ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗಿನ ಏಳು ವರ್ಷಗಳ ಪಯಣವನ್ನು ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅಂತ್ಯಗೊಳಿಸಿದ್ದಾರೆ. ನವೆಂಬರ್ 24 ಹಾಗೂ 25 ರಂದು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೆಗಾ ಹರಾಜಿನಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಆರ್ಟಿಎಂ ಮೂಲಕ ಉಳಿಸಿಕೊಳ್ಳಲು ಬೆಂಗಳೂರು ಫ್ರಾಂಚೈಸಿ ನಿರಾಕರಿಸಿತು. ಇದನ್ನು ಸದುಪಯೋಗಪಡಿಸಿಕೊಂಡ ಗುಜರಾತ್ ಟೈಟನ್ಸ್ ತಂಡ ಟೀಮ್ ಇಂಡಿಯಾ ವೇಗಿಯನ್ನು 12.25 ಕೋಟಿ ರೂ. ಗಳಿಗೆ ಖರೀದಿಸಿತು. ಇದರೊಂದಿಗೆ ಬೆಂಗಳೂರು ತಂಡಕ್ಕೆ ಮರಳಲು ಸಿರಾಜ್ ಕನಸು ಭಗ್ನವಾಯಿತು.
ಮೆಗಾ ಹರಾಜು ಮುಗಿದ ಒಂದು ದಿನದ ಬಳಿಕ ಮೊಹಮ್ಮದ್ ಸಿರಾಜ್ ಅವರು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಏಳು ವರ್ಷಗಳ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಯಣಕ್ಕೆ ಭಾವನಾತ್ಮಕ ವಿದಾಯವನ್ನು ಹೇಳಿದ್ದಾರೆ. 2017ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಮೊಹಮ್ಮದ್ ಸಿರಾಜ್ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ನಂತರ 2018ರಲ್ಲಿ ಆರ್ಸಿಬಿಗೆ ಬಂದಿದ್ದರು. ಅಂದಿನಿಂದ ನಿರಂತರವಾಗಿ 2024ರ ಐಪಿಎಲ್ ಟೂರ್ನಿಯ ವರೆಗೂ ಅಂದರೆ ಏಳು ಆವೃತ್ತಿಗಳಲ್ಲಿ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಸಿರಾಜ್ ಆಡಿದ 87 ಐಪಿಎಲ್ ಪಂದ್ಯಗಳಲ್ಲಿ 83 ವಿಕೆಟ್ಗಳನ್ನು ಕಬಳಿಸಿದ್ದಾರೆ.
IPL 2025 Mega Auction: ಆರ್ಸಿಬಿ ಸೇರಿದ ಲಿವಿಂಗ್ಸ್ಟೋನ್, ಗುಜರಾತ್ಗೆ ಸಿರಾಜ್!
ಆರ್ಸಿಬಿಗೆ ಸಿರಾಜ್ ಭಾವನಾತ್ಮಕ ವಿದಾಯ
“ನನ್ನ ಆತ್ಮಿಯ ಆರ್ಸಿಬಿ, ಏಳು ವರ್ಷಗಳ ಕಾಲ ಆರ್ಸಿಬಿ ನನ್ನ ಹೃದಯಲ್ಲಿತ್ತು. ನಾನು ಆರ್ಸಿಬಿ ಜೆರ್ಸಿಯಲ್ಲಿ ನನ್ನ ಸಮಯವನ್ನು ಹಿಂತಿರುಗಿ ನೋಡಿದಾಗ ನನ್ನ ಹೃದಯವು ಕೃತಜ್ಞತೆ, ಪ್ರೀತಿ ಮತ್ತು ಭಾವನೆಯಿಂದ ತುಂಬಿದೆ. ಮೊದಲ ಬಾರಿ ಆರ್ಸಿಬಿ ಜೆರ್ಸಿ ಧರಿಸಿದ್ದಾಗ ನನಗೆ ಈ ರೀತಿಯ ಬಾಂಧವ್ಯ ವೃದ್ದಿಯಾಗಬಹುದೆಂದು ನಾನು ಭಾವಿಸಿರಲಿಲ್ಲ. ಆರ್ಸಿಬಿ ಕಲರ್ಸ್ನಲ್ಲಿ ಮೊದಲನೇ ಎಸೆತ ಹಾಕುವಾಗ, ಪ್ರತಿಯೊಂದು ವಿಕೆಟ್ ಪಡೆದಾಗ, ಎಲ್ಲಾ ಪಂದ್ಯಗಳನ್ನು ಆಡುವಾಗ, ನಿಮ್ಮೊಂದಿಗೆ ಪ್ರತಿಯೊಂದು ಕ್ಷಣವನ್ನು ಹಂಚಿಕೊಂಡಿದ್ದೇನೆ. ಈ ಪಯಣವು ಅಸಾಮಾನ್ಯವಾದುದಕ್ಕಿಂತ ಕಡಿಮೆಯಿಲ್ಲ. ಏರಿಳಿತಗಳನ್ನು ಕಂಡಿದ್ದೇನೆ ಆದರೆ, ಸ್ಥಿರ ಪ್ರದರ್ಶನದ ಮೂಲಕ ಇದನ್ನು ಮೆಟ್ಟಿ ನಿಂತಿದ್ದೇನೆ. ನಿಮ್ಮ ಅಚಲ ಬೆಂಬಲ ನಮಗಿತ್ತು. ಆರ್ಸಿಬಿ ಫ್ರಾಂಚೈಸಿಗಿಂತ ಮಿಗಲಾದದ್ದು. ಇದೊಂದು ಭಾವನೆ, ಹೃದಯ ಬಡಿತ ಹಾಗೂ ತವರಿನ ರೀತಿ ಭಾಸವಾಗಿದೆ,” ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
Hello my RCB family. Thank you for all the love and blessing joh apne mujhe diya.
