Thursday, 19th September 2024

India vs Bangladesh : ಅಶ್ವಿನ್ ಶತಕ, ಜಡೇಜಾ ಅರ್ಧ ಶತಕ; ಆರಂಭಿಕ ಕುಸಿತದ ಹೊರತಾಗಿಯೂ ಉತ್ತಮ ಸ್ಥಿತಿಯಲ್ಲಿ ಭಾರತ

India vs Bangladesh

ಚೆನ್ನೈ : ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಹೀನಾಯ ಪ್ರದರ್ಶನದ ಹೊರತಾಗಿಯೂ ಆಲ್‌ರೌಂಡರ್‌ಗಳಾದ ಆರ್‌. ಅಶ್ವಿನ್‌ ಬಾರಿಸಿದ ಅಮೋಘ ಶತಕ (102 ರನ್‌ ಬ್ಯಾಟಿಂಗ್‌) ಹಾಗೂ ರವೀಂದ್ರ ಜಡೇಜಾ (86 ರನ್‌ ಬ್ಯಾಟಿಂಗ್‌) ಅವರ ಅರ್ಧಶತಕದ ನೆರವಿನಿಂದ ಮಿಂಚಿದ ಭಾರತ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ (India vs Bangladesh) ಉತ್ತಮ ಸ್ಥಿತಿಯಲ್ಲಿದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 339 ರನ್ ಬಾರಿಸಿದೆ. ಅಶ್ವಿನ್ ಅವರು ಸೆಂಚುರಿ ಬಾರಿಸುವ ಮೂಲಕ ತಮ್ಮ ತವರಿನ ಅಂಗಣದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಇದೇ ವೇಳೆ ರವಿಂದ್ರ ಜಡೇಜಾಗೆ ಕೂಡ ಇದು ತವರು ಮೈದಾನವೇ. ಯಾಕೆಂದರೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರವಾಗಿ ಆಡುತ್ತಿದ್ದಾರೆ.

ಇಲ್ಲಿನ ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಶ್ವಿನ್ ಹಾಗೂ ಜಡೇಜಾ 195 ರನ್‌ಗಳ ಜತೆಯಾಟ ನೀಡಿ ಭಾರತ ತಂಡವನ್ನು ಅಪಾಯಿಂದ ಕಾಪಾಡಿದರು. ಅದೇ ರೀತಿ ಕೊನೇ ಸೆಷಲ್‌ನಲ್ಲಿ 163 ರನ್‌ಗಳನ್ನು ಬಾರಿಸಿದ ಅವರಿಬ್ಬರೂ ಪಂದ್ಯದಲ್ಲಿ ಭಾರತ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು. ಏತನ್ಮಧ್ಯೆ, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 56 ರನ್ ಬಾರಿಸಿ ಕುಸಿತದ ನಡುವೆಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.

ಒಟ್ಟಿನಲ್ಲಿ ಚೆನ್ನೈ ಜೋಡಿಯಾದ ಅಶ್ವಿನ್ ಹಾಗೂ ಜಡೇಜಾಗೆ ಪರಿಪೂರ್ಣ ದಿನವಾಗಿತ್ತು. ಇವರಿಬ್ಬರ ಆಟ ವೇಗದ ರನ್ ರೇಟ್ ಪಡೆಯಲೂ ನೆರವಾಯಿತು. ಬಾಂಗ್ಲಾದೇಶ ನಿಧಾನಗತಿಯ ಬೌಲಿಂಗ್ ಮಾಡಿದ್ದು ದಿನದಾಟದಲ್ಲಿ ಕೇವಲ 80 ಓವರ್‌ಗಳನ್ನು ಎಸೆದಿದೆ. ಆದಾಗ್ಯೂ ಭಾರತ ಉತ್ತಮ ರನ್ ಗಳಿಸಿದೆ.

