ಪುಣೆ: ನ್ಯೂಜಿಲೆಂಡ್(IND vs NZ) ವಿರುದ್ಧ ಸರಣಿ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿ(team india staff) ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದೆ. ಬಿಸಿಸಿಐ(BCCI) ಕೇಳಿದ ದುಬಾರಿ ವೇತನ ನೀಡಿದರೂ ತವರಿನ 12 ವರ್ಷಗಳ ಪ್ರಾಬಲ್ಯ ಮುಂದುವರಿಸುವಲ್ಲಿ ಭಾರತ ವಿಫಲವಾಗುವುದರೊಂದಿಗೆ ಗಂಭೀರ್ಗೆ(gautam gambhir) ಅಭಿಮಾನಿಗಳ ಟೀಕೆಗಳ ಬಿಸಿ ತಟ್ಟಲಾರಂಭಿಸಿದೆ.
ಗಂಭೀರ್ ಕೋಚ್ ಆಗಿ 3 ತಿಂಗಳ ಅವಧಿಯಲ್ಲೇ ಭಾರತ 2 ಪ್ರಮುಖ ಸರಣಿಯಲ್ಲಿ ಸೋಲು ಕಂಡಿತ್ತು. ಆಗಸ್ಟ್ನಲ್ಲಿ ಶ್ರೀಲಂಕಾದಲ್ಲಿ 27 ವರ್ಷಗಳ ಬಳಿಕ ಏಕದಿನ ಸರಣಿ ಸೋತಿದ್ದ ಭಾರತ ಇದೀಗ ಕಿವೀಸ್ ವಿರುದ್ಧ ಮೊದಲ ಬಾರಿ ತವರಿನಲ್ಲಿ ಟೆಸ್ಟ್ ಸರಣಿ ಸೋತಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗಂಭೀರ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ನೆಟ್ಟಿಗರೊಬ್ಬರು ಗಂಭೀರ್ಗೆ ಬಿಲ್ಡಪ್ ರಾಜ ಐಪಿಎಲ್ನಲ್ಲಿ ಫಿಕ್ಸಿಂಗ್ ಮಾಡಿಕೊಂಡು ಕಪ್ ಗೆದ್ದವರನ್ನು ಕೋಚ್ ಮಾಡಿದರೆ ಹೀಗೆ ಆಗುತ್ತದೆ. ತಲೆ ಬುಡವಿಲ್ಲದ ಪ್ರಯೋಗದ ಮೂಲಕ ಭಾರತ ತಂಡವನ್ನು ಹಾಳು ಮಾಡುವುದಕ್ಕಿಂತ ಮುನ್ನ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಿ ಎಂದು ಒತ್ತಾಯಿಸಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ನೆಲದಲ್ಲಿ ಸತತವಾಗಿ ಭಾರತ 2 ಸರಣಿ ಗೆದ್ದಿತ್ತು. ಹೀಗಾಗಿ ಈ ಬಾರಿಯ ಆಸೀಸ್ ಪ್ರವಾಸ ಗಂಭೀರ್ಗೆ ಇನ್ನಷ್ಟು ಕಠಿಣ ಸವಾಲಾಗಿ ಮಾರ್ಪಟ್ಟಿದೆ. ಸೋತರೆ ಅವರ ಕೋಚ್ ಹುದ್ದೆಗೆ ಕುತ್ತು ಬರುವುದಂತು ನಿಜ.
ಇದನ್ನೂ ಓದಿ IND vs NZ 3rd Test: ಮುಂಬೈ ಟೆಸ್ಟ್ನಲ್ಲಿ ರಾಹುಲ್ಗೆ ಅವಕಾಶ?
ವೈಟ್ವಾಶ್ ಮುಖಭಂಗ ತಪ್ಪಿಸುವ ನಿಟ್ಟಿನಲ್ಲಿ ಭಾರತಕ್ಕೆ ಮೂರನೇ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯವಿದೆ. ಹೀಗಾಗಿ ಮುಂಬೈ ಟೆಸ್ಟ್ ಆಡುವ ಬಳಗದಲ್ಲಿ ಬದಲಾವಣೆ ಖಚಿತ. ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದಶರ್ಶನ ತೋರಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ದ್ವಿತೀಯ ಟೆಸ್ಟ್ಗೆ ಆಡುವ ಬಳಗದಿಂದ ಕೈ ಬಿಡಲಾಗಿತ್ತು. ಇದೀಗ ಮೂರನೇ ಟೆಸ್ಟ್ನಲ್ಲಿ ಅವರಿಗೆ ಮತ್ತೆ ಅವಕಾಶ ನೀಡುವ ಸಾಧ್ಯತೆ ಇದೆ. ಆಸೀಸ್ ವಿರುದ್ಧದ ಪ್ರವಾಸಕ್ಕೂ ಮುನ್ನ ಭಾರತ ಆಡುವ ಕೊನೆಯ ಟೆಸ್ಟ್ ಇದಾಗಿದ್ದು ಆಸೀಸ್ ಪಿಚ್ನಲ್ಲಿ ಅನುಭವಿ ಆಟಗಾರರು ಆಡಬೇಕಿರುವ ಕಾರಣ ಸರ್ಫರಾಜ್ ಕೈಬಿಟ್ಟು ಈ ಸ್ಥಾನದಲ್ಲಿ ರಾಹುಲ್ ಕಣಕ್ಕಿಳಿಯಬಹುದು. ಪಂತ್ ಮತ್ತು ಬುಮ್ರಾ ಕೂಡ ಈ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಅಶ್ವಿನ್ಗೆ ವಿಶ್ರಾಂತಿ ನೀಡಿ ಅವರ ಬದಲಿಗೆ ಅಕ್ಷರ್ ಪಟೇಲ್ ಆಡಬಹುದು.
ಭಾರತ ಮತ್ತು ಕಿವೀಸ್ ತಂಡಗಳು ಇದುವರೆಗೆ ಇಲ್ಲಿ ಒಟ್ಟು ಮೂರು ಬಾರಿ ಟೆಸ್ಟ್ ಆಡಿದೆ. ಮೊಟ್ಟ ಮೊದಲ ಬಾರಿಗೆ ಮುಖಾಮುಖಿಯಾದದ್ದು 1976ರಲ್ಲಿ ಈ ಪಂದ್ಯವನ್ನು ಭಾರತ 162 ರನ್ ಅಂತರದಿಂದ ಗೆದ್ದಿತ್ತು. 2ನೇ ಮುಖಾಮುಖಿ 1988ರಲ್ಲಿ ಈ ಪಂದ್ಯವನ್ನು ಕಿವೀಸ್ 136 ರನ್ ಅಂತರದಿಂದ ಜಯಿಸಿತ್ತು. ಮೂರನೇ ಬಾರಿಗೆ ಆಡಿದ್ದು 2021ರಲ್ಲಿ. ಈ ಪಂದ್ಯದಲ್ಲಿ ಕಿವೀಸ್ನ ಸ್ಪಿನ್ನರ್ ಅಜಾಜ್ ಪಟೇಲ್ ಇನ್ನಿಂಗ್ಸ್ ಒಂದರ ಎಲ್ಲ 10 ವಿಕೆಟ್ ಉರುಳಿಸಿದ್ದರು. ಆದರೂ ಈ ಪಂದ್ಯದಲ್ಲಿ ನ್ಯೂಜಿಲೆಂಡ್ 372 ರನ್ ಅಂತರದ ಸೋಲು ಕಂಡಿತ್ತು.