ನವದೆಹಲಿ: ಭಾರತ ಟಿ20ಐ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಮ್ಮ ಸ್ಥಾನವನ್ನು ಸಂಜು ಸ್ಯಾಮ್ಸನ್ ಗಟ್ಟಿ ಮಾಡಿಕೊಂಡಿದ್ದಾರೆಂದು ಟೀಮ್ ಇಂಡಿಯಾ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ (IND vs SA) ಡರ್ಬನ್‌ನಲ್ಲಿ ಶತಕ ಸಿಡಿಸುವ ಮೂಲಕ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ ಎರಡು ಸೆಂಚುರಿ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದರು.
ಮೊದಲನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್ ಮಾಡಿದ್ದ ಸಂಜು ಸ್ಯಾಮ್ಸನ್, 50 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 107 ರನ್‌ಗಳನ್ನು ಕಲೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕೇರಳ ಮೂಲದ ಬ್ಯಾಟ್ಸ್‌ಮನ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
IND vs SA: ಡಕ್‌ಔಟ್ ಆಗುವ ಮೂಲಕ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಸಂಜು ಸ್ಯಾಮ್ಸನ್!
ಕ್ರಿಕ್‌ಬಝ್ ಜೊತೆ ಮಾತನಾಡಿದ ದಿನೇಶ್ ಕಾರ್ತಿಕ್, “ಭಾರತ ಟಿ20ಐ ತಂಡದ ಓಪನರ್ ಆಗಿ ಸಂಜು ಸ್ಯಾಮ್ಸನ್ ಅವರು ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಚುಟುಕು ಸ್ವರೂಪದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಓಪನರ್ಸ್ ಆಗಿ ಆಡಲಿದ್ದಾರೆ. ಸಂಜು ತಾಂತ್ರಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಹಾಗೂ ಚುಟುಕು ಸ್ವರೂಪ ಅವರಿಗೆ ಸೂಕ್ತವಾಗುತ್ತದೆ. ಕೇಶವ್ ಮಹಾರಾಜ ಅವರ ಬೌಲಿಂಗ್‌ನಲ್ಲಿ ಮುಂದೆ ಬಂದಿದ್ದ ಸಂಜು ದೊಡ್ಡ ಹೊಡೆತ ಕೈ ಹಾಕಿ ವಿಫಲರಾಗಿದ್ದರು,” ಎಂದು ಹೇಳಿದ್ದಾರೆ.
ಸಂಜು ಸ್ಯಾಮ್ಸನ್ ವಿಶೇಷ ಕ್ರಿಕೆಟಿಗ: ಕಾರ್ತಿಕ್
“ಗಾಳಿಯಲ್ಲಿ ಬ್ಯಾಟ್ಸ್‌ಮನ್ ಅನ್ನು ಮೀರಿಸಲು ಕೇಶವ್ ಮಹಾರಾಜ್ ಬುದ್ದಿವಂತಿಕೆಯಿಂದ ಬೌಲ್ ಮಾಡಿದ್ದರು ಆದರೆ, ಸಂಜು ಸ್ವಲ್ಪ ಹೊತ್ತು ಕಾದು ತದನಂತರ ಕವರ್ಸ್ ಮೇಲೆ ಚೆಂಡನ್ನು ಹೊಡೆದಿದ್ದರು. ಮುಂದೆ ಬಂದು ಚೆಂಡನ್ನು ಹೊಡೆಯಲು ಪ್ರಯತ್ನಿಸಿ ಸಿಗದೇ ಇದ್ದಾಗ ಅವರು ಗಾಬರಿಗೊಳ್ಳದೆ ಹೆಚ್ಚುವರಿ ಸೆಕೆಂಡ್ ಅನ್ನು ತೆಗೆದುಕೊಳ್ಳುತ್ತಾರೆ. ಇದು ಅತ್ಯಂತ್ಯ ಕಠಿಣ ಕೌಶಲವಾಗಿದೆ ಹಾಗೂ ಇದನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಅವರು ಅತ್ಯಂತ ವಿಶೇಷ ಆಟಗಾರ,” ಎಂದು ಶ್ಲಾಘಿಸಿದ್ದಾರೆ ಆರ್‌ಸಿಬಿ ಮೆಂಟರ್.
IND vs SA: ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಖಚಿತ
ಕಮ್‌ಬ್ಯಾಕ್ ಮೇಲೆ ಸಂಜು ಸ್ಯಾಮ್ಸನ್ ಕಣ್ಣು
ಇದಕ್ಕೂ ಮುನ್ನ ಸಂಜು ಸ್ಯಾಮ್ಸನ್ ಅವರು ಬಾಂಗ್ಲಾದೇಶ ವಿರುದ್ಧ ಮೂರನೇ ಟಿ20ಐ ಪಂದ್ಯದಲ್ಲಿ ಕೇವಲ 47ಎಸೆತಗಳಲ್ಲಿ 111 ರನ್‌ಗಳನ್ನು ಸಿಡಿಸಿದ್ದರು. ಇದು ಇವರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಈ ಇನಿಂಗ್ಸ್‌ನಲ್ಲಿ ಅವರು 11 ಬೌಂಡರಿಗಳು ಹಾಗೂ 8 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ದ ಮೂರನೇ ಪಂದ್ಯದಲ್ಲಿ ಅವರು ಡಕ್‌ಔಟ್ ಆಗಿದ್ದರು.
30ರ ಪ್ರಾಯದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರು ಬುಧವಾರ ನಡೆಯುವ ಮೂರನೇ ಟಿ20ಐ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಅದರಂತೆ ಎರಡನೇ ಟಿ20ಐ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ, ಸೆಂಚುರಿಯನ್‌ನಲ್ಲಿ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ.