ಬೆಂಗಳೂರು: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ ಅವರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಮರಳಲಿದ್ದಾರೆಂಬ ನಿರೀಕ್ಷೆ ಅಭಿಮಾನಿಗಳಲ್ಲಿ ದಟ್ಟವಾಗಿದೆ. ಅದಕ್ಕೆ ತಕ್ಕಂತೆ ಹರಾಜಿನಲ್ಲಿ ಕೆ ಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಸೇರಿದಂತೆ ಕ್ಯಾಪ್ಟನ್ಸಿ ಗುಣವಿರುವ ಆಟಗಾರರ ಖರೀದಿಗೆ ಫ್ರಾಂಚೈಸಿ ಮುಂದಾಗಿರಲಿಲ್ಲ. ಆದರೆ ಈಗ ವಿರಾಟ್ ಕೊಹ್ಲಿ (Virat Kohli) ಆರ್ಸಿಬಿ ತಂಡದ ನಾಯಕರಾಗುತ್ತಾರೆಯೇ ಎಂಬ ಪ್ರಶ್ನೆಗೆ ಹೆಡ್ ಕೋಚ್ ಆಂಡಿ ಫ್ಲವರ್ (Andy Flower) ಉತ್ತರಿಸಿದ್ದಾರೆ.
ವಿರಾಟ್ ಕೊಹ್ಲಿಗೆ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ನಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವ ವಹಿಸಿರುವ ಅಪಾರ ಅನುಭವವಿದೆ. ಅಲ್ಲದೆ ಪ್ರಸಕ್ತ ಆರ್ಸಿಬಿ ತಂಡದಲ್ಲಿರುವ ರಜತ್ ಪಾಟಿದಾರ್, ಭುವನೇಶ್ವರ್ ಕುಮಾರ್, ಕೃಣಾಲ್ ಪಾಂಡ್ಯ, ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ಗೂ ತಂಡವನ್ನು ಮುನ್ನಡೆಸಿರುವ ಸ್ವಲ್ಪಮಟ್ಟಿಗೆ ಅನುಭವ ಹೊಂದಿದ್ದಾರೆ.
ಇತ್ತೀಚೆಗೆ ಸ್ಪೋರ್ಟ್ಸ್ ತಕ್ ನಡೆಸಿದ ಸಂದರ್ಶನದಲ್ಲಿ ಆರ್ಸಿಬಿ ನಿರ್ದೇಶಕ ಬೊಬಾಟ್ ಅವರು ತಂಡದ ನಾಯಕತ್ವದ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದು ಹೇಳಿದ್ದರು. ಆಂಡಿ ಫ್ಲವರ್ ಅವರು ಕೂಡ ಇದೇ ನಿಲುವನ್ನು ತಿಳಿಸುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
“ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳೆಲ್ಲ ಫ್ರಾಂಚೈಸಿಯ ಅಂತಿಮ ನಿರ್ಧಾರಕ್ಕೆ ಭಾರೀ ಕುತೂಹಲದಿಂದ ಕಾಯುತ್ತಿದ್ದೀರಿ, ನಾವು ಈಗ ಮುಂದಿನ ಮೂರು ವರ್ಷಗಳ ಹೊಸ ಯುಗ ಆರಂಭಿಸಲು ಹೊರಟಿದ್ದೇವೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ನಿಮ್ಮಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿದೆ ಎಂಬುದನ್ನು ಅರಿತಿದ್ದೇವೆ,” ಎಂದು ಆರ್ಸಿಬಿ ಹೆಡ್ ಕೋಚ್ ಹೇಳಿದ್ದಾರೆ.
“ನೀವು ಈಗ ನನ್ನನ್ನು ಏನು ಬೇಕಾದರೂ ಕೇಳಬಹುದು. ಆದರೆ ಇದುವರೆಗೂ ಮುಂದಿನ ಆವೃತ್ತಿಯಲ್ಲಿ ಆರ್ಸಿಬಿ ತಂಡದ ನಾಯಕರು ಯಾರಾಗುತ್ತಾರೆ ಎಂಬುದರ ಕುರಿತು ಚರ್ಚೆಗಳಾಗಿಲ್ಲ,” ಎಂದು ಆಂಡಿ ಫ್ಲವರ್ ಸ್ಪಷ್ಟಪಡಿಸಿದ್ದಾರೆ.
2013ರ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾಯಂ ನಾಯಕತ್ವ ವಹಿಸಿಕೊಂಡ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ, 2016ರಲ್ಲಿ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ್ದರು. ಆದರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಚೊಚ್ಚಲ ಚಾಂಪಿಯನ್ ಪಟ್ಟ ಗೆಲ್ಲುವ ಅವಕಾಶ ತಪ್ಪಿಸಿಕೊಂಡರು.
2021ರ ನಂತರ ಆರ್ಸಿಬಿ ಕ್ಯಾಪ್ಟನ್ಸಿ ತೊರೆದ ನಂತರ ಫಾಫ್ ಡುಪ್ಲೆಸಿಸ್ ನೂತನ ಸಾರಥಿಯಾದರು. 2024ರ ಐಪಿಎಲ್ ಟೂರ್ನಿಯಲ್ಲಿ ಡುಪ್ಲೆಸಿಸ್ ಗಾಯಕ್ಕೆ ಒಳಗಾದ ಸಮಯದಲ್ಲಿ 4 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು. ಈಗ ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ವಿರಾಟ್ ಕೊಹ್ಲಿಗೆ ಮರಳಿ ಕ್ಯಾಪ್ಟನ್ಸಿ ನೀಡಿ ಚೊಚ್ಚಲ ಟ್ರೋಫಿ ಗೆಲ್ಲಲು ಫ್ರಾಂಚೈಸಿ ಮುಂದಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.
ಈ ಸುದ್ದಿಯನ್ನು ಓದಿ: IPL 2025: ಆರ್ಸಿಬಿಗೆ ಬೆಸ್ಟ್ ಓಪನಿಂಗ್ ಬ್ಯಾಟರ್ಸ್ ಆರಿಸಿದ ಆಕಾಶ್ ಚೋಪ್ರಾ!