ಜೆಡ್ಡಾ(ಸೌದಿ ಅರೇಬಿಯಾ): ಐಪಿಎಲ್ 18ನೇ(IPL 2025) ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ ಇಂದು (ಭಾನುವಾರ) ಮತ್ತು ನಾಳೆ (ಸೋಮವಾರ) ಸೌದಿ ಅರೇಬಿಯಾದ ಜೆಡ್ಡಾದಲ್ಲಿ(Jeddah) ನಡೆಯಲಿದೆ. ಇಂದು ನಡೆಯುವ ಹರಾಜು ಪ್ರಕ್ರಿಯೆ ಮಧ್ಯಾಹ್ನ 3.30ರಿಂದ ಆರಂಭವಾಗಲಿದೆ. ಹರಾಜಿಗೂ ಮುನ್ನ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್(Rahul Dravid) 8 ವರ್ಷದ ಬಳಿಕ ಐಪಿಎಲ್‌ಗೆ ಮರಳಿದ ಸಂತಸವನ್ನು ಹಂಚಿಕೊಂಡಿದ್ದಾರೆ.
2014ರಲ್ಲಿ ರಾಜಸ್ಥಾನ ರಾಯಲ್ಸ್ ಕೋಚ್ ಆಗಿದ್ದ ದ್ರಾವಿಡ್ ಆ ಬಳಿಕ ಭಾರತದ 19 ವರ್ಷದೊಳಗಿನವರ ತಂಡ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕೋಚ್ ಮತ್ತು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕೆಲಸ ಮಾಡಿದ ಕಾರಣ ಐಪಿಎಲ್‌ನಿಂದ ದೂರವಿದ್ದರು. ಇದೀಗ ಮತ್ತೆ ತಾವು ಆಡಿದ ಮಾಜಿ ತಂಡಕ್ಕೆ ಕೋಚ್ ಆಗಿ ಮರಳಿದ್ದಾರೆ. 2012 ಮತ್ತು 2013 ರಲ್ಲಿ ದ್ರಾವಿಡ್ ರಾಜಸ್ಥಾನ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಒಂದು ಬಾರಿ ತಂಡವನ್ನು ಪ್ಲೇ ಆಪ್ಗೆ ಕೊಂಡೊಯ್ದಿದ್ದರು. ಚಾಂಪಿಯನ್ಸ್ ಲೀಗ್ನಲ್ಲಿ ಇವರ ನಾಯಕತ್ವದಲ್ಲಿ ತಂಡ ಫೈನಲ್ಗೇರಿತ್ತು. ರಾಜಸ್ಥಾನ್ ತಂಡದ ಪರ 40 ಪಂದ್ಯಗಳಲ್ಲಿ ನಾಯಕರಾಗಿದ್ದ ದ್ರಾವಿಡ್ 23 ಗೆಲುವು ಕಂಡಿದ್ದಾರೆ.
ಹರಾಜಿಗೂ ಮುನ್ನ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ದ್ರಾವಿಡ್, ವಿಶ್ವಕಪ್ ಬಳಿಕ ಮತ್ತೊಂದು ಸವಾಲು ಸ್ವೀಕರಿಸಲು ಇದು ಸರಿಯಾದ ಸಮಯ ಎಂದು ನನಗೆ ಅನಿಸುತ್ತದೆ. ಅದನ್ನು ಮಾಡಲು ರಾಜಸ್ಥಾನ ರಾಯಲ್ಸ್ ಸೂಕ್ತ ತಂಡ. ಮತ್ತೆ ರಾಯಲ್ಸ್ ತಂಡ ಸೇರಿರುವುದು ಖುಷಿ ನೀಡಿದೆ ಎಂದರು.
ಇದನ್ನೂ ಓದಿ IPL 2025 Auction: ಹರಾಜಿಗೂ ಮುನ್ನ 4 ವಿಕೆಟ್ ಕಿತ್ತು ಮಿಂಚಿದ ಚಹಲ್
ʼಸುಮಾರು 8 ರಿಂದ 9 ವರ್ಷಗಳ ಕಾಲ ನಾನು ಐಪಿಎಲ್ ಹರಾಜಿನಲ್ಲಿ ಭಾಗವಹಿಸಿರಲಿಲ್ಲ. ನಿಖರವಾಗಿ ಹೇಳಬೇಕೆಂದರೆ ನಾನು 2008 ರಲ್ಲಿ ಮೊದಲ ಹರಾಜಿನಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಆಗ ಅದೊಂದು ವಿಭಿನ್ನವಾದ ಅನುಭವವಾಗಿತ್ತು. ರಾಜಸ್ಥಾನ್ ತಂಡ ಬಲವಾದ ತಂಡವನ್ನೇ ಉಳಿಸಿಕೊಂಡಿದ್ದೇವೆ. ಇದರಿಂದಾಗಿ ನಾನು ಸ್ವಲ್ಪ ಆರಾಮವಾಗಿದ್ದೇನೆ. ಹರಾಜಿನ ಬಳಿಕ ಹೊಸ ಆಟಗಾರರನ್ನು ಭೇಟಿಯಾಗುತ್ತೇವೆ. ಹೊಸ ಸವಾಲುಗಳು ಯಾವಾಗಲೂ ಉತ್ತೇಜನಕಾರಿಯಾಗಿರುತ್ತವೆʼ ಎಂದು ದ್ರಾವಿಡ್ ಹೇಳಿದರು.
2 ದಿನಗಳ ಹರಾಜು ಪ್ರಕ್ರಿಯೆಯಲ್ಲಿ 367 ಭಾರತೀಯರು, 210 ವಿದೇಶಿಯರ ಸಹಿತ ಒಟ್ಟು 577 ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. 10 ತಂಡಗಳು 70 ವಿದೇಶಿಯರ ಸಹಿತ ಗರಿಷ್ಠ 204 ಆಟಗಾರರ ಖರೀದಿ ಮಾಡಬಹುದಾಗಿದೆ. ಪ್ರತಿ ತಂಡ ಕನಿಷ್ಠ 18ರಿಂದ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ.