Sunday, 29th September 2024

IPL 2025: ಧೋನಿ ಅಭಿಮಾನಿಗಳಿಗೆ ಬೇಸರ ತರಿಸಿದ ಅನ್‌ಕ್ಯಾಪ್ಡ್ ನಿಯಮ

MS Dhoni

ಮುಂಬಯಿ: 18ನೇ ಆವೃತ್ತಿಯ ಐಪಿಎಲ್‌(IPL 2025) ಆಟಗಾರರ ಹರಾಜು ವಿಷಯಕ್ಕೆ ಸಂಬಂಧಿಸಿದ ಎಲ್ಲ ಗೊಂದಲವನ್ನು ಬಿಸಿಸಿಐ ಶನಿವಾರ ಇತ್ಯರ್ಥಗೊಳಿಸಿತ್ತು. ಫ್ರಾಂಚೈಸಿಗಳ ಆಗ್ರಹದಂತೆ ಬಿಸಿಸಿಐ (BCCI) 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ. ಜತೆಗೆ ಕಳೆದ ಐದು ವರ್ಷಗಳಿಂದ ಬಿಸಿಸಿಐ ಒಪ್ಪಂದವನ್ನು ಹೊಂದಿರದ ಭಾರತೀಯ ಆಟಗಾರರಿಗೆ ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಲು ಅವಕಾಶ ನೀಡಲಾಗಿದೆ. ಹೀಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಎಂ.ಎಸ್ ಧೋನಿಯವರನ್ನು(MS Dhoni) ಅನ್‌ ಕ್ಯಾಪ್ಡ್‌ ಕೋಟಾದಲ್ಲಿ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶವಿದೆ. ಆದರೆ ಈ ನಿಯಮ ಇದೀಗ ಧೋನಿ ಅಭಿಮಾನಿಗಳಿಗೆ(MS Dhoni Fans Unhappy) ಬೇಸರ ತರಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ 5 ವರ್ಷ ಕಳೆದಿದ್ದರೆ ಅಂಥ ಆಟಗಾರರನ್ನು ಅನ್‌ಕ್ಯಾಪ್ಡ್‌ ಆಟಗಾರ ಎಂದು ಪರಿಗಣಿಸುವ ನಿಯಮವನ್ನು ಬಿಸಿಸಿಐ 2008ರಲ್ಲಿ ಪರಿಚಯಿಸಿತ್ತು. ಆದರೆ, ಈ ಅವಕಾಶವನ್ನು ಈ ವರೆಗೂ ಯಾವ ತಂಡವೂ ಬಳಕೆ ಮಾಡಿಕೊಂಡಿಲ್ಲ. 2021ರಲ್ಲಿ ಈ ನಿಯಮವನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಈ ನಿಯಮವನ್ನು ಜಾರಿಗೆ ತಂದಿದೆ. ಕೆಲವರು ಧೋನಿ ಐಪಿಎಲ್‌ ಆಡಲೆಂದೇ ಈ ನಿಯಮ ಜಾರಿ ಮಾಡಲಾಗಿದೆ ಎಂದು ಹೇಳಲಾರಂಭಿಸಿದ್ದಾರೆ. ಆದರೆ ಧೋನಿ ಅಭಿಮಾನಿಗಳು ಮಾತ್ರ ಈ ನಿಯದಿಂದ ಬೇಸರಗೊಂಡಿದ್ದಾರೆ. ದಿಗ್ಗಜ ಆಟಗಾರನನ್ನು ಅನ್‌ಕ್ಯಾಪ್ಡ್‌ ಆಟಗಾರನಾಗಿ ನೋಡುವುದು ಇಷ್ಟವಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಇದು ಧೋನಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಬೇಸರ ಹೊರಹಾಕಿದ್ದಾರೆ.

2022ರ ಮೆಗಾ ಹರಾಜಿಗೂ ಮುನ್ನ ಧೋನಿಯನ್ನು 12 ಕೋಟಿ ಕೊಟ್ಟು ಸಿಎಸ್‌ಕೆ ತಂಡದಲ್ಲಿ ಉಳಿಸಿಕೊಂಡಿತ್ತು. 2020ರಲ್ಲಿ ನಿವೃತ್ತಿ ಪ್ರಕಟಿಸಿದ್ದ ಧೋನಿಯನ್ನು ಈಗ ಸಿಎಸ್‌ಕೆ 4 ಕೋಟಿಗೆ ಅನ್‌ಕ್ಯಾಪ್ಡ್‌ ಆಟಗಾರ ವಿಭಾಗದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಆದರೆ ಇದು ಅವರ ಅಭಿಮಾನಿಗಳಿಗೆ ಇಷ್ಟವಿಲ್ಲ.

ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಇದನ್ನೂ ಓದಿ IPL 2025 : ಹರಾಜಿನಲ್ಲಿ ಪಾಲ್ಗೊಂಡು ಆಟಕ್ಕೆ ಬರದಿದ್ದರೆ ಬ್ಯಾನ್‌; ಐಪಿಎಲ್‌ನಲ್ಲಿ ಹೊಸ ರೂಲ್ಸ್‌

ಈ ಬಾರಿ ಆಟಗಾರರಿಗೆ ಜಾಕ್‌ಪಾಟ್‌

ಈ ಬಾರಿಯ ಐಪಿಎಲ್‌ ಆಡುವ ಹೆಚ್ಚುವರಿ ವೇತನ ಸಿಗಲಿದೆ. ತಾವು ಆಡುವ ಪ್ರತಿ ಪಂದ್ಯಕ್ಕೆ 7.5 ಲಕ್ಷ ಪಡೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಘೋಷಿಸಿದ್ದಾರೆ. ಆಟಗಾರರು ಹರಾಜಾಗುವ ಮೊತ್ತವನ್ನು ಹೊರತುಪಡಿಸಿ ಈ ಹೆಚ್ಚಿವರಿ ಹಣ ಸಿಗಲಿದೆ. ಒಬ್ಬ ಆಟಗಾರ ಆವೃತ್ತಿಯ ಎಲ್ಲ 14 ಲೀಗ್‌ ಪಂದ್ಯಗಳನ್ನು ಆಡಿದರೆ ಆತನಿಗೆ ಒಟ್ಟು 1.05 ಕೋಟಿ ಹೆಚ್ಚುವರಿ ವೇತನ ಸಿಗಲಿದೆ. ಕಡಿಮೆ ಮೊತ್ತಕ್ಕೆ ಹರಾಜಾಗಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ಈ ನಿಯಮದಿಂದ ಹೆಚ್ಚಿನ ಅನುಕೂಲ ಸಿಗಲಿದೆ.