Thursday, 31st October 2024

IPL 2025 Retentions: ರಿಟೇನ್‌ ಕುತೂಹಲಕ್ಕೆ ಇಂದು ತೆರೆ; ಎಷ್ಟು ಕೋಟಿ ವೆಚ್ಚ ಮಾಡಬಹುದು?

ಮುಂಬಯಿ: ಐಪಿಎಲ್‌ ಫ್ರಾಂಚೈಸಿಗಳು ಉಳಿಕೆ ಆಟಗಾರರ(IPL 2025 Retentions) ಅಂತಿಮ ಪಟ್ಟಿ ಪ್ರಕಟಿಸಲು ಇಂದು ಗುರುವಾರ ಅಂತಿಮ ದಿನವಾಗಿದೆ. ಸಂಜೆ 5 ಗಂಟೆಯೊಳಗೆ ಎಲ್ಲ 10 ಫ್ರಾಂಚೈಸಿಗಳು ಉಳಿಕೆ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಒಪ್ಪಿಸಲಿದೆ. ರಿಟೇನ್‌ಗಾಗಿ ಫ್ರಾಂಚೈಸಿಗಳು ಎಷ್ಟು ಮೊತ್ತ ವೆಚ್ಚ ಮಾಡಬಹುದು ಎಂಬ ಮಾಹಿತಿ ಹೀಗಿದೆ.

ಐಪಿಎಲ್‌ ರೀಟೆನ್ಷನ್‌ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಒಟ್ಟಾರೆ ಆಟಗಾರರ ಖರೀದಿಗೆ ತಂಡಗಳು ₹120 ಕೋಟಿ ವೆಚ್ಚ ಮಾಡಬಹುದು. ರಿಟೇನ್‌ಗಾಗಿ ಫ್ರಾಂಚೈಸಿಯೊಂದು ಒಟ್ಟು 75 ಕೋಟಿ ವರೆಗೂ ವೆಚ್ಚ ಮಾಡಬಹುದಾಗಿದೆ. ಫ್ರಾಂಚೈಸಿಯೂ ಯಾವುದೇ ಆಟಗಾರನಿಗೆ ಬಿಸಿಸಿಐ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಮೊತ್ತ ನೀಡಬಹುದು. ಆದರೆ 75 ಕೋಟಿ ಮೀರುವಂತಿಲ್ಲ. ಬಿಸಿಸಿಐ ನಿಗದಿಯ ಪಡಿಸಿದ ಮೊತ್ತ ಮೊದಲ ಆಟಗಾರನಿಗೆ 18 ಕೋಟಿ, 2ನೇ ಆಟಗಾರನಿಗೆ 14 ಕೋಟಿ, 3ನೇ ಆಟಗಾರನಿಗೆ 11 ಕೋಟಿ, 4 ಹಾಗೂ 5ನೇ ಆಟಗಾರನಿಗೆ ಕ್ರಮವಾಗಿ 18 ಕೋಟಿ ಹಾಗೂ 14 ಕೋಟಿ ನೀಡಬಹುದಾಗಿದೆ. ಅಂ.ರಾ. ಕ್ರಿಕೆಟ್‌ ಆಡದ ಆಟಗಾರನನ್ನು 4 ಕೋಟಿಗೆ ಉಳಿಸಿಕೊಳ್ಳಬಹುದು.

ಇದನ್ನೂ ಓದಿ IPL 2025: ಲಕ್ನೋಗೆ ರಾಹುಲ್‌ ಗುಡ್ ಬೈ; ಆರ್‌ಸಿಬಿ ಸೇರುವುದು ಫಿಕ್ಸ್‌

ರಿಟೇನ್‌ನಲ್ಲಿ ಯಾವುದೇ ಫ್ರಾಂಚೈಸಿ 6ಕ್ಕಿಂತ ಕಡಿಮೆ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡರೆ, ಆಗ ಮೆಗಾ ಹರಾಜಿನಲ್ಲಿ ರೈಟ್‌ ಟು ಮ್ಯಾಚ್‌(ಆರ್‌ಟಿಎಂ) ಅವಕಾಶ ಸಿಗುತ್ತದೆ. ಉದಾಹರಣೆಗೆ ತಂಡವೊಂದು 4 ಆಟಗಾರರನ್ನು ರಿಟೇನ್‌ ಮಾಡಿಕೊಂಡರೆ ಹರಾಜಿನಲ್ಲಿ ಇನ್ನಿಬ್ಬರು ಆಟಗಾರರನ್ನು ಆರ್‌ಟಿಎಂ ಕಾರ್ಡ್‌ ಬಳಸಿ ತಂಡಕ್ಕೆ ಸೇರಿಸಿಕೊಳ್ಳಬಹುದು. ಅಂದರೆ ಮೂಲ ತಂಡವೊಂದು ಬಿಡುಗಡೆಗೊಳಿಸಿದ ಆಟಗಾರನಿಗೆ ಬೇರೆ ತಂಡಗಳು ಬಿಡ್‌ ಸಲ್ಲಿಸಿದರೆ, ಆ ಆಟಗಾರನನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶವಿದೆ.

ವೇತನ ಕಡಿತಕ್ಕೆ ಮುಂದಾದ ಗಿಲ್‌

ಗುಜರಾಟ್‌ ಟೈಟಾನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌ ಅವರು ತಂಡದಲ್ಲಿ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ವೇತನವನ್ನೇ ಕಡಿತ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಗಿಲ್‌ರನ್ನು ಫ್ರಾಂಚೈಸಿ 2ನೇ ಆದ್ಯತೆಯ ಆಟಗಾರನಾಗಿ ಉಳಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ. ರಶೀದ್‌ ಖಾನ್‌ (18 ಕೋಟಿ ರೂ.), ಶುಭಮನ್‌ (14 ಕೋಟಿ), ಬ್ಯಾಟರ್‌ ಸಾಯಿ ಸುದರ್ಶನ್‌ (11 ಕೋಟಿ), ಅನ್‌ ಕ್ಯಾಪ್ಡ್ ಆಟಗಾರರಾದ ರಾಹುಲ್‌ ತೆವಾಟಿಯಾ (18 ಕೋಟಿ), ಶಾರುಖ್‌ ಖಾನ್‌ (4 ಕೋಟಿ) ಅವರನ್ನು ತಂಡದಲ್ಲೇ ಉಳಿದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ ತಂಡ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನೇ ಕೈಬಿಡಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಉಳಿಕೆ ವಿಚಾರದಲ್ಲಿ ಫ್ರಾಂಚೈಸಿ ಮತ್ತು ಶ್ರೇಯಸ್‌ ಮಧ್ಯೆ ನಡೆದ ಮಾತುಕತೆ ವಿಫ‌ಲವಾದ ಕಾರಣ ಅವರು ತಂಡ ತೊರೆಯುವ ಸಾಧ್ಯತೆಯಿದೆ. ಲಕ್ನೋ ತಂಡ ರಾಹುಲ್‌ ಅವರನ್ನು ರಿಟೇನ್‌ ಮಾಡಿಕೊಳ್ಳಲು ಮುಂದಾದರೂ ರಾಹುಲ್‌ ವೈಯಕ್ತಿಕ ಕಾರಣ ನೀಡಿ ತಂಡ ತೊರೆದಿದ್ದಾರೆ ಎನ್ನಲಾಗಿದೆ.