Monday, 25th November 2024

IND vs NZ: ಮುಂಬೈಯಲ್ಲಿ ಗೆಲುವಿನ ಪಟಾಕಿ ಹಚ್ಚುವ ಸನಿಹ ಭಾರತ

ಮುಂಬಯಿ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್​ (NewZealand) ನಡುವಿನ ಅಂತಿಮ ಟೆಸ್ಟ್‌(India vs New Zealand 3rd Test) ಪಂದ್ಯ ರೋಚಕ ಘಟ್ಟ ತಲುಪಿದೆ. ಮೊದಲ ದಿನ ಬ್ಯಾಟಿಂಗ್‌ ವೈಫಲ್ಯ ಕಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ, ದ್ವಿತೀಯ ದಿನದಾಟದಲ್ಲಿ ರಿಷಭ್‌ ಪಂತ್‌ ಮತ್ತು ಶುಭಮನ್‌ ಗಿಲ್‌ ಬಾರಿಸಿದ ಅರ್ಧಶತಕ, ಆ ಬಳಿಕ ಬೌಲರ್‌ಗಳ ಸಂಘಟಿತ ದಾಳಿಯ ಫಲದೊಂದಿಗೆ ಕಮ್​ಬ್ಯಾಕ್​ ಮಾಡಿದ್ದು ಗೆಲುವಿನ ಸನಿಹಕ್ಕೆ ಬಂದು ನಿಂತಿದೆ.

ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಪ್ರವಾಸಿ ನ್ಯೂಜಿಲ್ಯಾಂಡ್‌(IND vs NZ) ತಂಡ ಈಗ ಸೋಲಿನ ಭೀತಿಯಲ್ಲಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ9 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ. ಸದ್ಯ 143 ರನ್‌ ಮುನ್ನಡೆಯಲ್ಲಿದೆ. ಪಂದ್ಯ ನಾಳೆಯೇ ಮುಕ್ತಾಯ ಕಾಣುವ ಸ್ಥಿತಿಯಲ್ಲಿದೆ.

4 ವಿಕೆಟ್‌ಗೆ 86 ರನ್‌ ಗಳಿಸಿದ್ದಲ್ಲಿಂದ ಬ್ಯಾಟಿಂಗ್‌ ಆರಂಭಿಸಿದ ಭಾರತ ಇಂದು(ಶನಿವಾರ) 263 ರನ್‌ ಗಳಿಗೆ ಆಲೌಟಾಗುವ ಮೂಲಕ 28 ರನ್‌ಗಳ ಮುನ್ನಡೆ ಗಳಿಸಿತು. ರಿಷಭ್‌ ಪಂತ್‌ ಮತ್ತು ಶುಭಮನ್‌ ಗಿಲ್‌ ಅರ್ಧಶತಕ ಬಾರಿಸಿ ಮಿಂಚಿದರು. 1 ರನ್‌ ಗಳಿಸಿದ್ದಲ್ಲಿಂದ ಬ್ಯಾಟಿಂಗ್‌ ಮುಂದುವರಿಸಿದ ಪಂತ್‌ 8 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 60 ರನ್‌ ಬಾರಿಸಿದರು. ಶುಭಮನ್‌ ಗಿಲ್‌ 90(7 ಬೌಂಡರಿ, ಒಂದು ಸಿಕ್ಸರ್‌) ರನ್‌ಗೆ ಔಟಾಗುವ ಮೂಲಕ ನರ್ವಸ್‌ ನೈಂಟಿ’ ಸಂಕಟಕ್ಕೆ ಸಿಲುಕಿದರು. ಪಂತ್‌ ಮತ್ತು ಗಿಲ್‌ ಪಂದ್ಯದಲ್ಲಿ ಕ್ಯಾಚ್‌ ಕೈ ಚೆಲ್ಲಿ ತಲಾ ಒಂದೊಂದು ಜೀವದಾನ ಕೂಡ ಪಡೆದಿದ್ದರು. ಉಭಯ ಆಟಗಾರರು 5ನೇ ವಿಕೆಟ್‌ಗೆ 96 ರನ್‌ಗಳ ಜತೆಯಾಟ ನಡೆಸಿದರು.

