Monday, 25th November 2024

IND vs SA T20: ಅಭ್ಯಾಸ ಆರಂಭಿಸಿದ ಸೂರ್ಯಕುಮಾರ್‌ ಪಡೆ

ಡರ್ಬನ್‌: ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA T20) ನಡುವಣ 4 ಪಂದ್ಯಗಳ ಸುದೀರ್ಘ‌ ಟಿ20 ಸರಣಿ ಶುಕ್ರವಾರದಿಂದ ಡರ್ಬನ್‌ನ “ಕಿಂಗ್ಸ್‌ಮೀಡ್‌’ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈಗಾಗಲೇ ಭಾರತೀಯ ಆಟಗಾರರು ಹಂಗಾಮಿ ಕೋಚ್‌ ಲಕ್ಷ್ಮಣ್‌(vvs laxman) ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅಭ್ಯಾಸ ನಡೆಸಿದ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು ʼಸಿದ್ಧತೆಗಳು ಆರಂಭʼ ಎಂದು ಬರೆದುಕೊಂಡಿದೆ. ʼನಾವಿಲ್ಲಿ ಸಮುದ್ರ ಮಟ್ಟಕ್ಕಿಂತ ಬಹಳಷ್ಟು ಎತ್ತರದಲ್ಲಿದ್ದೇವೆ. ಹೀಗಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು 2-3 ದಿನ ಬೇಕಾಗುತ್ತದೆʼ ಎಂದು ಕೋಚ್‌ ಲಕ್ಷ್ಮಣ್‌ ಹೇಳಿದರು.

ಡರ್ಬನ್‌ ಭಾರತದ ಪಾಲಿಗೆ ಸ್ಮರಣೀಯ ಮೈದಾನ. ಇಲ್ಲಿ ಪ್ರತಿ ಬಾರಿಯೂ ಪಂದ್ಯವನ್ನಾಡುವಾಗ 2007ರಲ್ಲಿ ಯುವರಾಜ್‌ ಸಿಂಗ್‌ ಬಾರಿಸಿದ ಸಿಕ್ಸ್‌ ಸಿಕ್ಸರ್‌ ನೆನಪಾಗುತ್ತದೆ. ಇದೇ ಮೈದಾನದಲ್ಲಿ ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ಸ್ಟುವರ್ಟ್‌ ಬ್ರಾಡ್‌ ಅವರ ಓವರ್‌ ಒಂದರಲ್ಲಿ 6 ಸಿಕ್ಸರ್‌ ಸಿಡಿಸುವ ಮೂಲಕ ಯುವರಾಜ್‌ ಸಿಂಗ್‌ ಇತಿಹಾಸ ನಿರ್ಮಿಸಿದ್ದರು. ಹೀಗಾಗಿ ಡರ್ಬನ್‌ ಎಂದರೆ ಅಂದಿನ ಪಂದ್ಯ ನೆನಪಿಸಿಕೊಳ್ಳುತ್ತಾರೆ. ಪಂದ್ಯಕ್ಕೂ ಮುನ್ನ ಯುವರಾಜ್‌ ಶಿಷ್ಯನಾಗಿರುವ ಅಭಿಷೇಕ್‌ ಶರ್ಮಾ ಗುರುವಿನ ಅಂದಿನ ಸಿಕ್ಸರ್‌ ಘಟನೆಯನ್ನು ಮೆಲುಕು ಹಾಕಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಅಭಿಷೇಕ್‌ ಕೂಡ ಗುರುವಿನಂತೆ ಸಿಕ್ಸರ್‌ ಬಾರಿಸುವ ಇರಾದೆಯಲ್ಲಿದ್ದಾರೆ.

