ಹೊಸದಿಲ್ಲಿ: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೆಗಾ ಹರಾಜಿನ ನಿಮಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ಬಹುತೇಕ ಆಟಗಾರರನ್ನು ರಿಲೀಸ್ ಮಾಡಿದೆ. ಅದರಂತೆ ಬೆಂಗಳೂರು ಫ್ರಾಂಚೈಸಿ ತನ್ನನ್ನು ಬಿಡುಗಡೆ ಮಾಡಿದ ಬಗ್ಗೆ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರತಿಕ್ರಿಯೆ ನೀಡಿದ್ದಾರೆ.
ಆಸೀಸ್ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು 2021ರ ಐಪಿಎಲ್ ಟೂರ್ನಿಯಿಂದಲೂ ಆರ್‌ಸಿಬಿ ತಂಡದ ಪರ ಆಡುತ್ತಿದ್ದಾರೆ. ಆದರೆ, ಅವರನ್ನು ಈ ಬಾರಿ ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ಬೆಂಗಳೂರು ಫ್ರಾಂಚೈಸಿ ನಿರಾಕರಿಸಿದೆ. ಕೇವಲ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಹಾಗೂ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ. ಈ ಬಗ್ಗೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಪಾಡ್‌ಕಾಸ್ಟ್‌ವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
“ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್‌ನಿಂದ ನನಗೆ ಕರೆ ಬಂದಿತ್ತು. ಕೋಚ್ ಆಂಡಿ ಫ್ಲವರ್ ಅವರು ಝೂಮ್ ವಿಡಿಯೋ ಕರೆಯಲ್ಲಿ ನನ್ನನ್ನು ಬಿಡುಗಡೆ ಮಾಡಿದ ಬಗ್ಗೆ ವಿವರವಾಗಿ ಹೇಳಿದ್ದರು. ಆರ್‌ಸಿಬಿಯಿಂದ ಅದ್ಭುತವಾಗಿ ಹೊರಗಡೆ ಬಂದಿದ್ದೇನೆ. ಅರ್ಧಗಂಟೆ ಕಾಲ ನಾವು ಚರ್ಚೆಯನ್ನು ನಡೆಸಿದ್ದೆವು. ತಂಡದ ರಣತಂತ್ರ ಹಾಗೂ ಭವಿಷ್ಯದ ಸಂಗತಿಗಳ ಬಗ್ಗೆ ಚರ್ಚೆಯನ್ನು ನಡೆಸಿದ್ದೆವು. ಇದರ ಬಗ್ಗೆ ನನಗೆ ತುಂಬಾ ಖಷಿ ಇದೆ,” ಎಂದು ದಿ ವಿಕೆಟ್ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.
“ಇದೇ ವಿಧಾನವನ್ನು ಎಲ್ಲಾ ತಂಡಗಳು ಅಳವಡಿಸಿಕೊಂಡರೆ ಸಂಗತಿಗಳು ತುಂಬಾ ಆರೋಗ್ಯಕರವಾಗಿರಲಿದೆ. ಆರ್‌ಸಿಬಿ ತಂಡದಲ್ಲಿ ಈಗಿನ ಸನ್ನಿವೇಶವನ್ನು ನಾನು ಆಳವಾಗಿ ಹೇಳಲು ಬಯಸುವುದಿಲ್ಲ. ಫ್ರಾಂಚೈಸಿಯಲ್ಲಿ ಸಹಾಯಕ ಸಿಬ್ಬಂದಿಯನ್ನು ಬದಲಿಸಲು ಮುಂದಾಗಿದ್ದಾರೆ. ಇದಾದ ಬಳಿಕ ಅವರು ಆಟಗಾರರ ಜೊತೆ ಮಾತನಾಡಬಹುದು,” ಎಂದು ಹೇಳಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್.
“ಆರ್‌ಸಿಬಿ ತಂಡದಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ನನಗೆ ಅರ್ಥವಾಗಿದೆ. ತಂಡದಲ್ಲಿ ಉಳಿಸಿಕೊಳ್ಳುವ ಬದಲು ಕೊನೆಯ ದಿನಾಂಕದಂದು ತಂಡದಿಂದ ನಿಮ್ಮನ್ನು ಕೈ ಬಿಟ್ಟಿರಬಹುದು. ಆದರೆ, ಇಲ್ಲಿನ ಪ್ರಕ್ರಿಯೆಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿವೆ. ಬಲಿಷ್ಠ ತಂಡವನ್ನು ಕಟ್ಟಲು ಆರ್‌ಸಿಬಿಗೆ ಮೂವರು ಸ್ಥಳೀಯ ಆಟಗಾರರ ಅಗತ್ಯವಿತ್ತು ಹಾಗೂ ಇದಕ್ಕೆ ವಿದೇಶಿ ಆಟಗಾರರು ತನ್ನ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ. ಆರ್‌ಸಿಬಿ ಜೆರ್ಸಿಯನ್ನು ತೊರೆದಿದ್ದೇನೆಂದು ನನಗೆ ಇನ್ನೂ ಅನಿಸುತ್ತಿಲ್ಲ. ಆದರೆ, ಆರ್‌ಸಿಬಿಗೆ ಮತ್ತೆ ಮರಳುತ್ತೇನೆಂಬ ವಿಶ್ವಾಸ ನನಗಿದೆ. ಐಪಿಎಲ್ ಟೂರ್ನಿಯಲ್ಲಿ ಆಡಲು ಇದು ಅದ್ಭುತ ಫ್ರಾಂಚೈಸಿಯಾಗಿದೆ. ಇಲ್ಲಿನ ಪಯಣವನ್ನು ನಾನು ಆನಂದಿಸಿದ್ದೇನೆ,” ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.
2025ರ ಐಪಿಎಲ್ ಮೆಗಾ ಹರಾಜು ಯಾವಾಗ?
ಬಹುನಿರೀಕ್ಷಿತ 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಯು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಎಲ್ಲಾ 10 ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ ಯಾವೆಲ್ಲಾ ಆಟಗಾರರನ್ನು ಖರೀದಿಸಬೇಕೆಂಬ ಬಗ್ಗೆ ರಣ ತಂತ್ರವನ್ನು ರೂಪಿಸುತ್ತಿದೆ.
ಈ ಸುದ್ದಿಯನ್ನು ಓದಿ: IPL 2025 : ಕೆ. ಎಲ್ ರಾಹುಲ್ ಸೇರಿದಂತೆ ಐಪಿಎಲ್ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಇಲ್ಲಿದೆ