Monday, 25th November 2024

IPL 2025 Mega Auction: ಆರ್‌ಸಿಬಿಗೆ ಮರಳಿದ ಕನ್ನಡಿಗ ದೇವದತ್‌ ಪಡಿಕ್ಕಲ್‌!

Karnataka Opener Devdutt Padikkal Retuns Royal Challengers Bengaluru for 2 Crore

ನವದೆಹಲಿ: ಕರ್ನಾಟಕ ಹಾಗೂ ಭಾರತ ತಂಡದ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮರಳಿದ್ದಾರೆ. ಸೋಮವಾರ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ ಮೆಗಾ ಹರಾಜಿನ (IPL 2025 Mega Auction) ಎರಡನೇ ದಿನ ದೇವದತ್‌ ಪಡಿಕ್ಕಲ್‌ ಅವರನ್ನು ಬೆಂಗಳೂರು ಫ್ರಾಂಚೈಸಿ ಮೂಲ ಬೆಲೆ 2 ಕೋಟಿ ರೂ. ಗಳಿಗೆ ಖರೀದಿಸಿದೆ.

ಕರ್ನಾಟಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಅವರ ಹೆಸರು ಮೊದಲನೇ ದಿನವಾದ ಭಾನುವಾರವೇ ಚಾಲ್ತಿಗೆ ಬಂದಿತ್ತು. ಆದರೆ, ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಮನಸು ಮಾಡಿರಲಿಲ್ಲ. ಆದರೆ, ಎರಡನೇ ದಿನವಾದ ಸೋಮವಾರ ದೇವದತ್‌ ಪಡಿಕ್ಕಲ್‌ ಅವರು ಹೆಸರು ಮುನ್ನೆಲೆಗೆ ಬಂದಾಗ ಯಾವುದೇ ಫ್ರಾಂಚೈಸಿ ಖರೀದಿಸಲು ಮುಂದೆ ಬರಲಿಲ್ಲ. ಆದರೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಯಾವುದೇ ಪೈಪೋಟಿ ಇಲ್ಲದೆ ಕನ್ನಡಿಗನನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.

IPL 2025 Auction: ಆರ್‌ಸಿಬಿ ಸೇರಿದ ಟಿಮ್‌ ಡೇವಿಡ್‌, ರೊಮಾರಿಯೊ ಶೆಫರ್ಡ್‌!

2020ರಲ್ಲಿ ಪಡಿಕ್ಕಲ್‌ ಐಪಿಎಲ್‌ಗೆ ಪದಾರ್ಪಣೆ

ಕನ್ನಡಿಗ ದೇವದತ್‌ ಪಡಿಕ್ಕಲ್‌ ಅವರು 2020ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಅದರಂತೆ ತಮ್ಮ ಚೊಚ್ಚಲ ಆವೃತ್ತಿಯಲ್ಲಿಯೇ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಈ ಆವೃತ್ತಿಯಲ್ಲಿ ದೇವದತ್‌ ಪಡಿಕ್ಕಲ್‌ ಅವರು 473 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಈ ಸೀಸನ್‌ನಲ್ಲಿ ಅವರು ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.

ನಂತರ 2021ರ ಐಪಿಎಲ್‌ ಟೂರ್ನಿಗೂ ಕೂಡ ದೇವದತ್‌ ಪಡಿಕ್ಕಲ್‌ ಅವರನ್ನು ಆರ್‌ಸಿಬಿ ಉಳಿಸಿಕೊಂಡಿತ್ತು. ಈ ಸೀಸನ್‌ನಲ್ಲಿ ದೇವದತ್‌ ಪಡಿಕ್ಕಲ್‌ ತಮ್ಮ ಚೊಚ್ಚಲ ಐಪಿಎಲ್‌ ಶತಕವನ್ನು ಸಿಡಿಸಿದ್ದರು. ಈ ಸೀಸನ್‌ನಲ್ಲಿಯೂ ಅವರು ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ 411 ರನ್‌ಗಳನ್ನು ಕಲೆ ಹಾಕಿದ್ದರು. ಇದರ ಹೊರತಾಗಿಯೂ ಬೆಂಗಳೂರು ಫ್ರಾಂಚೈಸಿಯು 2022ರ ಮೆಗಹಾ ಹರಾಜಿಗೆ ಕನ್ನಡಿಗನನ್ನು ರಿಲೀಸ್‌ ಮಾಡಿತ್ತು.

ಇನ್ನು 2022ರ ಮೆಗಾ ಹರಾಜಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ ದೇವದತ್‌ ಪಡಿಕ್ಕಲ್‌ ಅವರನ್ನು ಖರೀದಿಸಿತ್ತು. ಆದರೆ, ಇಲ್ಲಿ ಅವರಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ಮೂಡಿ ಬಂದಿರಲಿಲ್ಲ. ಇವರ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಹಲವು ಬಾರಿ ಬದಲಾವಣೆಯಾಗಿತ್ತು. ನಂತರ 2023ರ ಐಪಿಎಲ್‌ ಟೂರ್ನಿಯ ಬಳಿಕ ಲಖನೌ ಸೂಪರ್‌ ಜಯಂಟ್ಸ್‌ ಟ್ರೇಡ್‌ ಡೀಲ್‌ ಮೂಲಕ ಪಡಿಕ್ಕಲ್‌ ಅವರನ್ನು ತೆಗೆದುಕೊಂಡು, ಆವೇಶ್‌ ಖಾನ್‌ ಅವರನ್ನು ಆರ್‌ಆರ್‌ಗೆ ಬಿಟ್ಟುಕೊಟ್ಟಿತ್ತು. 2023ರ ಐಪಿಎಲ್‌ ಟೂರ್ನಿಯಲ್ಲಿ ಪಡಿಕ್ಕಲ್‌ 11 ಇನಿಂಗ್ಸ್‌ಗಳಿಂದ 261 ರನ್‌ಗಳನ್ನು ಕಲೆ ಹಾಕಿದ್ದರು.

2024ರ ಐಪಿಎಲ್‌ ಟೂರ್ನಿಯಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಪರ ದೇವದತ್‌ ಪಡಿಕ್ಕಲ್‌ ಕೇವಲ 38 ರನ್‌ಗಳಿಗೆ ಸೀಮಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಲಖನೌ ಫ್ರಾಂಚೈಸಿ ರಿಲೀಸ್‌ ಮಾಡಿತ್ತು. ಆದರೆ, ಮೆಗಾ ಹರಾಜಿನಲ್ಲಿ ದೇವದತ್‌ ಪಡಿಕ್ಕಲ್‌ ಮೂಲ ಬೆಲೆ ಎರಡು ಕೋಟಿ ರೂ. ಗಳಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದರು.