ಬ್ರಿಸ್ಟಲ್ : ನಿಧಾನ ಬ್ಯಾಟಿಂಗ್ ಹಾಗೂ ಕಳಪೆ ಬೌಲಿಂಗಿನಿಂದಾಗಿ ಭಾರತೀಯ ವನಿತೆಯರ ತಂಡ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ.
ನಾಯಕಿ ಮಿಥಾಲಿ ರಾಜ್ ಅವರ ಬ್ಯಾಟಿಂಗ್ ಹೋರಾಟದ ಫಲವಾಗಿ ಭಾರತ 8 ವಿಕೆಟಿಗೆ 201 ರನ್ನುಗಳ ಸಾಮಾನ್ಯ ಸ್ಕೋರ್ ದಾಖಲಿಸಿದರೂ, ಆತಿಥೇಯರಿಗೆ ಇದು ಸವಾಲೆನಿಸಲಿಲ್ಲ. ಪರಿಣಾಮ ಇನ್ನು ೧೫.೧ ಓವರ್ ಬಾಕಿ ಇರುವಂತೆಯೇ ಇಂಗ್ಲೆಂಡ್ ಜಯಭೇರಿ ಬಾರಿಸಿತು. ಓಪನರ್ ಟಾಮಿ ಬ್ಯೂಮಂಟ್ (ಅಜೇಯ 87) ಮತ್ತು ನಥಾಲಿ ಶಿವರ್ (ಅಜೇಯ 74) ಮುರಿಯದ 3ನೇ ವಿಕೆಟಿಗೆ 119 ರನ್ ಪೇರಿಸಿ ಗೆಲುವು ಸಾರಿದರು. ಬ್ಯಾಟಿಂಗಿನಂತೆ ಭಾರತದ ಬೌಲಿಂಗ್ ಕೂಡ ನೀರಸವಾಗಿತ್ತು.
ಈ ಪಂದ್ಯದ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡಿದ ಕಿರಿಯ ಆಟಗಾರ್ತಿ ಎಂಬ ದಾಖಲೆ ಬರೆದ ಶಫಾಲಿ ವರ್ಮ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಅದರಂತೆ, 15 ರನ್ನಿನಲ್ಲಿ ಮೂರು ಬೌಂಡರಿ ಹೊರಹಿಮ್ಮಿತ್ತು. ಆದರೆ, ಈ ಆರ್ಭಟ ಇಲ್ಲಿಗೆ ಸೀಮತವಾಗಿತ್ತು. ಸ್ಮತಿ ಮಂಧನಾ (10) 27 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡ ಪರಿಣಾಮ ಭಾರತದ ಮೇಲೆ ಒತ್ತಡ ಬಿತ್ತು. ನಾಯಕಿಯ ಆಟವಾಡಿದ ಮಿಥಾಲಿ ಎರಡು ಉಪಯುಕ್ತ ಜತೆಯಾಟಗಳಲ್ಲಿ ಪಾಲ್ಗೊಂಡರು.
ಪೂನಂ ರಾವುತ್ (32) ಜತೆ 3ನೇ ವಿಕೆಟಿಗೆ 56 ರನ್, ದೀಪ್ತಿ ಶರ್ಮ (30) ಜತೆ 4ನೇ ವಿಕೆಟಿಗೆ 65 ರನ್ ಪೇರಿಸಿದರು. 46ನೇ ಓವರ್ ತನಕ ಕ್ರೀಸ್ ಆಕ್ರಮಿಸಿ ಕೊಂಡು ನಿಂತ ಮಿಥಾಲಿ ಗಳಿಕೆ 108 ಎಸೆತಗಳಿಂದ 72 ರನ್. ಇದು ಅವರ 56ನೇ ಅರ್ಧ ಶತಕ. ಅಂತಿಮವಾಗಿ ಸ್ಪಿನ್ನರ್ ಎಕ್ ಸ್ಟೋನ್ ಎಸೆತದಲ್ಲಿ ಬೌಲ್ಡ್ ಆಗಿ ವಾಪಸಾದರು. 40ಕ್ಕೆ 3 ವಿಕೆಟ್ ಕಿತ್ತ ಎಕ್‌ಸ್ಟೋನ್ ಇಂಗ್ಲೆಂಡಿನ ಯಶಸ್ವಿ ಬೌಲರ್.