ನವದೆಹಲಿ: ಸೋಮವಾರ ಅಂತ್ಯವಾಗಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ತಮಗೆ ಅಗತ್ಯವಿರುವ ಆಟಗಾರರನ್ನು ಖರೀದಿಸಿವೆ. ಆ ಮೂಲಕ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ಆಟಗಾರರೊಂದಿಗೆ ಕಣಕ್ಕೆ ಇಳಿಯಲು ಎದುರು ನೋಡುತ್ತಿವೆ.
ನವೆಂಬರ್ 24 ಮತ್ತು 25 ರಂದು ನಡೆದಿದ್ದ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಒಟ್ಟು 639.15 ಕೋಟಿ ರೂ ಗಳಿಗೆ ಒಟ್ಟು 182 ಆಟಗಾರರನ್ನು ಎಲ್ಲಾ ತಂಡಗಳು ಖರೀದಿಸಿವೆ. ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಅವರು ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಲಖನೌ ಸೂಪರ್ ಜಯಂಟ್ಸ್ ತಂಡ 27 ಕೋಟಿ ರೂ ಗಳಿಗೆ ರಿಷಭ್ ಪಂತ್ ಅವರನ್ನು ಖರೀದಿಸಿತ್ತು. ಇನ್ನು ಎರಡನೇ ಅತ್ಯಂತ ಶ್ರೀಮಂತ ಆಟಗಾರ ಎನಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ 26.75 ಕೋಟಿ ರೂ ಗಳಿಗೆ ಖರೀದಿಸಿತ್ತು.
IPL 2025: ಹರಾಜಿನಲ್ಲಿ ಸೋಲ್ಡ್, ಅನ್ಸೋಲ್ಡ್ ಆದ ಕರ್ನಾಟಕದ ಆಟಗಾರರಿವರು
ಇನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ ಎಡಗೈ ಬ್ಯಾಟ್ಸ್ಮನ್ ವೆಂಕಟೇಶ ಅಯ್ಯರ್ ಅವರನ್ನು 23.75 ಕೋಟಿ ರೂ. ಗಳಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಆದರೆ, ಮೆಗಾ ಹರಾಜಿನಲ್ಲಿ ಬಹು ನಿರೀಕ್ಷಿತ ಸ್ಟಾರ್ ಆಟಗಾರರು ಅನ್ಸೋಲ್ಡ್ ಆಗಿದ್ದಾರೆ. ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋವ್, ಕೇನ್ ವಿಲಿಯಮ್ಸನ್, ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಶಾರ್ದುಲ್ ಠಾಕೂರ್, ಉಮೇಶ್ ಯಾದವ್ ಸೇರಿದಂತೆ ಹಲವು ಸ್ಟಾರ್ಗಳನ್ನು ಖರೀದಿಸಲು ಯಾವುದೇ ತಂಡ ಮುಂದೆ ಬರಲಿಲ್ಲ.
2025ರ ಐಪಿಎಲ್ ಟೂರ್ನಿಯಲ್ಲಿ ಅನ್ಸೋಲ್ಡ್ ಆಟಗಾರರು ಹೇಗೆ ಆಡಬಹುದು?
ಅಂದ ಹಾಗೆ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿರುವ ಆಟಗಾರರು ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೇರವಾಗಿ ಆಡಲು ಅವಕಾಶ ಇಲ್ಲ. ಆದರೆ, ಹರಾಜಿನಲ್ಲಿ ಭಾಗವಹಿಸಿ ಅನ್ಸೋಲ್ಡ್ ಆಗಿದ್ದ ಆಟಗಾರರಿಗೆ ಟೂರ್ನಿಯಲ್ಲಿ ಆಡಲು ಎರಡನೇ ಅವಕಾಶ ಸಿಗಲಿದೆ. ಅದೇಗೆಂದರೆ, ಯಾವುದೇ ತಂಡದ ಆಟಗಾರ ಟೂರ್ನಿಯ ವೇಳೆ ಅಥವಾ ಟೂರ್ನಿಗೂ ಮುನ್ನ ಗಾಯಕ್ಕೆ ತುತ್ತಾಗಿದ್ದರೆ, ಅಂಥಾ ಆಟಗಾರನ ಜಾಗದಲ್ಲಿ ಅನ್ಸೋಲ್ಡ್ ಆಟಗಾರರಿಗೆ ಆಡಲು ಎರಡನೇ ಅವಕಾಶ ಕೊಡಬಹುದು. ಆದರೆ, ಅವರ ಹೆಸರು ಮೆಗಾ ಹರಾಜಿನಲ್ಲಿ ನೋಂದಣೆ ಆಗಿರಬೇಕಷ್ಟೆ.
IPL 2025: ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆದ ಟಾಪ್ 5 ಆಟಗಾರರು!
ಅನ್ಸೋಲ್ಡ್ ಆಗಿರುವ ಭಾರತ ಅಥವಾ ವಿದೇಶಿ ಆಟಗಾರರಿಗೂ ಕೂಡ ಟೂರ್ನಿಯಲ್ಲಿ ಆಡಲು ಅವಕಾಶ ಸಿಗಲಿದೆ. ಟೂರ್ನಿಯ ಪಂದ್ಯದ ವೇಳೆ ಯಾವುದಾದರೂ ಆಟಗಾರ ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ವೇಳೆ ಗಾಯಕ್ಕೆ ತುತ್ತಾದರೆ, ಅಂಥಾ ಆಟಗಾರರ ಸ್ಥಾನದಲ್ಲಿ ಬೇರೆ ಆಟಗಾರ ಆಡಬಹುದು. ಆದರೆ, ಗಾಯಾಳು ಆಟಗಾರ ಹರಾಜಿನಲ್ಲಿ ಪಡೆದ ಮೊತ್ತಕ್ಕಿಂತ ಕಡಿಮೆ ಮೂಲ ಬೆಲೆ ಹೊಂದಿರುವ ಆಟಗಾರ ಬದಲಿ ಸ್ಥಾನವನ್ನು ತುಂಬಬಹುದು. ಉದಾಹರಣೆಗೆ ಗಾಯಾಳು ಆಟಗಾರ ಹರಾಜಿನಲ್ಲಿ ಎರಡು ಕೋಟಿ ರೂ. ಗಳಿಗಿಂತ ಜಾಸ್ತಿ ಪಡೆದಿದ್ದರೆ, ಅಂಥಾ ಆಟಗಾರನನ್ನು ಮಾತ್ರ ಎರಡು ಕೋಟಿ ರೂ. ಮೂಲ ಬೆಲೆ ಇರುವ ಡೇವಿಡ್ ವಾರ್ನರ್ ತುಂಬಹುದು.