Monday, 4th November 2024

IND vs NZ: ಭಾರತಕ್ಕೆ ಕಬ್ಬಿಣದ ಕಡಲೆಯಾದ ಸ್ಪಿನ್‌ ಪಿಚ್‌

ಮುಂಬಯಿ: ಸ್ಪಿನ್​ ಬೌಲಿಂಗ್​ ಭಾರತೀಯ(Team India) ಕ್ರಿಕೆಟ್​ನ ಶಕ್ತಿ. ಪ್ರವಾಸಿ ತಂಡಗಳನ್ನು ಸ್ಪಿನ್​ ಪಿಚ್​ಗಳಲ್ಲಿ ಕಟ್ಟಿಹಾಕುವ ಮೂಲಕ ಭಾರತ ತವರಿನಲ್ಲಿ ಪ್ರಾಬಲ್ಯ ಸಾಧಿಸಿಕೊಂಡು ಬಂದಿತ್ತು. ಆದರೆ ಈಗ, ಈ ಜಾಯಮಾನ ಬದಲಾಗಿದೆ. ಈಗ ಸ್ಪಿನ್​ ಪಿಚ್​ಗಳೇ ಭಾರತದ ದೌರ್ಬಲ್ಯವಾಗಿ ಮಾರ್ಪಟ್ಟಂತಿದೆ. ಇದಕ್ಕೆ ತವರಿನಲ್ಲಿ ನ್ಯೂಜಿಲ್ಯಾಂಡ್‌(IND vs NZ) ವಿರುದ್ಧದ ವೈಟ್‌ ವಾಶ್‌ ಮುಖಭಂಗವೇ ಉತ್ತಮ ನಿದರ್ಶನ.

ಹೌದು, ಒಂದು ಕಾಲದಲ್ಲಿ ಭಾರತವನ್ನು ತವರಿನಲ್ಲಿ ಸೋಲಿಸುವುದು ಪ್ರವಾಸಿ ತಂಡಕ್ಕೆ ಕಬ್ಣಿಣದ ಕಡಲೆಯಾಗಿತ್ತು. ಕನಿಷ್ಠ ಒಂದು ಪಂದ್ಯ ಗೆದ್ದರೆ ಅದು ದೊಡ್ಡ ಸಾಧನೆಯಾಗಿರುತ್ತಿತ್ತು. ಆದರೆ ಇದೀಗ ಭಾರತವೇ ತವರಿನಲ್ಲಿ ಗೆಲ್ಲಲು ಪರದಾಡುವ ಸ್ಥಿತಿಗೆ ಬಂದು ನಿಂತಿದೆ.

ಮೊಹಮದ್​ ಅಜರುದ್ದೀನ್​, ಸಚಿನ್​ ತೆಂಡುಲ್ಕರ್​, ರಾಹುಲ್​ ದ್ರಾವಿಡ್​, ವೀರೇಂದ್ರ ಸೆಹ್ವಾಗ್​, ವಿವಿಎಸ್​ ಲಕ್ಷ್ಮಣ್​, ಗೌತಮ್​ ಗಂಭೀರ್​ರಂಥ ಬ್ಯಾಟರ್​ಗಳು ಪ್ರವಾಸಿ ಸ್ಪಿನ್ನರ್​ಗಳನ್ನು ಅತ್ಯುತ್ತಮವಾಗಿ ದಂಡಿಸುತ್ತಿದ್ದರು. ಆದರೆ ಈಗಿನ ಆಟಗಾರರು ಸ್ಪಿನ್‌ಗೆ ಹೆಚ್ಚಿನ ವಿಕೆಟ್‌ ಒಪ್ಪಿಸುತ್ತಿದ್ದಾರೆ. ಇನ್ನೊಂದು ಬೇಸರದ ಸಂಗತಿಯೆಂದರೆ ಭಾರತೀಯ ಸ್ಪಿನ್‌ ಬೌಲರ್‌ಗಳಿಂದ ಪ್ರವಾಸಿ ತಂಡದ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸುತ್ತಿರುವುದು. ಅದರಲ್ಲೂ ಅರೆ ಕಾಲಿಕ ಸ್ಪಿನ್ನರ್‌ ಗ್ಲೆನ್‌ ಪಿಲಿಪ್ಸ್‌ ಕೂಡ ಅನುಭವಿ ಅಶ್ವಿನ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಗೋಚರಿಸಿದ್ದು ಭಾರತೀಯ ಸ್ಪಿನ್‌ ಬೌಲಿಂಗ್‌ ಬಗ್ಗೆ ಚಿಂತಿಸುವಂತೆ ಮಾಡಿದೆ.