— Mohammed Siraj (@mdsirajofficial) November 26, 2024
Will miss you all. pic.twitter.com/gv0YhA5OvJ
ಆರ್ಸಿಬಿಗೆ ಅಭಿಮಾನಿಗಳೇ ಆತ್ಮ
“ಪಂದ್ಯಗಳ ಸೋಲುಗಳನ್ನು ಪದಗಳಲ್ಲಿ ವಿವರಿಸುವುದಕ್ಕಿಂತಲೂ ಆಳವಾಗಿ ನೋವುಂಟುಮಾಡುವ ರಾತ್ರಿಗಳು ಇದ್ದವು, ಆದರೆ ಇದು ಸ್ಟ್ಯಾಂಡ್ಗಳಲ್ಲಿ ನಿಮ್ಮ ಧ್ವನಿ, ಸೋಶಿಯಲ್ ಮೀಡಿಯಾದಲ್ಲಿನ ನಿಮ್ಮ ಸಂದೇಶಗಳು, ನಿಮ್ಮ ನಿರಂತರ ನಂಬಿಕೆ ನನ್ನನ್ನು ಮುಂದುವರಿಸಿದೆ. ಆರ್ಸಿಬಿಯ ಅಭಿಮಾನಿಗಳಾದ ನೀವು ಈ ತಂಡದ ಆತ್ಮ. ನೀವು ತರುವ ಶಕ್ತಿ, ನೀವು ನೀಡುವ ಪ್ರೀತಿ, ನೀವು ತೋರಿಸುವ ನಂಬಿಕೆ, ಯಾವುದಕ್ಕೂ ಸರಿ ಸಾಟಿಯಿಲ್ಲ. ಪ್ರತಿ ಬಾರಿ ನಾನು ಮೈದಾನಕ್ಕೆ ಕಾಲಿಟ್ಟಾಗ, ನಿಮ್ಮ ಕನಸುಗಳು ಮತ್ತು ಭರವಸೆಗಳ ಭಾರವನ್ನು ನಾನು ಅನುಭವಿಸಿದ್ದೇನೆ ಮತ್ತು ನಾನು ನನ್ನ ಕಡೆಯಿಂದ ಸಾಧ್ಯವಾದಷ್ಟು ಎಲ್ಲವನ್ನೂ ನೀಡಿದ್ದೇನೆ. ಏಕೆಂದರೆ ನೀವು ನನ್ನ ಹಿಂದೆಯೇ ಇದ್ದೀರಿ ಎಂದು ನನಗೆ ತಿಳಿದಿತ್ತು, ಉತ್ತಮ ಪ್ರದರ್ಶನ ತೋರುವ ಕಡೆಗೆ ನೀವು ನನ್ನನ್ನು ತಳ್ಳಿದ್ದೀರಿ,” ಎಂದು ಸಿರಾಜ್ ಭಾವುಕರಾಗಿದ್ದಾರೆ.
ನಿಮ್ಮಂತಹ ಅಭಿಮಾನಿ ಬಳಗ ಜಗತ್ತಿನಲ್ಲಿಯೇ ಇಲ್ಲ
“ನಾವು ಸೋತಾದ ಅಥವಾ ಹಿನ್ನಡೆ ಅನುಭವಿಸಿದಾಗ ನಿಮ್ಮ ಕಣ್ಣೀರನ್ನು ನಾನು ನೋಡಿದ್ದೇನೆ ಮತ್ತು ನಾವು ಉತ್ತಮ ಪ್ರದರ್ಶನ ತೋರಿ ಗೆದ್ದಾಗ ನಿಮ್ಮ ಸಂಭ್ರಮಾಚರಣೆಗೆ ನಾನು ಸಾಕ್ಷಿಯಾಗಿದ್ದೇನೆ. ನಿಮ್ಮಂತಹ ಅಭಿಮಾನಿ ಬಳಗ ಜಗತ್ತಿನಲ್ಲಿಯೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. ನಿಮ್ಮ ಪ್ರೀತಿ, ನಿಮ್ಮ ಸಮರ್ಪಣೆ, ನಿಮ್ಮ ನಿಷ್ಠೆ-ಇದು ನನ್ನ ಜೀವನದುದ್ದಕ್ಕೂ ಪಾಲಿಸುತ್ತೇನೆ,” ಎಂದು ಆರ್ಸಿಬಿ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.
“ನಾನು ಈಗ ನನ್ನ ವೃತ್ತಿಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟರೂ, ಆರ್ಸಿಬಿ ಯಾವಾಗಲೂ ನನ್ನ ಹೃದಯದ ತುಣುಕನ್ನು ಹೊಂದಿರುತ್ತದೆ. ಇದು ವಿದಾಯ ಅಲ್ಲ-ಇದು ಧನ್ಯವಾದ. ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ, ನನ್ನನ್ನು ಅಪ್ಪಿಕೊಂಡಿದ್ದಕ್ಕಾಗಿ ಧನ್ಯವಾದ. ಕೇವಲ ಕ್ರಿಕೆಟ್ಗಿಂತ ದೊಡ್ಡದಾದ ಯಾವುದೋ ಒಂದು ಭಾಗದಂತೆ ಅನಿಸುತ್ತದೆ,” ಎಂದು ಮೊಹಮ್ಮದ್ ಸಿರಾಜ್ ಬರೆದುಕೊಂಡಿದ್ದಾರೆ.