ಟೋಕಿಯೊ: ಒಲಿಂಪಿಕ್ಸ್ ಹಾಕಿಯಲ್ಲಿ ನಾಲ್ಕು ದಶಕಗಳಲ್ಲೇ ಮೊದಲ ಬಾರಿಗೆ ಕಂಚಿನ ಪದಕ ಜಯಿಸುವ ಮೂಲಕ ಭಾರತ ಹಾಕಿಯಲ್ಲಿ ಹೊಸ ಯುಗ ಆರಂಭವಾಯಿತು.
ಕಂಚಿನ ಪದಕಕ್ಕಾಗಿ ನಡೆದ ಸೆಣಸಾಟದಲ್ಲಿ ಜರ್ಮನಿ ತಂಡದ ಸವಾಲನ್ನು ಭಾರತ 5-4 ಅಂತರದಿಂದ ಹಿಮ್ಮೆಟ್ಟಿಸಿತು. ಈ ಮೂಲಕ 1980ರ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿಗೆ ಪದಕ ಸಾಧನೆ ಮಾಡಿತು.
ಪಂದ್ಯದುದ್ದಕ್ಕೂ ಉಭಯ ತಂಡಗಳಿಂದ ಗೋಲಿನ ಮಳೆ ಸುರಿಯಿತು. ಮೊದಲ ಕ್ವಾರ್ಟರ್‌ನಲ್ಲಿ ಜರ್ಮನಿಯ ಹೆರ್ಬರ್ಚ್ ಹೊಡೆತವನ್ನು ಟಿಮೂರ್ ಒರೂಜ್ ನಿಯಂತ್ರಣಕ್ಕೆ ತೆಗೆದುಕೊಂಡರು. ಶ್ರೀಜೇಶ್ ಮೊದಲು ಅದನ್ನು ರಕ್ಷಿಸಿದರೂ ಬಳಿಕ ಅದನ್ನು ರಿಬೌಂಡ್‌ನಲ್ಲಿ ಗೋಲುಪೆಟ್ಟಿಗೆ ಸೇರಿಸಿದರು. ಎರಡನೇ ಕ್ವಾರ್ಟರ್ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಇಳಿದ ಭಾರತ ಸಿಮ್ರಜ್ ಜೀತ್ ಅವರ ಅದ್ಭುತ ಗೋಲಿನಿಂದ ಸಮಬಲ ಸಾಧಿಸಿತು.
ಆದರೆ ಪ್ರತಿಹೋರಾಟ ನೀಡಿದ ಜರ್ಮನಿ ಎರಡು ಗೋಲುಗಳನ್ನು ಹೊಡೆದು ಅಂತರವನ್ನು 3-1ಕ್ಕೇರಿಸಿತು. ಈ ಹಂತದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಭಾರತದ ಪರ ಹರ್‌ಮನ್ ಪ್ರೀತ್ ಅವರ ಹೊಡೆತವನ್ನು ಜರ್ಮನಿಯ ಗೋಲಿ ರಕ್ಷಿಸಿದರೂ, ರಿಬೌಂಡ್ ನಲ್ಲಿ ಹಾರ್ದಿಕ್ ಗೋಲು ಗಳಿಸಿ ಅಂತರವನ್ನು 3-2ಕ್ಕೆ ಇಳಿಸಿ ದರು. ಪಟ್ಟು ಬಿಡದ ಭಾರತದ ಪರ ಹರ್‌ಮನ್ ಪ್ರೀತ್ ಮತ್ತೆ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ 3-3 ಸಮಬಲಕ್ಕೆ ತಂದರು.
ಮೂರನೇ ಕ್ವಾರ್ಟರ್‌ನಲ್ಲಿ ರೂಪಿಂದರ್ ಅವರ ಪೆನಾಲ್ಟಿ ಸ್ಟ್ರೋಕ್ ಮೂಲಕ 4-3 ಮುನ್ನಡೆ ಸಾಧಿಸಿದ ಭಾರತಕ್ಕೆ ಸಿಮ್ರನ್ ಜೀತ್ ಮತ್ತೊಂದು ಫೀಲ್ಡ್ ಗೋಲ್ ಮೂಲಕ ಅಂತರ ಹೆಚ್ಚಿಸಿದರು. ಭಾರತದ ಆಕ್ರಮಣದಿಂದಾಗಿ ಜರ್ಮನಿ ರಕ್ಷಣೆಗೆ ಹೆಚ್ಚಿನ ಗಮನ ಹರಿಸಿತು. ಆಟ ಮುಕ್ತಾಯಕ್ಕೆ ಮೂರು ನಿಮಿಷ ಇರುವಾಗ ಸಮಬಲ ಸಾಧಿಸಲು ಸಿಕ್ಕಿದ ಸುವರ್ಣಾವಕಾಶವನ್ನು ಜರ್ಮನಿ ವ್ಯರ್ಥಪಡಿಸಿಕೊಂಡಿತು.
ಸೆಮಿಫೈನಲ್‌ನಲ್ಲಿ ಭಾರತ ಪ್ರಬಲ ಬೆಲ್ಜಿಯಂ ವಿರುದ್ಧ 2-5 ಅಂತರದಿಂದ ಸೋತರೆ, ಜರ್ಮನಿ ಆಸ್ಟ್ರೇಲಿಯಾ ವಿರುದ್ಧ 1-3 ಅಂತರದಿಂದ ಪರಾಭವಗೊಂಡಿತ್ತು.