Monday, 25th November 2024

IPL 2025 Auction: ಕೇವಲ 13 ವರ್ಷದ ಹುಡುಗ ಕೋಟ್ಯಧಿಪತಿ! ಆರ್‌ಆರ್‌ ಸೇರಿದ ವೈಭವ್‌ ಸೂರ್ಯವಂಶಿ ಯಾರು?

IPL 2025 Auction: Who is Vaibhav Suryavanshi: 13-year-old cricketer lands Rs 1.1 crore deal in IPL

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025 Auction) ಟೂರ್ನಿಯ ಮೆಗಾ ಹರಾಜಿನಲ್ಲಿ 13ರ ವಯಸ್ಸಿನ ವೈಭವ್‌ ಸೂರ್ಯವಂಶಿ ದಾಖಲೆ ಬರೆದಿದ್ದಾರೆ. ಸೋಮವಾರ ನಡೆದಿದ್ದ ಮೆಗಾ ಹರಾಜಿನಲ್ಲಿ ವೈಭವ್‌ ಸೂರ್ಯವಂಶಿ ಅವರನ್ನು ರಾಜಸ್ಥಾನ್‌ ರಾಯಲ್ಸ್‌ ತಂಡ 1.10 ಕೋಟಿ ರೂ.ಗಳಿಗೆ ಖರೀದಿಸಿದೆ. ಆ ಮೂಲಕ ಐಪಿಎಲ್‌ಗೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ವೈಭವ್‌ ಸೂರ್ಯವಂಶಿ ಬರೆದಿದ್ದಾರೆ.

ಮೆಗಾ ಹರಾಜಿನಲ್ಲಿ ಬಿಹಾರ ಮೂಲದ ಬ್ಯಾಟ್ಸ್‌ಮನ್‌ ಅನ್ನು ಖರೀದಿಸಲು ರಾಜಸ್ಥಾನ್‌ ರಾಯಲ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ, ಅಂತಿಮವಾಗಿ ಐಪಿಎಲ್‌ ಇತಿಹಾಸದ ಕಿರಿಯ ಆಟಗಾರನನ್ನು ಖರೀದಿಸುವಲ್ಲಿ ರಾಜಸ್ಥಾನ್‌ ರಾಯಲ್ಸ್‌ ಫ್ರಾಂಚೈಸಿ ಯಶಸ್ವಿಯಾಯಿತು.

IPL 2025 Auction: ಆರ್‌ಸಿಬಿ ಸೇರಿದ ಟಿಮ್‌ ಡೇವಿಡ್‌, ರೊಮಾರಿಯೊ ಶೆಫರ್ಡ್‌!

ವೈಭವ್‌ ಸೂರ್ಯವಂಶಿ ಯಾರು?

2011ರಲ್ಲಿ ಜನಿಸಿರುವ ವೈಭವ್‌ ಸೂರ್ಯವಂಶಿ ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ಕ್ರಿಕೆಟ್‌ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದ. ಇವರ ತಂದೆ ಸಂಜೀವ್‌, ತನ್ನ ಮಗನ ಕ್ರಿಕೆಟ್‌ ಆಸಕ್ತಿಯನ್ನು ತಿಳಿದು ಮನೆಯಂಗಳದಲ್ಲಿಯೇ ಕ್ರಿಕೆಟ್‌ ಅಭ್ಯಾಸವನ್ನು ಮಾಡಿಸಿದ್ದರು. ನಂತರ 9ನೇ ವಯಸ್ಸಿನಲ್ಲಿಯೇ ವೈಭವ್‌ ಸೂರ್ಯವಂಶಿಯನ್ನು ಅವರ ತಂದೆ ಸಮಸ್ತಿಪುರ್‌ ಸಮೀಪ ಕ್ರಿಕೆಟ್‌ ಅಕಾಡೆಮಿಗೆ ಸೇರಿಸಿದ್ದರು. ಈ ಅಕಾಡೆಮಿಯಲ್ಲಿ ಕ್ರಿಕೆಟ್‌ ಆಡುತ್ತಾ ಬೆಳೆದಿದ್ದ ವೈಭವ್‌ ಸೂರ್ಯವಂಶಿ, ತನ್ನ 12ನೇ ವಯಸ್ಸಿನಲ್ಲಿ ಬಿಹಾರ ತಂಡದ ಪರ ವಿನೋ ಮಂಕಡ್‌ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು. ಇಲ್ಲಿ ಆಡಿದ್ದ ಕೇವಲ ಐದು ಪಂದ್ಯಗಳಿಂದ ಅವರು 400 ರನ್‌ಗಳನ್ನು ಸಿಡಿಸಿದ್ದರು.

