ನವದೆಹಲಿ: ಆಸ್ಟ್ರೇಲಿಯಾ ಎದುರು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಭಾರತ ತಂಡದ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಮೂರೂ ಸ್ವರೂಪದಲ್ಲಿಯೂ ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ವೇಗದ ಬೌಲರ್ ಎಂದು ಅವರು ಶ್ಲಾಘಿಸಿದ್ದಾರೆ.
ಇತ್ತೀಚೆಗೆ ಮುಗಿದಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಆದರೆ, ಜಸ್ಪ್ರೀತ್ ಬುಮ್ರಾ ಈ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಈ ಸರಣಿಯಲ್ಲಿ ಅವರು ಒಟ್ಟು 32 ವಿಕೆಟ್ಗಳನ್ನು ಕಬಳಿಸಿದ್ದರು. ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ, ಐದನೇ ಹಾಗೂ ಸಿಡ್ನಿ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಬುಮ್ರಾ ಗಾಯಕ್ಕೆ ತುತ್ತಾಗಿದ್ದ ಕಾರಣ ಕೊನೆಯ ಇನಿಂಗ್ಸ್ನಲ್ಲಿ ಬೌಲ್ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಇದು ಭಾರತಕ್ಕೆ ಭಾರಿ ಹಿನ್ನಡೆಯನ್ನು ತಂದುಕೊಟ್ಟಿತ್ತು.
ಜಸ್ಪ್ರೀತ್ ಬುಮ್ರಾ ಅವರ ಗಾಯದ ಹೊರತಾಗಿಯೂ ಭಾರತ ತಂಡ ಸಿಡ್ನಿ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ 4 ರನ್ ಮುನ್ನಡೆಯನ್ನು ಪಡೆದಿತ್ತು. ಆದರೆ, ಭಾರತ ತಂಡದ ನೀಡಿದ್ದ 162 ರನ್ಗಳ ಗುರಿಯನ್ನು ಆಸ್ಟ್ರೇಲಿಯಾ ಸುಲಭವಾಗಿ ಚೇಸ್ ಮಾಡಿ ಟೆಸ್ಟ್ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಅಂದ ಹಾಗೆ ಡಿಸೆಂಬರ್ ತಿಂಗಳ ಐಸಿಸಿ ಪ್ರಶಸ್ತಿಯ ರೇಸ್ನಲ್ಲಿ ಜಸ್ಪ್ರೀತ್ ಬುಮ್ರಾ ಇದ್ದಾರೆ.
ಜಸ್ಪ್ರೀತ್ ಬುಮ್ರಾಗೆ ಮೈಕಲ್ ಕ್ಲಾರ್ಕ್ ಮೆಚ್ಚುಗೆ
ಇಎಸ್ಪಿಎನ್ ಕ್ರಿಕ್ಇನ್ಪೋ ಜೊತೆ ಮಾತನಾಡಿದ ಮೈಕಲ್ ಕ್ಲಾರ್ಕ್, ” ಜಸ್ಪ್ರೀತ್ ಬುಮ್ರಾ ಅವರ ಬಗ್ಗೆ ನನಗೆ ಒಂದು ಯೋಚನೆ ಮನಸಿನಲ್ಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಬಳಿಕ ಒಂದು ಕಡೆ ಕುಳಿತು ಯೋಚನೆ ಮಾಡುತ್ತಿದ್ದ ವೇಳೆ, ಪ್ರಸ್ತುತ ಮೂರು ಸ್ವರೂಪದಲ್ಲಿಯೂ ಬುಮ್ರಾ ಅತ್ಯುತ್ತಮಮ ವೇಗದ ಬೌಲರ್ ಎಂದು ನನಗೆ ಅನಿಸಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಕರ್ಟ್ಲಿ ಆಂಬ್ರೋಸ್, ಗ್ಲೆನ್ ಮೆಗ್ರಾತ್ ಸೇರಿದಂತೆ ಹಲವು ವಿಶ್ವದ ಶ್ರೇಷ್ಠ ಫಾಸ್ಟ್ ಬೌಲರ್ಗಳು ಇದ್ದಾರೆ. ಆದರೆ, ಅವರು ಟಿ20ಐ ಕ್ರಿಕೆಟ್ ಆಡಿಲ್ಲ. ಹೀಗಾಗಿ ಈ ಬೌಲರ್ಗಳನ್ನು ನಾನು ತೆಗೆದುಕೊಳ್ಳುತ್ತಿಲ್ಲ. ಮೂರು ಸ್ವರೂಪದಲ್ಲಿ ಯಾರೆಲ್ಲಾ ಆಡಿದ್ದಾರೆ, ಅಂಥಾ ಆಟಗಾರರನ್ನು ಮಾತ್ರ ನಾನು ತೆಗೆದುಕೊಂಡಿದ್ದೇನೆ. ಇವರ ಪೈಕಿ ಜಸ್ಪ್ರೀತ್ ಬುಮ್ರಾ ಉತ್ತಮ ಫಾಸ್ಟ್ ಬೌಲರ್. ಯಾವುದೇ ಕಂಡೀಷನ್ಸ್ ಆದರೂ ಅವರು ಉತ್ತಮವಾಗಿ ಬೌಲ್ ಮಾಡುತ್ತಾರೆ. ಈ ಕಾರಣದಿಂದಲೇ ಅವರು ಶ್ರೇಷ್ಠ ಬೌಲರ್ ಆಗಿದ್ದಾರೆ. ಯಾವುದೇ ಸ್ವರೂಪದಲ್ಲಿಯೂ ಇವರು ಅಗ್ರ ದರ್ಜೆಯಲ್ಲಿದ್ದಾರೆ,” ಎಂದು ಕ್ಲಾರ್ಕ್ ಹೊಗಳಿದ್ದಾರೆ.
ಈ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ 20 ವಿಕೆಟ್ಗಳನ್ನು ಪಡೆದಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಪ್ರಸಿಧ್ ಕೃಷ್ಣ 6 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದರೆ, ಅವರು ಈ ಸರಣಿಯ ಆರಂಭದಿಂದಲೂ ಆಡಿದ್ದರೆ ಚೆನ್ನಾಗಿರುತ್ತಿತ್ತು. ಆಸ್ಟ್ರೇಲಿಯಾ ತಂಡ ಬ್ರಿಸ್ಬೇನ್ ಮತ್ತು ಮೆಲ್ಬರ್ನ್ನಲ್ಲಿ 400ಕ್ಕೂ ಅಧಿಕ ರನ್ಗಳನ್ನು ಕಲೆ ಹಾಕಿತ್ತು.
ಆಸ್ಟ್ರೇಲಿಯಾ ತಂತ್ರವನ್ನು ಶ್ಲಾಘಿಸಿದ ಆರೋನ್ ಫಿಂಚ್
“ಆಸ್ಟ್ರೇಲಿಯಾ ತಂಡ ಜಸ್ಪ್ರೀತ್ ಬುಮ್ರಾಗೆ ದೀರ್ಘಾವಧಿ ಆಡುವ ಯೋಜನೆಯನ್ನು ರೂಪಿಸಿಕೊಂಡಿತ್ತು. ಓವರ್ನಿಂದ ಓವರ್ಗೆ, ಸ್ಪೆಲ್ನಿಂದ ಇನ್ನೊಂದು ಸ್ಪೆಲ್ ಬೌಲ್ ಮಾಡಲು ಬುಮ್ರಾ ಅವರನ್ನು ಕರೆ ತರಬೇಕು. ಆಸ್ಟ್ರೇಲಿಯಾ ತಂಡದ ರಣತಂತ್ರ ವರ್ಕ್ಔಟ್ ಆಗಿದೆ. ಜಸ್ಪ್ರೀತ್ ಬುಮ್ರಾ ಎದುರು ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ದೀರ್ಘಾವಧಿ ಬ್ಯಾಟ್ ಮಾಡಿದ್ದಾರೆ,” ಎಂದು ಆರೋನ್ ಫಿಂಚ್ ಶ್ಲಾಘಿಸಿದ್ದಾರೆ.
ಈ ಸುದ್ದಿಯನ್ನು ಓದಿ: Mohammed Shami: ಫಿಟ್ನೆಸ್ ಚರ್ಚೆಯ ಬೆನ್ನಲ್ಲೇ ಶಮಿ ಬೌಲಿಂಗ್ ಅಭ್ಯಾಸದ ವಿಡಿಯೊ ವೈರಲ್