Tuesday, 26th November 2024

IPL 2025: ಆರ್‌ಸಿಬಿಗೆ ಸೇರಿದ ಬೆನ್ನಲ್ಲೆ 15 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಲಿಯಾಮ್ ಲಿವಿಂಗ್‌ಸ್ಟೋನ್‌!

Liam Livingstone hits 15-ball 50 after Rs 8.75 crore RCB deal in IPL auction

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಆಟಗಾರರ ಮೆಗಾ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರಿದ ಬೆನ್ನಲ್ಲೆ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅಬುದಾಬಿ ಟಿ-10 ಲೀಗ್‌ ಪಂದ್ಯವೊಂದರಲ್ಲಿ ಕೇವಲ 15 ಎಸೆತಗಳಲ್ಲಿಯೇ ಅರ್ಧಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಆರ್‌ಸಿಬಿ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ.

ನವೆಂಬರ್‌ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್‌ ಸ್ಪೋಟಕ ಬ್ಯಾಟ್ಸ್‌ಮನ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು ಬೆಂಗಳೂರು ಫ್ರಾಂಚೈಸಿ 8.75 ಕೋಟಿ ರೂ. ಗಳಿಗೆ ಖರೀದಿಸಿತ್ತು. ಮೆಗಾ ಹರಾಜು ಮುಗಿದ ಕೇವಲ ಒಂದು ದಿನದ ಬೆನ್ನಲ್ಲೆ ಲಿಯಾಮ್‌ ಲಿವಿಂಗ್‌ಸ್ಟೋನ್‌ ಸ್ಪೋಟಕ ಅರ್ಧಶತಕ ಸಿಡಿಸಿರುವುದು ಆರ್‌ಸಿಬಿ ಪಾಲಿಗೆ ಪ್ಲೆಸ್‌ ಪಾಯಿಂಟ್‌ ಆಗಿದೆ.

IPL 2025 Mega Auction: ಆರ್‌ಸಿಬಿ ಸೇರಿದ ಲಿವಿಂಗ್‌ಸ್ಟೋನ್‌, ಗುಜರಾತ್‌ಗೆ ಸಿರಾಜ್‌!

ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರ ಸ್ಪೋಟಕ ಅರ್ಧಶತಕದ ಮೂಲಕ ಬಾಂಗ್ಲಾ ಟೈಗರ್ಸ್‌ ತಂಡ ಏಳು ವಿಕೆಟ್‌ಗಳಿಂದ ಡೆಲ್ಲಿ ಬುಲ್ಸ್‌ ತಂಡವನ್ನು ಮಣಿಸಿತು. ಸ್ಪೋಟಕ ಬ್ಯಾಟ್ಸ್‌ಮನ್‌ ತಮ್ಮ ಇನಿಂಗ್ಸ್‌ನಲ್ಲಿ ಮೂರು ಬೌಂಡರಿಗಳು ಹಾಗೂ ಬರೋಬ್ಬರಿ 5 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇಂಗ್ಲೆಂಡ್‌ ಆಟಗಾರನ ಬ್ಯಾಟಿಂಗ್‌ ಸಹಾಯದಿಂದ ಡೆಲ್ಲಿ ಬುಲ್ಸ್‌ ನೀಡಿದ್ದ 123 ರನ್‌ಗಳನ್ನು ಬಾಂಗ್ಲಾ ಟೈಗರ್ಸ್‌ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಚೇಸ್‌ ಮಾಡಿತು.

ಇಂಗ್ಲೆಂಡ್‌ ತಂಡದ ಮಾಜಿ ಬ್ಯಾಟ್ಸ್‌ಮನ್‌ ಜೇಮ್ಸ್‌ ವಿನ್ಸ್‌ ಅವರು ಕೇವಲ 15 ಎಸೆತಗಳಲ್ಲಿ 27 ರನ್‌ಗಳನ್ನು ಗಳಿಸಿ ಬುಲ್ಸ್‌ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಅಂದ ಹಾಗೆ ಡೆಲ್ಲಿ ಬುಲ್ಸ್‌ ತಂಡ ನೀಡಿದ್ದ ಗುರಿಯನ್ನು ಹಿಂಬಾಲಿಸಿದ್ದ ಬಾಂಗ್ಲಾ ಟೈಗರ್ಸ್‌ ತಂಡ 65 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್‌ಗೆ ಹೋಗಿದ್ದ ಲಿವಿಂಗ್‌ಸ್ಟೋನ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ತಮ್ಮ ತಂಡವನ್ನು ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಸಿದರು.

ಇಂಗ್ಲೆಂಡ್‌ ತಂಡಕ್ಕೆ ಲಿವಿಂಗ್‌ಸ್ಟೋನ್‌ ಕೀ ಬ್ಯಾಟ್ಸ್‌ಮನ್‌ʼ

ಕಳೆದ ಹಲವು ವರ್ಷಗಳಿಂದ ಇಂಗ್ಲೆಂಡ್‌ ವೈಟ್‌ಬಾಲ್‌ ತಂಡಕ್ಕೆ ಲಿಯಾಮ್‌ ಲಿವಿಂಗ್‌ಸ್ಟೋನ್‌ ಪ್ರಮುಖ ಕೀ ಬ್ಯಾಟ್ಸ್‌ಮನ್‌ ಆಗಿ ಆಡುತ್ತಿದ್ದಾರೆ. ಅಂದಹಾಗೆ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿಯೂ ತಮ್ಮ ಸಾಮರ್ಥ್ಯ ಏನೆಂಬುದನ್ನು ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಸಾಬೀತುಪಡಿಸಿದ್ದಾರೆ. ಅವರು ಐಪಿಎಲ್‌ ಟೂರ್ನಿಯಲ್ಲಿ ಆಡಿದ 162.45ರ ಸ್ಟೈಕ್‌ ರೇಟ್‌ನಲ್ಲಿ 939 ರನ್‌ಗಳನ್ನು ಸಿಡಿಸಿದ್ದಾರೆ. ಪಂಜಾಬ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳ ಪರ ಆಡಿರುವ ಅವರು ಆರು ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಆಧುನಿಕ ಟಿ20 ಕ್ರಿಕೆಟ್‌ನ ಸ್ಪೆಷಲಿಸ್ಟ್‌ ಆಗಿರುವ ಲಿಯಾಮ್‌, ಬಿಗ್‌ಬ್ಯಾಷ್‌, ದಕ್ಷಿಣ ಆಫ್ರಿಕಾ ಹಾಗೂ ಐಪಿಎಲ್‌ ಟೂರ್ನಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 2022ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಲಿವಿಂಗ್‌ಸ್ಟೋನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ತಂಡ 11.50 ಕೋಟಿ ರೂ. ಗಳಿಗೆ ಖರೀದಿಸಿತ್ತು. ಈ ಆವೃತ್ತಿಯಲ್ಲಿ ಅವರು 182.08ರ ಸರಾಸರಿಯಲ್ಲಿ 437 ರನ್‌ಗಳನ್ನು ಸಿಡಿಸಿದ್ದರು.