ನಂತರ ತಮ್ಮ 12ನೇ ವಯಸ್ಸಿನಲ್ಲಿಯೇ ವೈಭವ್‌ ಬಿಹಾರ ಹಿರಿಯರ ತಂಡದ ಪರ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಲ್ಲದೆ ಇತ್ತೀಚೆಗೆ ಅಂಡರ್‌19 ಭಾರತ ತಂಡದ ಪರ ಆಡಿದ್ದ ವೈಭವ್‌, ಚೆನ್ನೈನಲ್ಲಿ ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ದ ನಾಲ್ಕು ದಿನಗಳ ಪಂದ್ಯದಲ್ಲಿ ಕೇವಲ 58 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು.

ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ

ಪ್ರಸಕ್ತ ವರ್ಷದ ಆರಂಭದಲ್ಲಿ ವೈಭವ್‌ ಸೂರ್ಯವಂಶಿ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಅವರು ಕಳೆದ ಜನವರಿ ತಿಂಗಳಲ್ಲಿ ಪಾಟ್ನಾದಲ್ಲಿ ಮುಂಬೈ ವಿರುದ್ದ ಟೂರ್ನಿಯ ಎಲೈಟ್‌ ಗ್ರೂಪ್‌ ಬಿನಲ್ಲಿ ತನ್ನ ಮೊದಲನೇ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. ಆ ಮೂಲಕ 1986ರ ಬಳಿಕ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಈ ವೇಳೆ ಅವರಿಗೆ 12 ವರ್ಷ 284 ದಿನಗಳಾಗಿದ್ದವು.

ವೈಭವ್‌ ಸೂರ್ಯವಂಶಿ ಪ್ರತಿಕ್ರಿಯೆ

ರಾಜಸ್ಥಾನ್‌ ರಾಯಲ್ಸ್‌ಗೆ ಸೇರಿದ ಬಳಿಕ ಮಾತನಾಡಿದ ವೈಭವ್‌ ಸೂರ್ಯವಂಶಿ, “ರಾಜಸ್ಥಾನ್‌ ರಾಯಲ್ಸ್‌ ಕ್ಯಾಂಪ್‌ನಲ್ಲಿ ಎರಡೂವರೆ ವರ್ಷಗಳ ಅವಧಿ ಆಡಿದ ಬಳಿಕ ನನಗೆ ವಿಜಯ್‌ ಮರ್ಚೆಂಟ್‌ ಟ್ರೋಫಿ ಟೂರ್ನಿಯಲ್ಲಿ ಆಡಲು ಅವಕಾಶ ಸಿಕ್ಕಿತ್ತು. ಆದರೆ, ನನ್ನ ವಯಸ್ಸು ಕಡಿಮೆ ಇದ್ದ ಕಾರಣ ಸ್ಟ್ಯಾಂಡ್‌ ವೈ ಆಗಿದ್ದೆ. ಮಾಜಿ ರಣಜಿ ಆಟಗಾರ ಮನೀಷ್‌ ಓಜಾ ಅವರಿಂದ ತರಬೇತಿ ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ. ನಾನು ಇಂದು ಏನೇ ಮಾಡಿದ್ದರೂ ಇದರ ಶ್ರೇಯ ಮನೀಷ್‌ ಸರ್‌ಗೆ ಸಲ್ಲಬೇಕು,” ಎಂದು ತಿಳಿಸಿದ್ದಾರೆ.