ಆರ್‌ ಅಶ್ವಿನ್ ಪಾಲಿಗೆ ಇದು ಆರನೇ ಟೆಸ್ಟ್ ಶತಕವಾಗಿದೆ. ಅಲ್ಲದೇ ಚೆನ್ನೈನಲ್ಲಿ ಎರಡನೇ ಟೆಸ್ಟ್‌ ಶತಕವಾಗಿದೆ. ಕಳೆದ ಟಿಎನ್‌ಪಿಎಲ್‌ ವೇಳೆ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದ್ದ ಅಶ್ವಿನ್ ಮತ್ತೆ ಅದೇ ಮಾದರಿಯ ಬ್ಯಾಟಿಂಗ್ ಮೂಲಕ ಆಟಕ್ಕೆ ಕಳೆ ತಂದರು. ಅವರು ಬಾಂಗ್ಲಾ ಬೌಲರ್‌ಗಳನ್ನು ವಿಭಿನ್ನ ಸ್ಟ್ರೋಕ್‌ಗಳನ್ನು ಬಾರಿಸುವ ಮೂಲಕ ಹಿಮ್ಮೆಟ್ಟಿಸಿದರು. ಶತಕ ಬಾರಿಸಲು ಅವರು 106 ಎಸೆತಗಳನ್ನು ಎದುರಿಸುವ ಮೂಲಕ ತಮ್ಮ ಬ್ಯಾಟಿಂಗ್ ಚಳಕವನ್ನು ತೋರಿದರು. ಅವರ ಇನಿಂಗ್ಸ್‌ನಲ್ಲಿ 10 ಫೋರ್ ಹಾಗೂ 2 ಸಿಕ್ಸರ್‌ಗಳಿವೆ.

ಜಡೇಜಾ ಕೂಡ ಚುರುಕಿನ ವೇಗದಲ್ಲಿ ಸ್ಕೋರ್ ಮಾಡಿದರು. 10 ಫೋರ್ ಮತ್ತು 2 ಸಿಕ್ಸರ್‌ ಹೊಡೆದರು. ಬಾಂಗ್ಲಾದೇಶ ತಂಡಕ್ಕೆ ಇವರಿಬ್ಬರ ಮೇಲೆ ಯಾವುದೇ ರೀತಿಯ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಮೊದಲ ಎರಡು ಸೆಷನ್‌ಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದ ಬಾಂಗ್ಲಾದೇಶ ಅಂತಿಮ ಸೆಷನ್‌ನಲ್ಲಿ ವಿಕೆಟ್ ಪಡೆಯಲು ವಿಫಲಗೊಂಡಿತು.

ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ

ಮೋಡ ಕವಿದ ಬೆಳಿಗ್ಗೆ ಮತ್ತು ವೇಗದ ಬೌಲಿಂಗ್ ಸ್ನೇಹಿ ಪಿಚ್ ಇದ್ದ ಕಾರಣ ಬಾಂಗ್ಲಾದೇಶವು ಟಾಸ್ ಗೆದ್ದರೂ ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಮೊದಲ ಒಂದು ಗಂಟೆಯಲ್ಲಿ ರೋಹಿತ್ ಶರ್ಮಾ (6), ಶುಭ್‌ಮನ್‌ ಗಿಲ್ (0) ಮತ್ತು ವಿರಾಟ್‌ ಕೊಹ್ಲಿಯನ್ನು (6) ಬಾಂಗ್ಲಾದ ಮಧ್ಯಮ ವೇಗಿ ಹಸನ್ ಮಹಮೂದ್ ಔಟ್ ಮಾಡಿದರು. ಹೀಗಾಗಿ ಭಾರತ ತಂಡ ಆರಂಭಿಕ ಹಿನ್ನಡೆಗೆ ಒಳಗಾಯಿತು. 34 ರನ್‌ಗಳಿಗೆ ಮೊದಲ ಮೂರು ವಿಕೆಟ್‌ ಕಳೆದುಕೊಂಡಿತು. ಮಹಮೂದ್ ಮೊದಲ ಸ್ಪೆಲ್‌ನಲ್ಲಿಯೇ 3 ವಿಕೆಟ್ ಉರುಳಿಸಿದರು.

