ನ್ಯೂಯಾರ್ಕ್: ಭಾರತದ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ(Koneru Humpy) ವಿಶ್ವ ಮಹಿಳಾ ರ‍್ಯಾಪಿಡ್ ಚೆಸ್ ಚಾಂಪಿಯನ್(FIDE World Rapid Championships) ಆಗಿ ಹೊರಹೊಮ್ಮಿದ್ದಾರೆ. ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ 37 ವರ್ಷದ ಕೊನೆರು ಹಂಪಿ ಚೀನಾದ ಜು ವೆನ್ಜುನ್ ಬಳಿಕ ಮಹಿಳೆಯರ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಎರಡನೇ ಚೆಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಭಾನುವಾರ ನಡೆದ ಫೈನಲ್ನಲ್ಲಿ ಹಂಪಿ ಅವರು 11 ಅಂಕಗಳಲ್ಲಿ 8.5 ಅಂಕಗಳನ್ನು ಕಲೆ ಹಾಕುವ ಮೂಲಕ ಅಗ್ರಸ್ಥಾನ ಗಳಿಸಿದರು. 2019ರಲ್ಲಿ ಜಾರ್ಜಿಯಾದಲ್ಲಿ ನಡೆದ ಟೂರ್ನಿಯಲ್ಲೂ ಕೊನೆರು ಅವರು ಪ್ರಶಸ್ತಿ ಗೆದ್ದಿದ್ದರು. ಇದೀಗ ಮತ್ತೊಂದು ಬಾರಿ ಚಾಂಪಿಯನ್ ಆಗುವ ಮೂಲಕ ಈ ಸಾಧನೆಗೈದ ಭಾರತದ ಮೊದಲ ಮಹಿಳೆ ಎನಿಸಿಕೊಂಡರು.
ಪುರುಷರ ವಿಭಾಗದಲ್ಲಿ ರಷ್ಯಾದ 18 ವರ್ಷದ ವೊಲೊಡರ್ ಮುರ್ಜಿನ್ ಪ್ರಶಸ್ತಿ ಗೆದ್ದರು. 17ನೇ ವಯಸ್ಸಿಗೆ ಚಾಂಪಿಯನ್ಶಿಪ್ ಕಿರೀಟ ತಮ್ಮದಾಗಿಸಿಕೊಂಡಿರುವ ನೋಡರ್ಬೆಕ್ ಅಬ್ದುಸಟ್ಟೊರೊವ್ ನಂತರ ವೊಲೊಡರ್ ಮುರ್ಜಿನ್ ಎರಡನೇ ಕಿರಿಯ FIDE ವಿಶ್ವ ರ‍್ಯಾಪಿಡ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಕೊನೆರು ಹಂಪಿ ಮೊದಲ ಬಾರಿಗೆ ಮಾಸ್ಕೋದಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ 2012 ರ ಆವೃತ್ತಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಅದಾದ ಬಳಿಕ 2019ರಲ್ಲಿ ಅವರು ಜಾರ್ಜಿಯಾದ ಬಟುಮಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಭಾರತೀಯ ಗ್ರ್ಯಾಂಡ್‌ಮಾಸ್ಟರ್ 2023ರ ಆವೃತ್ತಿಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಸಾಧನೆಗಳ ಹೊರತಾಗಿ, ಕೊನೆರು ಹಂಪಿ ಅವರು 2022ರ ಮಹಿಳಾ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.