Monday, 25th November 2024

IPL 2025 Auction: ಆರ್‌ಸಿಬಿ ಸೇರಿದ ಟಿಮ್‌ ಡೇವಿಡ್‌, ರೊಮಾರಿಯೊ ಶೆಫರ್ಡ್‌!

Tim David and Romario shepherd sold to Royal Challengers Bengaluru

ನವದೆಹಲಿ: ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಲ್‌ರೌಂಡರ್‌ ಟಿಮ್‌ ಡೇವಿಡ್‌ ಹಾಗೂ ವೆಸ್ಟ್‌ ಇಂಡೀಸ್‌ ತಂಡದ ಆಲ್‌ರೌಂಡರ್‌ ರೊಮಾರಿಯೊ ಶೆಫರ್ಡ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸೋಮವಾರ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025 Auction) ಟೂರ್ನಿಯ ಮೆಗಾ ಹರಾಜಿನಲ್ಲಿ ಟಿಮ್‌ ಡೇವಿಡ್‌ ಅವರನ್ನು 3 ಕೋಟಿ ರೂ. ಗಳಿಗೆ ಹಾಗೂ ರೊಮಾರಿಯೊ ಶೆಫರ್ಡ್‌ ಅವರನ್ನು 1.5 ಕೋಟಿ ರೂ. ಗಳಿಗೆ ಬೆಂಗಳೂರು ಫ್ರಾಂಚೈಸಿ ಖರೀದಿಸಿದೆ.

ಹರಾಜಿನಲ್ಲಿ ಟಿಮ್‌ ಡೇವಿಡ್‌ ಅವರ ಹೆಸರು ಮೂಲಬೆಲೆ ಎರಡು ಕೋಟಿಗಳಿಂದ ಬಿಡ್‌ ಆರಂಭವಾಗುತ್ತಿದ್ದಂತೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಆಸಕ್ತಿ ತೋರಿತ್ತು. ನಂತರ ಬಿಡ್‌ಗೆ ಇಳಿದ ಆರ್‌ಸಿಬಿ ಎದುರಾಳಿ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಸವಾಲು ಹಾಕಿತು. ಅಂತಿಮವಾಗಿ ಆಸೀಸ್‌ ಆಲ್‌ರೌಂಡರ್‌ ಅನ್ನು ಖರೀದಿಸುವನ್ನು ಬೆಂಗಳೂರು ಫ್ರಾಂಚೈಸಿ ಯಶಸ್ವಿಯಾಯಿತು. ಅಂದ ಹಾಗೆ ಟಿಮ್‌ ಡೇವಿಡ್‌ ಅವರು 2021ರ ಆವೃತ್ತಿಯಲ್ಲಿ ಆರ್‌ಸಿಬಿ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ನಂತರ ಅವರು ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾಗಿದ್ದರು.

IPL 2025 Mega Auction: ಆರ್‌ಸಿಬಿ ಸೇರಿದ ಲಿವಿಂಗ್‌ಸ್ಟೋನ್‌, ಗುಜರಾತ್‌ಗೆ ಸಿರಾಜ್‌!

‌ಸಿಂಗಾಪುರ ಮೂಲದ ಆಸ್ಟ್ರೇಲಿಯಾ ಆಲ್‌ರೌಂಡರ್‌ ವಿಶ್ವದಾದ್ಯಂತ ಎಲ್ಲಾ ಫ್ರಾಂಚೈಸಿ ಲೀಗ್‌ಗಳನ್ನು ಆಡುತ್ತಿದ್ದಾರೆ. ಅವರು ಚುಟಕು ಕ್ರಿಕೆಟ್‌ನಲ್ಲಿ 254 ಪಂದ್ಯಗಳನ್ನು ಆಡಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ 159.79ರ ಸ್ಟ್ರೈಕ್‌ ರೇಟ್‌ನಲ್ಲಿ 4872 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಆಸೀಸ್‌ ಆಲ್‌ರೌಂಡರ್‌ 170 ರ ಸ್ಟ್ರೈಕ್‌ರೇಟ್‌ನಲ್ಲಿ 659 ರನ್‌ಗಳನ್ನು ಹೊಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಟಿಮ್‌ ಡೇವಿಡ್‌ 161.20ರ ಸ್ಟ್ರೈಕ್‌ ರೇಟ್‌ನಲ್ಲಿ 1201 ರನ್‌ಗಳನ್ನು ಕಲೆ ಹಾಕಿದ್ದಾರೆ.

ಆರ್‌ಸಿಬಿಗೆ ಮರಳಿದ ರೊಮಾರಿಯೊ ಶಫರ್ಡ್‌

ಟಿಮ್‌ ಡೇವಿಡ್‌ ಬೆನ್ನಲ್ಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವೆಸ್ಟ್‌ ಇಂಡೀಸ್‌ ದೈತ್ಯ ಆಲ್‌ರೌಂಡರ್‌ ರೊಮಾರಿಯೊ ಶಫರ್ಡ್‌ ಬಂದಿದ್ದಾರೆ. ವೆಸ್ಟ್‌ ಇಂಡೀಸ್‌ ಹಾಗೂ ಅಲ್ಲಿನ ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ರೊಮಾಯೊ ಶಫರ್ಡ್‌ ಅವರು ಐಪಿಎಲ್‌ ಆಕ್ಷನ್‌ನಲ್ಲಿ ಗಮನ ಸೆಳೆದರು. ಅಂತಿಮವಾಗಿ ಬೆಂಗಳೂರು ಫ್ರಾಂಚೈಸಿ 1.5 ಕೋಟಿ ರೂ. ಗಳಿಗೆ ಖರೀದಿಸಿದೆ.

ಆರ್‌ಸಿಬಿ ಕದ ತಟ್ಟಿದ ನುವಾನ್‌ ತುಷಾರ

ಶ್ರೀಲಂಕಾ ತಂಡದ ತುಷಾರ ನುವಾನ್‌ ಅವರನ್ನು ಬೆಂಗಳೂರು ಫ್ರಾಂಚೈಸಿ 1.60 ಕೋಟಿ ರೂ. ಗಳಿಗೆ ಖರೀದಿಸಿದೆ. ಶ್ರೀಲಂಕಾ ಟಿ20 ತಂಡದಲ್ಲಿ ಫಾಸ್ಟ್‌ ಬೌಲರ್‌ ಆಗಿರುವ ಅವರು 7 ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪರ ಆಡಿದ್ದ ಸ್ವಪ್ನಿಲ್‌ ಸಿಂಗ್‌ ಅವರನ್ನು ಆರ್‌ಸಿಬಿ 50 ಲಕ್ಷ ರೂ. ಗಳಿಗೆ ಆರ್‌ಟಿಎಂ ಮೂಲಕ ಉಳಿಸಿಕೊಂಡಿದೆ. ಇನ್ನು ಕಳೆದ ಕೆಲ ಆವೃತ್ತಿಗಳಿಂದ ಆರ್‌ಸಿಬಿಯಲ್ಲಿ ಬೆಂಚ್‌ ಕಾದಿದ್ದ ಮನೋಜ್‌ ಬಾಂಡಗೆ ಅವರನ್ನು ಮೂಲ ಬೆಲೆ 30 ಲಕ್ಷ ರೂ. ಗಳಿಗೆ ಬೆಂಗಳೂರು ಫಾಂಚೈಸಿ ಮರಳಿ ಕರೆಸಿಕೊಂಡಿದೆ.