ನ್ಯೂಯಾರ್ಕ್: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ವೈಶಾಲಿ(R Vaishali) ಅವರು ವಿಶ್ವ ಬ್ಲಿಟ್ಜ್ ಚಾಂಪಿಯನ್‌ಶಿಪ್‌ನಲ್ಲಿ(World Blitz Championship) ಮಹಿಳೆಯರ ವಿಭಾಗದಲ್ಲಿಕಂಚಿನ ಪದಕವನ್ನು ಜಯಿಸಿದ್ದಾರೆ. ಬುಧವಾರ ನಡೆದ ಟೂರ್ನಿಯ ಸೆಮಿಫೈನಲ್‌ನಲ್ಲಿ ವೈಶಾಲಿ, ಚೀನಾದ ಜು ವೆನ್‌ಜುನ್ ವಿರುದ್ಧ 0.5-2.5 ಅಂಕಗಳ ಅಂತರದಲ್ಲಿ ಪರಾಭವಗೊಂಡು ಕಂಚಿಗೆ ತೃಪ್ತಿಪಟ್ಟರು.
ಈ ಮೊದಲು ಚೀನಾದವರೇ ಆದ ಝು ಜಿನರ್ ಅವರನ್ನು 2.5-1.5ರ ಅಂಕಗಳ ಅಂತರದಿಂದ ಮಣಿಸಿದ್ದ ವೈಶಾಲಿ, ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದರು. ಚೀನಾದ ಲೀ ಟಿಂಗ್ಜಿ ಅವರನ್ನು ಮಣಿಸಿದ ಜು ವೆನ್‌ಜುನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ವೈಶಾಲಿ ಸಾಧನೆಗೆ ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಉಪಾಧ್ಯಕ್ಷ, ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇತ್ತೀಚೆಗೆ ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಕೊನೆರು ಹಂಪಿ 9ನೇ ಸ್ಥಾನ ಪಡೆದು ನಾಕೌಟ್‌ನಿಂದ ವಂಚಿತರಾಗಿದ್ದರು. ಪುರುಷರ ವಿಭಾಗದಲ್ಲಿ ಆರ್.ಪ್ರಜ್ಞಾನಂದ, ಅರ್ಜುನ್ ಇರಿಗೈಸಿ, ಅರವಿಂದ್ ಚಿತಂಬರಮ್ ಹಾಗೂ ವಿ.ಪ್ರಣವ್ ನಿರಾಸೆ ಮೂಡಿಸಿದ್ದರು. ಏಕೈಕ ಭರವಸೆಯಾಗಿ ಉಳಿದಿದ್ದ ವೈಶಾಲಿ ಕಂಚು ಗೆದ್ದು ಭಾರತಕ್ಕೆ ಪದಕವೊಂದನ್ನು ಗೆದ್ದ ಸಾಧನೆ ತೋರಿದರು.