ಇದನ್ನೂ ಓದಿ WTC Points Table: ಅಗ್ರಸ್ಥಾನ ಕಳೆದುಕೊಂಡ ಭಾರತ

https://twitter.com/BCCI/status/1852980561293496792

ಸೋಲಿನಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​ಗೆ ಭಾರತ ತಂಡದ ಅರ್ಹತೆ ಈಗ ತೂಗುಯ್ಯಾಲೆಯಲ್ಲಿ ನಿಂತಿದೆ. ಒಂದು ವೇಳೆ ಭಾರತ ತಂಡ ಸತತ 3ನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್​ಗೇರಿದರೂ, ರೋಹಿತ್​ ಶರ್ಮ ಮುಂದಿನ ಡಬ್ಲ್ಯುಟಿಸಿ ಆವೃತ್ತಿಗೆ ಅಂದರೆ 2027ರವರೆಗೆ ಟೆಸ್ಟ್​ ತಂಡದ ನಾಯಕರಾಗಿ ಮುಂದುವರಿಯುವುದು ಅನುಮಾನವೆನಿಸಿದೆ. ಕಿವೀಸ್​ ವಿರುದ್ಧದ ತವರಿನ ಆಘಾತಕಾರಿ ಸೋಲಿನ ಬಳಿಕ ಭಾರತ ತಂಡದ ಹಿರಿಯ ಆಟಗಾರರು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಮುಂದಿನ 2 ವರ್ಷಗಳಲ್ಲಿ ಮುಖ್ಯ ಕೋಚ್​ ಗೌತಮ್​ ಗಂಭೀರ್​ಗೆ ಭಾರತ ತಂಡದ ಸ್ಥಿತ್ಯಂತರವನ್ನು ನಿಭಾಯಿಸುವುದು ಕೂಡ ಪ್ರಮುಖ ಸವಾಲಾಗುವ ನಿರೀಕ್ಷೆ ಇದೆ.

ಭಾರತ ತಂಡ ಇದುವರೆಗೆ ತವರಿನಲ್ಲಿ ಆಡಿದ ಎರಡಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ ಒಮ್ಮೆಯೂ ವೈಟ್‌ ವಾಶ್‌ ಎದುರಿಸಿರಲಿಲ್ಲ. ಇದೀಗ ಕಿವೀಸ್‌ ಕಿವೀಸ್‌ ವಿರುದ್ಧ 3-0 ಅಂತರದಿಂದ ಸೋತು ಮೊದಲ ಬಾರಿಗೆ ವೈಟ್‌ ವಾಶ್‌ ಆದ ಕಳಪೆ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಒಂದಕ್ಕಿಂತ ಹೆಚ್ಚು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಒಮ್ಮೆ ಮಾತ್ರ ಭಾರತ ವೈಟ್‌ ವಾಶ್‌ ಮುಖಭಂಗ ಎದುರಿಸಿತ್ತು. 1999-2000 ದಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದಿಂದ ಸರಣಿ ಸೋಲು ಅನುಭವಿಸಿತ್ತು. ನ್ಯೂಜಿಲೆಂಡ್ ತವರು ಅಥವಾ ವಿದೇಶದಲ್ಲಿ ಮೂರು ಟೆಸ್ಟ್‌ಗಳನ್ನು ಗೆದ್ದ ಮೊದಲ ನಿದರ್ಶನ ಇದಾಗಿದೆ.