ಒಂದು ಬದಿಯಲ್ಲಿ ಗಟ್ಟಿಯಾಗಿ ಉಳಿದ ಯಶಸ್ವಿ ಜೈಸ್ವಾಲ್ (56 ರನ್) ಮತ್ತು ರಿಷಭ್‌ ಪಂತ್ (39) ಐವತ್ತು ರನ್‌ಗಳ ಜತೆಯಾಟವನ್ನು ಆಡಿದರು. ಶಿಸ್ತುಬದ್ಧ ಬೌಲಿಂಗ್ ದಾಳಿಯ ವಿರುದ್ಧ, ಜೈಸ್ವಾಲ್ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಅರ್ಧ ಶತಕ ಗಳಿಸಿದರು. ಪಂತ್‌ ಸುಲಭ ಕ್ಯಾಚ್ ನೀಡಿ ಮಹಮೂದ್‌ಗೆ ಮತ್ತೊಂದು ವಿಕೆಟ್‌ ಕೊಡುಗೆ ಕೊಟ್ಟರು. ಮುಂದಿನ ಓವರ್‌ನಲ್ಲಿ ಕೆ.ಎಲ್.ರಾಹುಲ್ ಔಟಾದರು. ಮತ್ತೊಂದು ಬಾರಿ ಅವರು ಫಾರ್ಮ್ ಬಗ್ಗೆ ಪ್ರಶ್ನೆಗಳು ಮೂಡಿದವು. ಜೈಸ್ವಾಲ್ ಕೂಡ ನಿರ್ಗಮಿಸುವುದರೊಂದಿಗೆ ಬಾಂಗ್ಲಾ ತಂಡಕ್ಕೆ ಹೆಚ್ಚಿನ ನೆರವು ಸಿಕ್ಕಿತು.

ಇದನ್ನೂ ಓದಿ: Sourav Ganguly : ಯೂಟ್ಯೂಬರ್ ವಿರುದ್ಧ ಕೇಸ್‌ ದಾಖಲಿಸಿದ ಸೌರವ್‌ ಗಂಗೂಲಿ; ಪ್ರತಿಷ್ಠೆಗೆ ಹಾನಿಯಾಗಿರುವ ಆರೋಪ

ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡವೊಂದು ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದ ಒಂಬತ್ತನೇ ಉದಾಹರಣೆ ಇದಾಗಿದೆ. ಹಿಂದಿನ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡರೆ, ಆಸ್ಟ್ರೇಲಿಯಾ ಇತರ ಎರಡು ಪಂದ್ಯಗಳಲ್ಲಿ10 ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಪಂದ್ಯದಲ್ಲಿ ಭಾರತ ತಂಡದಲ್ಲಿ ಬುಮ್ರಾ, ಆಕಾಶ್‌ದೀಪ್ ಹಾಗೂ ಮೊಹಮ್ಮದ್ ಸಿರಾಜ್ ಸೇರಿದಂತೆ ಮೂವರು ಬೌಲರ್‌ಗಳನ್ನು ಸೇರಿಸಿಕೊಳ್ಳಲಾಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಸ್ಪಿನ್ನರ್‌ಗಳ ನೆರವಿನಿಂದ ಆಡುವ ಕಾರಣ ಇದು ವಿಶೇಷ ಎನಿಸಿದೆ. ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಕೊನೆಯ ಬಾರಿ ಮೂರು ವೇಗಿಗಳೊಂದಿಗೆ ಆಡಿತ್ತು. 2019ರಲ್ಲಿ ಇಂದೋರ್ ಮತ್ತು ಕೋಲ್ಕತಾದಲ್ಲಿ ನಡೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ತಂಡದಲ್ಲಿದ್ದರು.