https://twitter.com/ICC/status/1852675283351982580

ಅಂತಿಮ ಹಂತದಲ್ಲಿ ವಾಷಿಂಗ್ಟನ್‌ ಸುಂದರ್‌ ಬಿರುಸಿನ ಬ್ಯಾಟಿಂಗ್‌ ನಡೆಸಿ ಅಜೇಯ 38 (4 ಬೌಂಡರಿ, 2 ಸಿಕ್ಸರ್‌) ರನ್‌ ಬಾರಿಸಿದ ಪರಿಣಾಮ ಭಾರತ ಇನಿಂಗ್ಸ್‌ ಮುನ್ನಡೆ ಸಾಧಿಸುವಂತಾಯಿತು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್‌ ಸಿಗುತ್ತಿದ್ದರೆ ತಂಡಕ್ಕೆ ಇನ್ನಷ್ಟು ಮೊತ್ತ ಹರಿದು ಬರುತ್ತಿತ್ತು. ನ್ಯೂಜಿಲ್ಯಾಂಡ್‌ ಪರ ಮುಂಬಯಿ ಮೂಲದವರೇ ಆಗಿರುವ ಸ್ಪಿನ್ನರ್‌ ಅಜಾಜ್‌ ಪಟೇಲ್‌ 5 ವಿಕೆಟ್‌ ಗೊಂಚಲು ಪಡೆದರು. ಈ ಹಿಂದಿನ ಪ್ರವಾಸದಲ್ಲಿ ಅವರು ಇದೇ ಮೈದಾನದಲ್ಲಿ ಇನ್ನಿಂಗ್ಸ್‌ನ ಎಲ್ಲ 10 ವಿಕೆಟ್‌ ಕೆಡವಿದ್ದರು.

ಪಂತ್‌ ದಾಖಲೆ

ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ರಿಷಭ್‌ ಪಂತ್‌ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್‌ ಪರ ಅತಿ ಕಡಿಮೆ ಎಸೆತಗಳಿಂದ ಅರ್ಧಶತ ಬಾರಿಸಿದ ಮೊದಲ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(41 ಎಸೆತ) ಹೆಸರಿನಲ್ಲಿತ್ತು. ಜೈಸ್ವಾಲ್‌ ಪುಣೆ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಈ ದಾಖಲೆ ನಿರ್ಮಿಸಿದ್ದರು.

ಇದನ್ನೂ ಓದಿ IND vs NZ: ಕಿವೀಸ್‌ ವಿರುದ್ಧ ದಾಖಲೆ ಬರೆದ ರಿಷಭ್‌ ಪಂತ್‌

ಅಶ್ವಿನ್‌-ಜಡೇಜಾ ಸ್ಪಿನ್‌ ಮೋಡಿ

28 ರನ್‌ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲ್ಯಾಂಡ್‌ಗೆ ವೇಗಿ ಆಕಾಶ್‌ ದೀಪ್‌ ಆರಂಭದಲ್ಲೇ ಆಘಾತವಿಕ್ಕಿದರು. ತಂಡದ ಮೊತ್ತ 2 ರನ್‌ ಆಗಿದ್ದ ವೇಳೆ ನಾಯಕ ಟಾಮ್‌ ಲ್ಯಾಥಮ್‌(1) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಆ ಬಳಿಕ ಸ್ಪಿನ್ ದ್ವಯರಾದ ಆರ್‌.ಅಶ್ವಿನ್‌ ಮತ್ತು ರವೀಂದ್ರ ಜಡೇಜಾ ಜಿದ್ದಿಗೆ ಬಿದ್ದವರಂತೆ ಬೌಲಿಂಗ್‌ ದಾಳಿ ನಡೆಸಿ ಕಿವೀಸ್‌ ಬ್ಯಾಟರ್‌ಗಳಿಗೆ ಎಲ್ಲಿಲ್ಲದಂತೆ ಕಾಡಿದರು. ಇವರ ಸ್ಪಿನ್‌ ದಾಳಿಯನ್ನು ಎದುರಿಸಿ ನಿಲ್ಲುವಲ್ಲಿ ವಿಫಲವಾದ ಬ್ಯಾಟರ್‌ಗಳು ಪೆವಿಲಿಯನ್‌ ಪರೇಟ್‌ ನಡೆಸಿದರು.

ತಂಡಕ್ಕೆ ಆಸರೆಯಾದದ್ದು ವಿಲ್‌ ಯಂಗ್‌ ಮಾತ್ರ ಭರ್ತಿ 100 ಎಸೆತ ಎದುರಿಸಿ 51 ರನ್‌ ಬಾರಿಸಿದರು. ಮೊದಲ ಇನಿಂಗ್ಸ್‌ನಲ್ಲಿಯೂ ಯಂಗ್‌ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಗ್ಲೆನ್‌ ಫಿಲಿಪ್ಸ್‌ ಅಶ್ವಿನ್‌ ಓವರ್‌ನಲ್ಲಿ ಸತತ 2 ಸಿಕ್ಸರ್‌ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದರೂ ಇದೇ ಓವರ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ವಿಕೆಟ್‌ ಒಪ್ಪಿಸಿದರು. ಮೂರು ಸಿಕ್ಸರ್‌ ಮತ್ತು 1 ಬೌಂಡರಿ ಬಾರಿಸಿದ ಅವರು 26 ರನ್‌ಗೆ ಆಟ ಮುಗಿಸಿದರು. ಸದ್ಯ ಜಡೇಜಾ 4, ಆರ್‌. ಅಶ್ವಿನ್‌ 3, ವಾಷಿಂಗ್ಟನ್‌ ಸುಂದರ್‌ ಮತ್ತು ವೇಗಿ ಆಕಾಶ್‌ ದೀಪ್‌ ತಲಾ ಒಂದೊಂದು ವಿಕೆಟ್‌ ಕಿತ್ತಿದ್ದಾರೆ.