Sunday, 15th December 2024

ಕ್ರಿಕೆಟ್‌: ಕ್ಲೀನ್‌ ಸ್ವೀಪ್‌ ಸಾಧನೆಗೈದ ಭಾರತ, ರಾಹುಲ್‌ ಸರಣಿ ಶ್ರೇಷ್ಠ

ಅತ್ಯುತ್ತಮ ಹೊಂದಾಣಿಕೆಯ ಬೌಲಿಂಗ್ & ಫೀಲ್ಡಿಂಗ್ ಹಾಗೂ ನೆರವಿನಿಂದ ನ್ಯೂಝೀಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದೆ.

ಅಂತಿಮ ಟಿ-20 ಪಂದ್ಯದಲ್ಲಿ ಕಿವೀಸ್ ಪಡೆಯನ್ನು 7 ರನ್‌ಗಳಿಂದ ಮಣಿಸಿದ ಭಾರತ, ಸರಣಿಯಲ್ಲಿ ಅಜೇಯ ಸಾಧನೆ ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ಆರಂಭಿಕ ಕೆ.ಎಲ್. ರಾಹುಲ್‌ (45 ರನ್‌, 33 ಎಸೆತ) ಹಾಗೂ ನಾಯಕ ರೋಹಿತ್‌ ಶರ್ಮಾ (60 ರನ್‌, 41 ಎಸೆತ) ನೆರವಿನಿಂದ 163/3 ಸ್ಕೋರ್‌ನೊಂದಿಗೆ ತನ್ನ ಇನಿಂಗ್ಸ್‌ ಮುಗಿಸಿತು.

ಸಾಕಷ್ಟು ತಿರುವು ಮತ್ತು ಪುಟಿತ ಕಾಣುತ್ತಿದ್ದ ಇಲ್ಲಿನ ಮೌಂಟ್‌ ಮೌಂಗಾನಿ ಪಿಚ್‌ನಲ್ಲಿ 164ರನ್‌ ಗುರಿ ಬೆನ್ನತ್ತಿದ ನ್ಯೂಝೀಲೆಂಡ್‌ ತನ್ನ ಪಾಲಿನ ಓವರ್‌ಗಳಲ್ಲಿ 156 ರನ್‌ಗಳಿಸಲು ಮಾತ್ರವೇ ಶಕ್ತವಾಯಿತು. ಗುರಿ ಬೆನ್ನತ್ತಿದ ಕಿವೀಸ್‌, 3.2 ಓವರ್‌ ಆಗುವಷ್ಟರಲ್ಲಿ 17 ರನ್‌ ಗಳಿಸಿ 3 ವಿಕೆಟ್‌ ಕಳೆದುಕೊಂಡು ಪರದಾಡುತ್ತಿತ್ತು. ಬಳಿಕ ಟಿಮ್ ಸೈಫರ್ಟ್ (50 ರನ್‌) ಹಾಗೂ ರಾಸ್ ಟೇಲರ್‌‌ (53 ರನ್‌‌) 99 ರನ್‌‌ ಜೊತೆಯಾಟವಾಡಿ, ತಂಡವನ್ನು ಸುಸ್ಥಿತಿಗೆ ಕೊಂಡೊಯ್ಯುವ ಕೆಲಸ ಮಾಡಿದರು.

ಆದರೆ, 13ನೇ ಓವರ್‌‌ನಲ್ಲಿ ಸೈಫರ್ಟ್ ಔಟ್ ಆದ ಬಳಿಕ ಪಂದ್ಯದ ಪರಿಸ್ಥಿತಿಯೇ ಬದಲಾಯಿತು. ಕಡೆಯ 7 ಓವರ್‌ಗಳಲ್ಲಿ 48 ರನ್‌ಗಳನ್ನಷ್ಟೇ ಗಳಿಸಬೇಕಿದ್ದ ಆತಿಥೇಯರು, ಟೇಲರ್‌ ಸೇರಿದಂತೆ 25 ರನ್‌ಗಳ ಅಂತರದಲ್ಲಿ 5 ವಿಕೆಟ್‌ ಕಳೆದುಕೊಂಡು, ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿತು.

ಅಂತಿಮ ಓವರ್‌ಗಳಲ್ಲಿ ಬಹಳ ಬುದ್ಧಿವಂತಿಕೆಯಿಂದ ವೈವಿಧ್ಯಮಯ ಎಸೆತಗಳನ್ನು ಪ್ರಯೋಗಿಸಿದ ವೇಗಿ ಜಸ್ಪ್ರಿತ್‌ ಬುಮ್ರಾ 4 ಓವರ್‌ಗಳಲ್ಲಿ ಕೇವಲ 12 ರನ್‌ ಕೊಟ್ಟು 3 ವಿಕೆಟ್‌ ಪಡೆಯುವ ಮೂಲಕ ಕಿವೀಸ್‌ ಕಿವಿ ಹಿಂಡಿದರು. ಅವರ ಈ ಆಟಕ್ಕೆ ಪಂದ್ಯ ಪುರುಷೋತ್ತಮ ಗೌರವ ಒಲಿಯಿತು.

ಸರಣಿಯಲ್ಲಿ ಕನ್ಸಿಸ್ಟೆಂಟ್ ಬ್ಯಾಟಿಂಗ್ ಪ್ರದರ್ಶನ (224 ರನ್‌) ಹಾಗೂ ಚುರುಕಿನ ವಿಕೆಟ್‌ ಕೀಪಿಂಗ್ ಮಾಡಿದ ಕೆ.ಎಲ್ ರಾಹುಲ್‌ ಅರ್ಹರಾಗಿಯೇ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ. ಬ್ಯಾಟಿಂಗ್ ಮಾಡುವ ವೇಳೆ ಕಾಲಿಗೆ ಗಾಯ ಮಾಡಿಕೊಂಡು ಫೀಲ್ಡಿಂಗ್‌ಗೆ ಇಳಿಯದ ನಾಯದ ರೋಹಿತ್‌ ಶರ್ಮಾ ಬದಲಿಗೆ ರಾಹುಲ್‌ ತಂಡವನ್ನು ಮುನ್ನಡೆಸಿದ್ದಾರೆ.