ಮುಂಬಯಿ: ಇದೇ ಭಾನುವಾರ ಮತ್ತು ಸೋಮವಾರ ನಡೆಯುವ ಐಪಿಎಲ್(IPL 2025) 18ನೇ ಆವೃತ್ತಿಯ ಹರಾಜಿನಲ್ಲಿ ಸಂಭಾವನೆ ಇಳಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದ ಸಂಜಯ್ ಮಂಜ್ರೆಕರ್ಗೆ(Sanjay Manjrekar) ವೇಗಿ ಮೊಹಮ್ಮದ್ ಶಮಿ(Mohammed Shami) ವ್ಯಂಗ್ಯವಾಡುವ ಮೂಲಕ ತಕ್ಕ ತಿರುಗೇಟು ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಶಮಿ ವಿಚಾರವಾಗಿ ಮಾತನಾಡಿದ್ದ ಮಂಜ್ರೇಕರ್, ಐಪಿಎಲ್ನ ಹಲವು ಫ್ರಾಂಚೈಸಿಗಳು ಶಮಿ ಅವರ ಖರೀದಿಗೆ ಆಸಕ್ತಿ ಹೊಂದಿವೆ. ಗಾಯದ ಸಮಸ್ಯೆಯಿಂದ ಒಂದು ವರ್ಷ ವಿಶ್ರಾಂತಿ ಪಡೆದಿದ್ದ ಶಮಿ ಚೇತರಿಕೆ ಕಂಡು ಈಗಷ್ಟೇ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ. ಮತ್ತೊಮ್ಮೆ ಗಾಯಗೊಂಡು ಟೂರ್ನಿಯಿಂದ ಹಿಂದೆ ಸರಿದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಹೀಗಾಗಿ ಹಾರಾಜಿನಲ್ಲಿ ಅವರ ಸಂಭಾವನೆ ಇಳಿಕೆಯಾಗಬಹುದು ಎಂದು ಮಂಜ್ರೇಕರ್ ಹೇಳಿದ್ದರು.
ಇದಕ್ಕೆ ಶಮಿ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ‘ನಿಮ್ಮ ಭವಿಷ್ಯಕ್ಕಾಗಿ ಸ್ವಲ್ಪ ಜ್ಞಾನವನ್ನು ಉಳಿಸಿಕೊಳ್ಳಿ ಸಂಜಯ್ ಜೀ. ಯಾರಾದರೂ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಬಯಸಿದರೆ ಸರ್ (ಸಂಜಯ್) ಅವರನ್ನು ಭೇಟಿಯಾಗಿ’ಎಂದು ಬರೆದುಕೊಂಡು ತಮ್ಮ ವಿರುದ್ಧದ ಹೇಳಿಕೆಗೆ ವ್ಯಂಗವಾಡಿದ್ದಾರೆ. ಶಮಿ ಗಾಯದಿಂದಾಗಿ ಕಳೆದ ಬಾರಿಯ ಐಪಿಎಲ್ ಆಡಿರಲಿಲ್ಲ. 2022ರ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ 20 ವಿಕೆಟ್ ಕಬಳಿಸಿದ್ದರು. ಒಟ್ಟು 110 ಐಪಿಎಲ್ ಪಂದ್ಯಗಳನ್ನು ಆಡಿರುವ ಶಮಿ 127 ವಿಕೆಟ್ ಕಿತ್ತಿದ್ದಾರೆ. ಶಮಿ ಈ ಬಾರಿಯ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ.
Mohammad Shami's Instagram story. pic.twitter.com/PIruQ4oRcS
— Mufaddal Vohra (@mufaddal_vohra) November 21, 2024
ಶಮಿ ನಾಳೆಯಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಂಗಾಳ ಪರ ಕಣಕ್ಕಿಳಿಯಲಿದ್ದಾರೆ. ಕೆಲವು ಪಂದ್ಯವನ್ನಾಡಿದ ಬಳಿಕ ಶಮಿ ಆಸ್ಟ್ರೇಲಿಯಾದಲ್ಲಿರುವ ಟೀಮ್ ಇಂಡಿಯಾ ಸೇರುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಮೂರನೇ ಟೆಸ್ಟ್ ಪಂದ್ಯದಲ್ಲಿ ಶಮಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊದಲ ಟೆಸ್ಟ್ ಪಂದ್ಯದ ಬಳಿಕ 2ನೇ ಟೆಸ್ಟ್ ಆರಂಭಕ್ಕೆ 10 ದಿನಗಳ ಅಂತರವಿದೆ. ಆದರೆ ದ್ವಿತೀಯ ಪಂದ್ಯಕ್ಕೆ ಶಮಿ ಲಭ್ಯವಾಗುವುದು ಅನುಮಾನ.
ಇದನ್ನೂ ಓದಿ IND vs AUS: ಕೆಎಲ್ ರಾಹುಲ್ ಬಗ್ಗೆ ಸಕಾರಾತ್ಮಕ ಅಂಶ ಬಹಿರಂಗಪಡಿಸಿದ ಸುನೀಲ್ ಗವಾಸ್ಕರ್!
18ನೇ ಆವೃತ್ತಿಯ ಐಪಿಎಲ್(IPL Auction 2025) ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನ.24 ಮತ್ತು 25 ರಂದು ಸೌದಿ ಅರೇಬಿಯದ ಜೆಡ್ಡಾದಲ್ಲಿ ಹರಾಜು ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಹರಾಜಿನಲ್ಲಿ ದೊಡ್ಡ ಕ್ರಿಕೆಟ್ ತಾರೆಗಳಿಗಾಗಿ ಫ್ರಾಂಚೈಸಿಗಳು ಬಿಡ್ಡಿಂಗ್ ನಡೆಸಲಿದೆ. ರಿಷಭ್ ಪಂತ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಅರ್ಶದೀಪ್ ಸಿಂಗ್ ದೊಡ್ಡ ಮೊತ್ತಕ್ಕೆ ಹರಾಜಾಗುವ ಎಲ್ಲ ಸಾಧ್ಯತೆಗಳಿವೆ.