ಹೈದರಾಬಾದ್: 18ನೇ ಆವೃತ್ತಿಯ ಐಪಿಎಲ್(IPL 2025) ಆಟಗಾರರ ಮೆಗಾ ಹರಾಜಿಗೂ ಮುನ್ನ ಎಲ್ಲ ಫ್ರಾಂಚೈಸಿಗಳು ಆಟಗಾರರ ರೀಟೈನ್ ಪಟ್ಟಿ ಸಿದ್ಧಪಡಿಸುತ್ತಿವೆ. ಸನ್ರೈಸರ್ಸ್ ಹೈದರಾಬಾದ್ (SRH) ತಂಡ ಹೆನ್ರಿಕ್ ಕ್ಲಾಸೆನ್, ಪ್ಯಾಟ್ ಕಮಿನ್ಸ್ ಮತ್ತು ಅಭಿಷೇಕ್ ಶರ್ಮಾರನ್ನು ತಂಡದಲ್ಲಿ ಉಳಿಸಿಕೊಳ್ಳುವ ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರನ್ನು ರೀಟೈನ್ ಮಾಡಲಿದೆ ಎನ್ನಲಾಗಿದೆ. ಪಂತ್ಗೆ 18, ಅಕ್ಷರ್ಗೆ 14, ಕುಲದೀಪ್ಗೆ 11 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಕ್ರಿಕ್ಇನ್ಫೋ ಪ್ರಕಾರ, ವಿಕೆಟ್ಕೀಪರ್ ಬ್ಯಾಟ್ಸ್ಮನ್ ಹೆನ್ರಿಕ್ ಕ್ಲಾಸೆನ್ ಅವರನ್ನು ಮೊದಲ ಆಯ್ಕೆಯಾಗಿ ಹೈದರಾಬಾದ್ ತನ್ನಲ್ಲಿ ಉಳಿಸಿಕೊಳ್ಳಲಿದೆ. ಅವರಿಗೆ 23 ಕೋಟಿ ರೂ.ನೀಡಿ ಉಳಿಸಿಕೊಳ್ಳುತ್ತಿದೆ. ಆಸ್ಟ್ರೇಲಿಯಾದ ಆಲ್ರೌಂಡರ್ ಪ್ಯಾಟ್ ಕಮ್ಮಿನ್ಸ್ 18 ಕೋಟಿ, ಅಭಿಷೇಕ್ ಶರ್ಮಾ 14 ಕೋಟಿ ರೂ.ನೀಡಿ ರಿಟೆನ್ಶನ್ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ.
ರಿಟೇನ್ ಪಟ್ಟಿ ಅಂತಿಮಗೊಳಿಸಲು ತಂಡಗಳಿಗೆ ಬಿಸಿಸಿಐ ನವೆಂಬರ್ 15ರವರೆಗೆ ಸಮಯ ನೀಡುವ ನಿರೀಕ್ಷೆ ಇದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಡಿಸೆಂಬರ್ 1ರಂದು ಐಸಿಸಿಯ ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹೀಗಾಗಿ ಇದಕ್ಕೂ ಮುನ್ನ ನವೆಂಬರ್ನಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿಸುವುದು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯ ಯೋಜನೆಯಾಗಿದೆ. ಮೆಗಾ ಹರಾಜು ಪ್ರಕ್ರಿಯೆ(IPL Auction) ನವೆಂಬರ್ 3 ಅಥವಾ 4ನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ IPL 2025 : ಸೌದಿ ಅರೇಬಿಯಾ ಅಲ್ಲ! ಈ ದೇಶದಲ್ಲಿ ಈ ಬಾರಿ ಐಪಿಎಲ್ ಮೆಗಾ ಹರಾಜು
ಪ್ರತಿ ತಂಡಗಳ ಬಜೆಟ್ ಮಿತಿ 120 ಕೋಟಿ ರೂ.ಗೆ ಏರಿಸಲಾಗಿದೆ. ಆದರೆ ಗರಿಷ್ಠ 5 ಆಟಗಾರರನ್ನು ರಿಟೇನ್ ಮಾಡಿದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಯಾಕೆಂದರೆ 5 ಆಟಗಾರರ ರಿಟೇನ್ಗೆ ಕ್ರಮವಾಗಿ 18, 14, 11, 18, 14 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು 3 ಆಟಗಾರರನ್ನಷ್ಟೇ ರಿಟೇನ್ ಮಾಡಿದರೆ, ಹರಾಜಿನಲ್ಲಿ 3 ಆರ್ಟಿಎಂ ಬಳಸಬಹುದಾಗಿದೆ. 4 ಮತ್ತು 5ನೇ ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ 18 ಮತ್ತು 14 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ! ಹೀಗಾಗಿ ಫ್ರಾಂಚೈಸಿಗಳಿಗೆ ಹರಾಜಿನ ವೇಳೆ ಕಡಿಮೆ ಮೊತ್ತ ಉಳಿಯಲಿದೆ.
ಈ ಹಿಂದೆ ಇದ್ದ ಆರ್ಟಿಎಂ ನಿಯಮದ ಪ್ರಕಾರ ಆಟಗಾರನೊಬ್ಬ ಹರಾಜಿನಲ್ಲಿ ತನ್ನ ಮಾರುಕಟ್ಟೆ ಮೌಲ್ಯದೊಂದಿಗೆ ಮೂಲ ತಂಡಕ್ಕೆ ಮರಳಬಹುದಾಗಿತ್ತು. ಆದರೆ ಈಗಿನ ಬದಲಾವಣೆಯಿಂದಾಗಿ ಆಟಗಾರನ ಮೊತ್ತ ಏರಿಕೆಯಾಗುತ್ತದೆ. ಇದು ಮೂಲ ತಂಡಕ್ಕೆ ಆತನನ್ನು ಉಳಿಸಿಕೊಳ್ಳಲು ಕಷ್ಟವಾಗಲಿದೆ. ಈಗಾಗಲೇ ಈ ಬಗ್ಗೆ ಫ್ರಾಂಚೈಸಿಗಳು ಅಪಸ್ವರವೆತ್ತಿದೆ.