ಇದನ್ನೂ ಓದಿ

https://twitter.com/BCCI/status/1853789687724294225

ಪಂದ್ಯಕ್ಕೆ ಮಳೆ ಭೀತಿ

ಮೊದಲ ಪಂದ್ಯಕ್ಕೆ ಮಳೆ ಭೀತಿ ಕಾಡಿದೆ. ಶೇ.47 ರಷ್ಟು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ರಾತ್ರಿ 8.30ಕ್ಕೆ ಆರಂಭವಾಗಲಿದೆ. ಎಲ್ಲ ಆಟಗಾರರು ಲಕ್ಷ್ಮಣ್‌ ಮಾರ್ಗದರ್ಶನದಲ್ಲಿ ಬುಧವಾರ ಅಭ್ಯಾಸ ನಡೆಸಿದ್ದಾರೆ. ಎಲ್ಲ ಆಟಗಾರರು ಹೆಚ್ಚುವರಿ ಬ್ಯಾಟಿಂಗ್‌ ಅಭ್ಯಾಸ ನಡೆಸಿ ವೇಗದ ಪಿಚ್‌ಗೆ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಯತ್ನಪಟ್ಟರು.

ಭಾರತ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಇದುವರೆಗೆ ಒಟ್ಟು 5 ಟಿ20 ಸರಣಿಯನ್ನಾಡಿದೆ. ಈ ಪೈಕಿ 3 ರಲ್ಲಿ ಗೆಲುವು ಒಂದು ಸೋಲು ಮತ್ತು ಒಂದು ಡ್ರಾ ಸಾಧಿಸಿದೆ. ಭಾರತ ತಂಡ ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟಿ20 ಸರಣಿ ಆಡಿದ್ದು ಕಳೆದ ವರ್ಷ(2023). ಇದು ಮೂರು ಪಂದ್ಯಗಳ ಸರಣಿಯಾಗಿತ್ತು. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಉಳಿದ 2 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿತ್ತು.

ಭಾರತ: ಸೂರ್ಯಕುಮಾರ್‌ (ನಾಯಕ), ಅಭಿಷೇಕ್‌ ಶರ್ಮಾ, ಸ್ಯಾಮ್ಸನ್‌, ರಿಂಕು ಸಿಂಗ್‌, ತಿಲಕ್‌ ವರ್ಮಾ, ಜಿತೇಶ್ ಶರ್ಮಾ, ಹಾರ್ದಿಕ್‌, ಅಕ್ಷರ್‌, ರಮಣ್‌ದೀಪ್‌, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯ್‌, ಅರ್ಶ್‌ದೀಪ್‌, ವೈಶಾಖ್‌ ವಿಜಯ್‌ಕುಮಾರ್‌, ಆವೇಶ್‌ ಖಾನ್‌, ಯಶ್‌ ದಯಾಳ್‌.

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಮ್(ನಾಯಕ), ಬಾರ್ಟ್‌ಮ್ಯಾನ್‌, ಗೆರಾಲ್ಡ್ ಕೋಟ್ಜೀ, ಡೊನೊವನ್‌ ಫೆರಿಯೆರಾ, ರೀಜಾ ಹೆಂಡ್ರಿಕ್‌, ಮಾರ್ಕೊ ಯಾನ್ಸನ್‌, ಹೈನ್ರಿಚ್‌ ಕ್ಲಾಸೆನ್‌, ಪ್ಯಾಟ್ರಿಕ್‌ ಕ್ರಗರ್‌, ಕೇಶವ್‌ ಮಹಾರಾಜ್‌, ಡೇವಿಡ್‌ ಮಿಲ್ಲರ್‌, ಮಿಹ್‌ಲಾಲಿ, ಎನ್‌ಖಾಬ ಪೀಟರ್‌, ರ್‍ಯಾನ್‌ ರಿಕೆಲ್ಟನ್‌, ಆ್ಯಂಡಿಲೆ, ಲುಥೊ ಸಿಪಾಮ್ಲ, ಟ್ರಿಸ್ಟನ್‌ ಸ್ಟಬ್ಸ್‌.