Thursday, 26th December 2024

IPL 2025: ಗುಜರಾತ್‌ ಟೈಟಾನ್ಸ್‌ಗೆ ವಡೋದರ 2ನೇ ತವರು ಅಂಗಳ

ಅಹಮದಾಬಾದ್‌: ವಡೋದರದಲ್ಲಿ ಹೊಸದಾಗಿ ನಿರ್ಮಿಸಲಾದ ಕೊಟಂಬಿ ಮೈದಾನವು ಮುಂದಿನ ಐಪಿಎಲ್‌(IPL 2025) ಋತುವಿನಲ್ಲಿ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌(Gujarat Titans) ತಂಡಕ್ಕೆ ದ್ವಿತೀಯ ತವರು ಮೈದಾನವಾಗುವ ಸಾಧ್ಯತೆ ಇದೆ. ಮೊಟೆರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್‌ ತಂಡ ಮೊದಲೆರಡು ಪಂದ್ಯಗಳನ್ನು ಆಡದಿರುವ ಸಾಧ್ಯತೆಯಿದೆ. ಬದಲಾಗಿ, ಈ ಪಂದ್ಯಗಳನ್ನು ವಡೋದರದಲ್ಲಿ ಆಡಲು ಫ್ರಾಂಚೈಸಿ ಯೋಜನೆ ರೂಪಿಸಿಕೊಂಡಿದೆ ಎಂದು ವರದಿಯಾಗಿದೆ.

ಮಹಿಳಾ ಪ್ರೀಮಿಯರ್ ಲೀಗ್ (WPL) ನ ಮೂರನೇ ಆವೃತ್ತಿಯ ವೇಳಾಪಟ್ಟಿಯಿಂದಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಲಕ್ನೋ (ಎಕಾನಾ) ಮತ್ತು ಅಹಮದಾಬಾದ್ (ಮೊಟೆರಾ) ನಲ್ಲಿ WPL ಟೂರ್ನಿಯನ್ನು ಎರಡು ಹಂತಗಳಲ್ಲಿ ಆಯೋಜಿಸಲಾಗಿದೆ ಎಂದು ವರದಿಯಾಗಿದೆ. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಎರಡು ಪಂದ್ಯಗಳನ್ನು ಆಂಧ್ರಪ್ರದೇಶದ ವೈಜಾಗ್‌ನಲ್ಲಿ ಆಡಿತ್ತು.

ಬರೋಡಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಎಂದೂ ಕರೆಯಲ್ಪಡುವ ಕೊಟಂಬಿ ಕ್ರೀಡಾಂಗಣವು ಸುಮಾರು 40,000 ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಮೈದಾನವು ಈಗಾಗಲೇ ಕೆಲವು ದೇಶೀಯ ಪಂದ್ಯಗಳನ್ನು ಆಯೋಜಿಸಿದೆ, ಇತ್ತೀಚಿನವುಗಳು ರಣಜಿ ಟ್ರೋಫಿ 2024-25 ರ ಸಮಯದಲ್ಲಿ ಬರೋಡಾ ತಂಡ ತನ್ನ ತವರು ಪಂದ್ಯಗಳನ್ನು ಆಡಿತ್ತು.

ಇದನ್ನೂ ಓದಿ IPL 2025: ಬೆಂಗಳೂರಿನಲ್ಲೇ ಆರ್‌ಸಿಬಿ ಕಾಲೆಳೆದ ಚೆನ್ನೈ ನಾಯಕ ಗಾಯಕ್ವಾಡ್‌; ವಿಡಿಯೊ ವೈರಲ್‌

ಕೋಲ್ಕತಾ ನೈಟ್‌ರೈಡರ್ಸ್‌ ಕೂಡ ಮುಂದಿನ ಆವೃತ್ತಿಯಲ್ಲಿ ತ್ರಿಪುರಾದ ಅಗರ್ತಲಾದಲ್ಲಿ ನಿರ್ಮಾಣ ಹಂತದಲ್ಲಿರುವ ನರಸಿಂಹಗಢ ಕ್ರಿಕೆಟ್‌ ಮೈದಾನವನ್ನು ದ್ವಿತೀಯ ತವರು ಮೈದಾನವನ್ನಾಗಿಸುವ ಸಾಧ್ಯತೆ ಇದೆ. 185 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನರಸಿಂಹಗಢ ಮೈದಾನದ ಕಾಮಗಾರಿ 2017ರಲ್ಲಿ ಆರಂಭವಾಗಿತ್ತು. ಮುಂದಿನ ಫೆಬ್ರವರಿಯಲ್ಲಿ ಪೂರ್ತಿಗೊಳ್ಳಲಿದೆ. ಐಪಿಎಲ್‌ ಮುಖ್ಯಸ್ಥ ಅರುಣ್‌ ಕುಮಾರ್‌ ಧುಮಾಲ್‌ ಇತ್ತೀಚೆಗಷ್ಟೇ ಈ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದರು. ಇದು ಕೆಕೆಆರ್‌ನ ಎರಡನೇ ತವರು ಅಂಗಳವಾಗಲಿದೆ ಎಂದು ಧುಮಾಲ್‌, ಇತರ ರಾಜ್ಯಗಳೂ ಇದರ ಉಪಯೋಗ ಪಡೆಯಬಹುದು ಎಂದಿದ್ದರು.

ಗುಜರಾತ್‌ ತಂಡ

ರಶೀದ್ ಖಾನ್, ಶುಭಮನ್‌ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ಕಗಿಸೊ ರಬಾಡ, ಜೋಸ್ ಬಟ್ಲರ್, ಮೊಹಮ್ಮದ್ ಸಿರಾಜ್, ಪ್ರಸಿಧ್‌ ಕೃಷ್ಣ, ನಿಶಾಂತ್ ಸಿಂಧು, ಮಹಿಪಾಲ್ ಲೊಮ್ರೋರ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಮಾನವ್ ಸುತಾರ್, ವಾಷಿಂಗ್ಟನ್ ಸುಂದರ್, ಜೆರಾಲ್ಡ್‌ ಕೊಯೆಡ್ಜಿ, ಅರ್ಷದ್‌ ಖಾನ್‌, ಗುರ್ನೂರ್ ಬ್ರಾರ್, ಶೆರ್ಫೆನ್ ಋದರ್‌ಫೋರ್ಡ್, ಸಾಯಿ ಕಿಶೋರ್, ಇಶಾಂತ್ ಶರ್ಮಾ, ಜಯಂತ್ ಯಾದವ್, ಗ್ಲೆನ್ ಫಿಲಿಪ್ಸ್, ಕರೀಂ ಜನತ್, ಕುಲ್ವಂತ್ ಖೆಜ್ರೋಲಿಯಾ.