Thursday, 14th November 2024

IND vs SA: ಬುಮ್ರಾ, ಭುವನೇಶ್ವರ್‌ ದಾಖಲೆ ಮುರಿದ ಅರ್ಷದೀಪ್‌

ಸೆಂಚುರಿಯನ್‌: ಟೀಮ್‌ ಇಂಡಿಯಾದ ಎಡಗೈ ವೇಗಿ ಅರ್ಷದೀಪ್‌ ಸಿಂಗ್‌(Arshdeep Singh) ಅವರು ದಕ್ಷಿಣ ಆಫ್ರಿಕಾ(IND vs SA) ವಿರುದ್ಧ ನಿನ್ನೆ(ಬುಧವಾರ) ನಡೆದ ಮೂರನೇ ಟಿ20 ಪಂದ್ಯದಲ್ಲಿ 3 ವಿಕೆಟ್‌ ಕೀಳುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ಗಳ ಯಾದಿಯಲ್ಲಿ 2ನೇ ಸ್ಥಾನಕ್ಕೇರಿದರು.

ಮೂರನೇ ಪಂದ್ಯದಲ್ಲಿ ನಾಲ್ಕು ಓವರ್‌ ಎಸೆತ ಅರ್ಷದೀಪ್‌ 37 ರನ್‌ ವೆಚ್ಚದಲ್ಲಿ 3 ವಿಕೆಟ್‌ ಕಿತ್ತರು. ಈ ವೇಳೆ ಟಿ20ಯಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಎರಡನೇ ಭಾರತೀಯ ಬೌಲರ್‌ ಎನಿಸಿಕೊಂಡರು. ಈ ಹಾದಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಮತ್ತು ಭುವನೇಶ್ವರ್‌ ಕುಮಾರ್‌ ಅವರನ್ನು ಹಿಂದಿಕ್ಕಿದರು. ಅತ್ಯಧಿಕ ವಿಕೆಟ್‌ ಕಿತ್ತ ದಾಖಲೆ ಯಜುವೇಂದ್ರ ಚಹಲ್‌ ಹೆಸರಿನಲ್ಲಿದೆ. ಚಹಲ್‌ ಇದುವರೆಗೆ 80 ಪಂದ್ಯಗಳನ್ನಾಡಿ 96 ವಿಕೆಟ್‌ ಪಡೆದಿದ್ದಾರೆ. ಅರ್ಷದೀಪ್‌ 59 ಪಂದ್ಯದಿಂದ 92 ವಿಕೆಟ್‌ ಕಿತ್ತಿದ್ದಾರೆ. ಅರ್ಷದೀಪ್‌ ಇನ್ನು ಐದು ವಿಕೆಟ್‌ ಪಡೆದರೆ ಅಗ್ರಸ್ಥಾನಕ್ಕೇರಲಿದ್ದಾರೆ.

ಇದನ್ನೂ ಓದಿ IND vs SA: ಸ್ಫೋಟಕ ಅರ್ಧಶತಕ ಸಿಡಿಸಿ ಭಾರತ ವಿರುದ್ಧ ದಾಖಲೆ ನಿರ್ಮಿಸಿದ ಮಾರ್ಕೊ ಜಾನ್ಸೆನ್‌

ಅತ್ಯಧಿಕ ಟಿ20 ವಿಕೆಟ್‌ ಕಿತ್ತ ಟಾಪ್‌-5 ಬೌಲರ್‌ಗಳು

1. ಯಜುವೇಂದ್ರ ಚಹಲ್‌-96 ವಿಕೆಟ್‌

2. ಅರ್ಷದೀಪ್‌ ಸಿಂಗ್‌-92

3. ಭುವನೇಶ್ವರ್‌ ಕುಮಾರ್‌-90

4. ಜಸ್‌ಪ್ರೀತ್‌ ಬುಮ್ರಾ-89

5. ಹಾರ್ದಿಕ್‌ ಪಾಂಡ್ಯ-88

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಿಲಕ್‌ ವರ್ಮ ಅವರ ಸ್ಫೋಟಕ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 219 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ ಅಂತಿಮವಾಗಿ 7 ವಿಕೆಟ್‌ಗೆ 208 ರನ್‌ ಬಾರಿಸಲಷ್ಟೇ ಶಕ್ತವಾಗಿ 11 ರನ್‌ ಅಂತರದಿಂದ ಸೋಲು ಕಂಡಿತು.

ಕಳಪೆ ದಾಖಲೆ ಬರೆದ ಸಂಜು

ಆರಂಭಿಕ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಶತಕ ಬಾರಿಸಿ ಸಂಭ್ರಮಿಸಿದ ಸಂಜು ಸ್ಯಾಮ್ಸನ್‌ ಆ ಬಳಿಕದ ಎರಡು ಪಂದ್ಯಗಳಲ್ಲಿ ಡಕೌಟ್‌ ಆಗಿ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಮೂರನೇ ಪಂದ್ಯದಲ್ಲಿ ಡಕ್‌ಔಟ್‌ ಆಗುವ ಮೂಲಕ ಸಂಜು ಸ್ಯಾಮ್ಸನ್‌ ಅವರು 2024ರಲ್ಲಿ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಐದನೇ ಬಾರಿ ಡಕ್‌ಔಟ್‌ ಆಗಿದ್ದಾರೆ. ಆ ಮೂಲಕ ಟಿ20ಐ ಕ್ರಿಕೆಟ್‌ನ ಏಕೈಕ ಕ್ಯಾಲೆಂಡರ್‌ ವರ್ಷದಲ್ಲಿ ಐದು ಬಾರಿ ಡಕ್‌ಔಟ್‌ ಆದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಎರಡನೇ ಟಿ20ಐ ಪಂದ್ಯದಲ್ಲಿ ಡಕ್‌ಔಟ್‌ ಆಗುವ ಮೂಲಕ ಸಂಜು, ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಡಕ್‌ಔಟ್‌ ಆದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಆಗಿದ್ದರು.