿಗೆ 4 ವಿಕೆಟ್ಗಳ ನಷ್ಟಕ್ಕೆ 241 ರನ್ಗಳನ್ನು ಕಲೆ ಹಾಕಿ ಗೆಲುವು ಪಡೆಯಿತು.
ಚೊಚ್ಚಲ ಅರ್ಧಶತಕ ಸಿಡಿಸಿದ ಪ್ರತೀಕಾ ರಾವಲ್
ಇತ್ತೀಚೆಗೆ ಮಹಿಳಾ ಟಿ20ಐಗೆ ಪದಾರ್ಪಣೆ ಮಾಡಿದ್ದ ಪ್ರತೀಕಾ ರಾವಲ್ ಅವರು, ಐರ್ಲೆಂಡ್ ವಿರುದ್ದದ ಮೊದಲನೇ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅದರಂತೆ ಸಿಕ್ಕ ಅವಕಾಶವನ್ನು ಅವರು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು. ಅವರು ಆಡಿದ 96 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 89 ರನ್ಗಳನ್ನು ಗಳಿಸಿದರು. ಆದರೆ, ಶತಕದಂಚಿನಲ್ಲಿ ಅವರು ಎಮಿ ಮಗ್ಯೂರ್ಗೆ ವಿಕೆಟ್ ಒಪ್ಪಿಸಿದರು. ಅಲ್ಲದೆ ನಾಯಕಿ ಸ್ಮೃತಿ ಮಂಧಾನಾ ಅವರ ಜೊತೆ ಇವರು ಮುರಿಯದ ಮೊದಲನೇ ವಿಕೆಟ್ಗೆ 70 ರನ್ಗಳ ಜೊತೆಯಾಟವನ್ನು ಆಡಿದರು.
For her strong opening act in the chase, Pratika Rawal bags the Player of the Match award! 👍 👍
— BCCI Women (@BCCIWomen) January 10, 2025
Scorecard ▶️ https://t.co/bcSIVpiPvQ#TeamIndia | #INDvIRE | @IDFCFIRSTBank pic.twitter.com/LQNMKP11nk
ನಾಯಕಿ ಸ್ಮೃತಿ ಮಂಧಾನಾ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ 29 ಎಸೆತಗಳಲ್ಲಿ 41 ರನ್ಗಳಿಸಿದ್ದರು. ಆದರರ, ಅವರು ಅರ್ಧಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ ಮಾಡಿದ ತೇಜಲ್ ಹಸನ್ಬೀಸ್ 46 ಎಸೆತಗಳಲ್ಲಿ ಅಜೇಯ 53 ರನ್ ಗಳನ್ನು ಸಿಡಿಸಿ ಭಾರತ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸುವಲ್ಲಿ ಸಫಲರಾದರು.
ಗ್ಯಾಬಿ ಲೆವಿಸ್-ಲೇ ಪಾಲ್ ಅರ್ಧಶತಕ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಐರ್ಲೆಂಡ್ ತಂಡದ ಪರ ಗಮನ ಸೆಳೆದಿದ್ದು ನಾಯಕಿ ಗ್ಯಾಬಿ ಲೆವಿಸ್ ಹಾಗೂ ಲೇ ಪಾಲ್. ಮೊದಲಿಗೆ ಇನಿಂಗ್ಸ್ ಆರಂಭಿಸಿದ್ದ ಗ್ಯಾಬಿ ಲೆವಿಸ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇವರು ಆಡಿದ 129 ಎಸೆತಗಳಲ್ಲಿ 15 ಬೌಂಡರಿಗಳೊಂದಿಗೆ 92 ರನ್ಗಳನ್ನು ಗಳಿಸಿದರು ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಲೇ ಪಾಲ್ ಆಡಿದ 73 ಎಸೆತಗಳಲ್ಲಿ 53 ರನ್ಗಳನ್ನು ಗಳಿಸಿದರು. ಅರ್ಲಿನ್ ಕೆಲ್ಲಿ 28 ರನ್ ಗಳಿಸಿದರು. ಆ ಮೂಲಕ ಐರ್ಲೆಂಡ್ ತಂಡ ತನ್ನ 50 ಓವರ್ಗಳನ್ನು ಪೂರ್ಣಗೊಳಿಸಿ 238 ರನ್ಗಳನ್ನು ಕಲೆ ಹಾಕಿತು.
ಈ ಸುದ್ದಿಯನ್ನು ಓದಿ: INDW vs WIW: ಮಹಿಳಾ ಕ್ರಿಕೆಟ್ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ ಸ್ಮೃತಿ ಮಂಧಾನಾ!